HEALTH TIPS

ಯಾವುದೇ ಶೀರ್ಷಿಕೆಯಿಲ್ಲ

*ಶರನ್ನವರಾತ್ರಿ ಆಚರಣೆ ಮತ್ತು ಮಹತ್ವ* ~~~~~~~~~~~~~~~~~~~~ ನವರಾತ್ರಿ ಎಲ್ಲ ಜನರೂ ಆಚರಿಸುವ ಒಂದು ವಿಶಿಷ್ಟವಾದ ಹಬ್ಬ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನವರಾತ್ರಿ ಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಶಕ್ತಿಯ ಆರಾಧನೆ ಈ ಹಬ್ಬದ ವೈಶಿಷ್ಟ್ಯ. 9 ದಿನಗಳ ಕಾಲ ಆಚರಿಸುವ ಈ ಪರ್ವಕ್ಕೆ ದುರ್ಗೋತ್ಸವ ಎಂದೂ ಕರೆಯುತ್ತಾರೆ. ನವರಾತ್ರಿ ಒಂಭತ್ತು ರಾತ್ರಿಗಳ ಸಮೂಹ. ಈಗ ಎರಡು ನವರಾತ್ರಿ ವಿಶೇಷವಾಗಿದ್ದು, ಆಚರಣೆಯಲ್ಲಿದೆ. ಒಂದು ಶರನ್ನವರಾತ್ರಿ ಇನ್ನೊಂದು ಚೈತ್ರ ನವರಾತ್ರಿ. ಈಗ ನಾವು ಆಚರಿಸುವುದು ಶರನ್ನವರಾತ್ರಿ. ನವರಾತ್ರಿಯ ಒಂದೊಂದು ದಿನವೂ ಬಹಳ ವಿಶೇಷವಾಗಿ ನಿಲ್ಲುತ್ತದೆ. 9 ದಿನಗಳ ಕಾಲ ಆದಿ ಶಕ್ತಿಯನ್ನು ನವ ವಿಧದಲ್ಲಿ ಪೂಜಿಸಲಾಗುತ್ತದೆ. ಮೊದಲ ದಿನ ಅಂದರೆ ಪಾಡ್ಯದ ದಿನ ಯೋಗನಿದ್ರಾ ದುರ್ಗಾ ಪೂಜಾ, ಎರಡನೇ ದಿನ ದೇವಜಾತ ದುರ್ಗಾಪೂಜಾ, ಮೂರನೇ ದಿನ ಮಹಿಷಾಸುರ ಮರ್ಧಿನಿ ದುರ್ಗಾಪೂಜಾ, ನಾಲ್ಕನೇ ದಿನ ಶೈಲ ಜಾತಾ ದುರ್ಗಾಪೂಜಾ, ಐದನೇ ದಿನ ದೂಮೃಹಾ ದುರ್ಗಾಪೂಜಾ, ಆರನೇ ದಿನ ಚಂಡ-ಮುಂಡ ಹಾ ದುರ್ಗಾಪೂಜಾ, ಏಳನೇ ದಿನ ರಕ್ತ ಬೀಜ ಹಾ ದುರ್ಗಾಪೂಜಾ, ಎಂಟನೇ ದಿನ ನಿಶುಂಭ ಹಾ ದುರ್ಗಾಪೂಜಾ.(ದುರ್ಗಾಷ್ಠಮಿ), ಒಂಭತ್ತನೇ ದಿನ ಶುಂಭ ಹಾ ದುರ್ಗಾಪೂಜಾ. ಏಳನೇ ದಿನ ಅಂದರೆ ಸಪ್ತಮಿಯಿಂದ ತ್ರಿದಿನ ದುರ್ಗಾಪೂಜಾ ಎಂದೂ ಮಾಡುತ್ತಾರೆ. ಮಹಾಕಾಳಿ, ಮಹಾಲಕ್ಷ್ಮಿ,ಮಹಾಸರಸ್ವತಿ ಪೂಜೆ ಮಾಡಲಾಗುತ್ತದೆ. ನವಮಿಯಂದು ಆಯುಧಗಳನ್ನು ಪೂಜಿಸಲಾಗುತ್ತದೆ, ಹತ್ತನೇ ದಿನ ವಿಜಯದಶಮಿ. ಮಹಾದುರ್ಗೆ ರಾಕ್ಷಸರನ್ನು ಸಂಹರಿಸಿ ವಿಜಯವನ್ನು ಸಾಧಿಸಿದ ದಿನ. ಇದು ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ರಾವಣನನ್ನು ಕೊಂದ ದಿನ ಹಾಗೂ ದ್ವಾಪರ ಯುಗದಲ್ಲಿ ಪಾಂಡವರು ಕೌರವರನ್ನು ಸೋಲಿಸಿದ ದಿನವೂ ಹೌದು. ಆದ್ದರಿಂದ ಇವರೆಲ್ಲರ ವಿಜಯದ ಸಂಕೇತವಾಗಿ ಈ ದಿನವನ್ನು ವಿಜಯದಶಮಿ ಎಂದು ಆಚರಿಸುವುದು ಸಂಪ್ರದಾಯ. *ಘಟಸ್ಥಾಪನೆಯ ಮಹತ್ವ* : ನವರಾತ್ರಿಯನ್ನು ಏಕೆ ಆಚರಿಸುತ್ತೇವೆ? ಬ್ರಹ್ಮಾಂಡವು ಒಂದು ಘಟ(ಮಡಕೆ)ಯಂತಿದೆ. ಈ ಘಟರೂಪಿ ಬ್ರಹ್ಮಾಂಡದಲ್ಲಿ ಅವತರಿಸಿದ ತೇಜಸ್ವೀ ಆದಿಶಕ್ತಿಯನ್ನು, ಒಂಬತ್ತು ದಿನಗಳ ಕಾಲ ನಿರಂತರ ಉರಿಯುವ ನಂದಾದೀಪದ ಮಾಧ್ಯಮದಿಂದ ಪೂಜಿಸುವುದೇ ನವರಾತ್ರಿಯನ್ನು ಆಚರಿಸುವ ಉದ್ದೇಶವಾಗಿದೆ. ಮನೆಯಲ್ಲಿ ಘಟಪೂಜೆಯನ್ನು ಮಾಡಿದರೆ, ಶ್ರೀ ದುರ್ಗಾ ದೇವಿಯ ತತ್ವದ ಲಾಭವಾಗುವುದಲ್ಲದೆ ಮನೆಯ ವಾಸ್ತು ಕೂಡ ಚೈತನ್ಯಮಯವಾಗುತ್ತದೆ. *ಅಖಂಡ ದೀಪಪ್ರಜ್ವಲನೆ:* ಭಕ್ತರು ಒಂಬತ್ತು ದಿನಗಳ ಕಾಲ ಉರಿಸುವ ದೀಪ, ನವರಾತ್ರ್ಯೋತ್ಸವದ ವೈಶಿಷ್ಟ್ಯ. ಗುಜರಾತಿನಲ್ಲಿ, ನವರಾತ್ರಿಯ ಸಮಯದಲ್ಲಿ ಅನೇಕ ತೂತುಗಳಿರುವ ಮಣ್ಣಿನ ಮಡಕೆಯಲ್ಲಿ ದೀಪವನ್ನು ಇಟ್ಟು ಪೂಜಿಸಲಾಗುತ್ತದೆ. ಸ್ತ್ರೀಯರ ಮಾತೃಶಕ್ತಿಯ ಪ್ರತೀಕವಾಗಿ ಒಂಬತ್ತು ದಿನಗಳ ಕಾಲ ಈ ‘ದೀಪಗರ್ಭ’ವನ್ನು ಪೂಜಿಸುತ್ತಾರೆ. ನವರಾತ್ರಿ ಮತ್ತು ಇತರ ಧಾರ್ಮಿಕ ವಿಧಿಗಳಲ್ಲಿ ದೀಪವು ಅಖಂಡವಾಗಿ ಉರಿಯುತ್ತಿರುವುದು ಪೂಜಾವಿಧಿಯ ಭಾಗವಾಗಿರುತ್ತದೆ. ಗಾಳಿ, ದೀಪದೆಣ್ಣೆ ಕಮ್ಮಿ ಆಗುವುದು, ‘ಬತ್ತಿ’ಗೆ ಕಾಡಿಗೆ ಹಿಡಿಯುವುದು ಮುಂತಾದ ಕಾರಣಗಳಿಂದ ದೀಪವು ಆರಿ ಹೋದರೆ, ಆ ಕಾರಣಗಳಿಗೆ ಸೂಕ್ತ ಪರಿಹಾರ ಮಾಡಿ, ದೀಪವನ್ನು ಪುನಃ ಉರಿಸಬೇಕು. ಇದಲ್ಲದೇ, ದೀಪವು ಆರಿ ಹೋಗಿದ್ದಕ್ಕೆ, ಪ್ರಾಯಶ್ಚಿತ್ತವಾಗಿ ಪೂಜಿಸಲ್ಪಡುವ ದೇವತೆಯ ನಾಮಜಪವನ್ನು ೧೦೮ ಅಥವಾ ೧೦೦೦ಸಲ ಜಪಿಸಬೇಕು. ನವರಾತ್ರಿಯ ಸಮಯದಲ್ಲಿ ಶ್ರೀ ದುರ್ಗಾ ದೇವಿಯ ನಾಮಜಪವನ್ನು ಮಾಡುವುದರ ಮಹತ್ವ: ನವರಾತ್ರಿಯ ಸಮಯದಲ್ಲಿ ಹೆಚ್ಚು ಪ್ರಮಾಣದಲ್ಲಿ ಕಾರ್ಯರತವಾಗುವ ಶಕ್ತಿತತ್ವವನ್ನು ಗ್ರಹಿಸಲು ಈ ಸಮಯದಲ್ಲಿ ‘ಶ್ರೀ ದುರ್ಗಾದೇವ್ಯೈ ನಮಃ |’ ನಾಮಜಪವನ್ನು ಸತತವಾಗಿ ಮಾಡಬೇಕು. *ನವರಾತ್ರಿಯ ಆಚರಣೆ ಮತ್ತು ಮಹತ್ವ* -: ನಾರದರು, ರಾಮನಿಂದ ರಾವಣನ ವಧೆಯಾಗಬೇಕೆಂದು ರಾಮನಿಗೆ ಈ ವ್ರತ ವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಮಾಡಿದ ಮೇಲೆಯೇ ರಾಮನು ರಾವಣನನ್ನು ಸಂಹರಿಸಿದನು. ದೇವಿಯು ಮಹಿಷಾಸುರನೆಂಬ ರಾಕ್ಷಸನೊಂದಿಗೆ ಪಾಡ್ಯದಿಂದ ನವಮಿಯವರೆಗೆ ಒಂಬತ್ತು ದಿನಗಳ ಕಾಲ ಯುದ್ಧ ಮಾಡಿ ನವಮಿಯ ರಾತ್ರಿ ಅವನನ್ನು ಸಂಹರಿಸಿದಳು. ಅಂದಿನಿಂದ ಅವಳಿಗೆ ಮಹಿಷಾಸುರ ಮರ್ದಿನಿ ಎಂಬ ಹೆಸರು ಬಂದಿತು. ಈ ವ್ರತಕ್ಕೆ ಅನೇಕ ಕುಟುಂಬಗಳಲ್ಲಿ ಕುಲಾಚಾರದ ಸ್ವರೂಪವಿರುತ್ತದೆ. ಆಶ್ವಯುಜ ಶುಕ್ಲ ಪಾಡ್ಯದಂದು ಈ ವ್ರತವು ಪ್ರಾರಂಭವಾಗುತ್ತದೆ. ಮನೆಯಲ್ಲಿ ಪವಿತ್ರ ಜಾಗದಲ್ಲಿ ಒಂದು ವೇದಿಕೆಯನ್ನು (ಪೀಠವನ್ನು) ತಯಾರಿಸಿ ಅದರ ಮೇಲೆ ಸಿಂಹಾಸನಾರೂಢಳಾದ ಅಷ್ಟ ಭುಜದೇವಿಯನ್ನು ಹಾಗೂ ದೇವಿಯ ಒಂಬತ್ತು ರೂಪಗಳ ಮಾರಕ ಲಹರಿಗಳ ಸಂಯೋಗದಿಂದ ಘನೀಕರಣವಾದ ನವಾರ್ಣವ ಯಂತ್ರವನ್ನು ಸ್ಥಾಪಿಸುತ್ತಾರೆ. ಯಂತ್ರದ ಪಕ್ಕದಲ್ಲಿ ಕಲಶ ಸ್ಥಾಪನೆ ಮಾಡಿ ಅದಕ್ಕೂ ದೇವಿಗೂ ವಿಧಿವತ್ತಾಗಿ ಪೂಜೆಯನ್ನು ಮಾಡುತ್ತಾರೆ. ನವರಾತ್ರಿ ಮಹೋತ್ಸವದಲ್ಲಿ ಕುಲಾಚಾರದಂತೆ ಕಲಶಸ್ಥಾಪನೆ ಮತ್ತು ಮಾಲಾಬಂಧನ ಮಾಡಬೇಕು. ಹೊಲದಲ್ಲಿನ ಮಣ್ಣನ್ನು ತಂದು ಅದರಿಂದ ಎರಡು ಬೆರಳಿನ ಗಾತ್ರದಷ್ಟು ಚೌಕಾಕಾರವನ್ನು ಮಾಡಿ ಅದರಲ್ಲಿ ಐದು ಅಥವಾ ಏಳು ವಿಧದ ಧಾನ್ಯಗಳನ್ನು ಹಾಕಬೇಕು. (ಜೋಳ, ಗೋಧಿ, ಎಳ್ಳು, ಹೆಸರು, ಅಗಸೆ, ನವಣೆ, ಕಡಲೆ ಇವು ಸಪ್ತಧಾನ್ಯಗಳಾಗಿವೆ.) ಹಾಗೆಯೇ ಮಣ್ಣಿನ ಅಥವಾ ತಾಮ್ರದ ಕಲಶದಲ್ಲಿ ನೀರು, ಗಂಧ, ಹೂವು, ಗರಿಕೆ, ಅಕ್ಷತೆ, ಅಡಿಕೆ, ಪಂಚರತ್ನಗಳು ಅಥವಾ ನಾಣ್ಯ ಮುಂತಾದ ವಸ್ತುಗಳನ್ನು ಹಾಕಬೇಕು ಮತ್ತು ಒಂದು ಮಾಲೆಯನ್ನು ಕಲಶದ ಒಳಗೆ ಬರುವಂತೆ ಕಟ್ಟಬೇಕು. ಈ ವ್ರತವು ಆಶ್ವಯುಜ ಶುಕ್ಲ ನವಮಿಯವರೆಗೆ ನಡೆಯುತ್ತದೆ. ೯ ದಿನವೂ ಕುಮಾರಿಯ ಪೂಜೆಮಾಡಿ ಅವಳಿಗೆ ಭೋಜನವನ್ನು ಕೊಡಬೇಕು. ಮುತ್ತೈದೆಯೆಂದರೆ ಪ್ರಕಟ ಶಕ್ತಿ ಮತ್ತು ಕುಮಾರಿ ಎಂದರೆ ಅಪ್ರಕಟ ಶಕ್ತಿ. ಮುತ್ತೈದೆಯಲ್ಲಿ ಪ್ರಕಟ ಶಕ್ತಿಯು ಸ್ವಲ್ಪ ಅಪವ್ಯಯ ವಾಗುವುದರಿಂದ ಅವಳಿಗಿಂತ ಕುಮಾರಿಯಲ್ಲಿ ಒಟ್ಟು ಶಕ್ತಿಯ ಪ್ರಮಾಣವು ಹೆಚ್ಚಿರುತ್ತದೆ. ಅಖಂಡ ದೀಪಪ್ರಜ್ವಲನ, ಆ ದೇವತೆಯ ಮಹಾತ್ಮೆಯ ಪಠಣ (ಚಂಡೀ ಪಾಠ), ಲಲಿತಾಪೂಜೆ, ಸರಸ್ವತಿ ಪೂಜೆ, ಉಪವಾಸ, ಜಾಗರಣೆ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಅವರವರ ಸಾಮರ್ಥ್ಯಕ್ಕನುಸಾರ ನವರಾತ್ರಿಯನ್ನು ಆಚರಿಸುತ್ತಾರೆ. *ದಸರಾ* :- ಮೂರುವರೆ ಶುಭ ಮುಹೂರ್ತಗಳಲ್ಲಿ ‘ದಸರಾ’ ಕೂಡ ಒಂದಾಗಿದೆ. ದಸರೆಯನ್ನು ‘ದಶಹರಾ’ ಎಂದೂ ಕರೆಯುತ್ತಾರೆ. ‘ದಶ’ ಅಂದರೆ ಹತ್ತು ಮತ್ತು ‘ಹರಾ’ ಅಂದರೆ ಸೋಲಿಸಿದ್ದು ಎಂದು ಅರ್ಥ ಇದೇ. ನವರಾತ್ರಿಯ ಒಂಬತ್ತು ದಿನಗಳಲ್ಲಿ ದೇವಿಯು ಹತ್ತು ದಿಕ್ಕುಗಳಲ್ಲಿ ವಿಜಯವನ್ನು ಸಾಧಿಸಿ, ಆ ಹತ್ತೂ ದಿಕ್ಕುಗಳು ದೇವಿಯ ಆಧಿಪತ್ಯದಲ್ಲಿರುತ್ತವೆ. ಇದರಿಂದ ಆ ಹತ್ತು ದಿಕ್ಕುಗಳಲ್ಲಿ ಶಕ್ತಿಯಿಂದ ಕೂಡಿರುತ್ತದೆ. ದೇವೀ ಶಕ್ತಿಯು ಅಸುರೀ ಶಕ್ತಿಗಳ ಮೇಲೆ ವಿಜಯವನ್ನು ಸಾಧಿಸಿದ ದಿನವೂ ಹೌದು, ಆದುದರಿಂದ ಇದನ್ನು ‘ವಿಜಯದಶಮಿ’ ಎಂದೂ ಕರೆಯುತ್ತಾರೆ. ಈ ದಿನದಂದು ‘ಸೀಮೋಲ್ಲಂಘನೆ’, ‘ಶಮೀ ಪೂಜೆ’, ‘ಅಪರಾಜಿತಾ ಪೂಜೆ’ ಮತ್ತು ಶಸ್ತ್ರಗಳ ಪೂಜೆಯನ್ನು ಮಾಡುತ್ತಾರೆ *ತಾಯಿಯ ವಿಶ್ವರೂಪ* ಮಾತೃದೇವೋ ಭವ ಎಂಬುದು ಭಾರತೀಯ ಸಂಸ್ಕೃತಿಯ ತಾರಕ ಮಂತ್ರ. ತಾಯಿಯಲ್ಲಿ ದೈವತ್ವವನ್ನು ದೈವತ್ವದ ಪ್ರೀತಿಯನ್ನು ಕಂಡ, ಅನುಭವಿಸಿದ ಸಂಸ್ಕೃತಿ ನಮ್ಮದು ವ್ಯಾಪಾರಿಕ ಪ್ರಪಂಚದಿಂದ ಅಲೌಕಿಕ ಪ್ರಪಂಚಕ್ಕೆ ಹೋದಾಗ ಈ ಮಾತೃತ್ವ ವಿಶ್ವರೂಪಿಣಿಯಾಗಿ, ಜಗನ್ಮಾತೆ, ಜಗದಂಬೆ, ದುರ್ಗಾಂಬೆ ಹೀಗೆ ಭಕ್ತಿ, ಶ್ರದ್ಧೆಗಳು, ದೈವೋಪಾಸನೆಯ ಶಕ್ತಿಯಾಗುತ್ತಾಳೆ.ವ್ಯಷ್ಟಿಯಾಗಿ ಅಂಬಾಭವಾನಿ, ಸಮಷ್ಠಿಯಾಗಿ ಜಗದ್ರಕ್ಷಕಿ, ದುಷ್ಟಶಿಕ್ಷಕಿ ಜಗತ್ ಕಲ್ಯಾಣಾಕಾಂಕ್ಷಿ. ಈ ಮೂಲದ ಜಗಜ್ಜನನಿಯ ಕಲ್ಪನೆಯೂ ಮೊದಲು ಅಂಧಕಾರಮಯ.ಈ ಅಂಧಕಾರ ಸ್ಫೋಟಗೊಂಡು ಬೆಳಕಿನಿಂದ ವಿಶ್ವ ಸೃಷ್ಟಿಯಾದಂತೆ ಜೀವಿ ವಲಯದ ಪೃಥ್ವಿ, ವಾಯು (ಪ್ರಾಣ) ವಲಯದ ಅಂತರಿಕ್ಷ ಹಾಗೂ ಬೆಳಕು ವಲಯದ ಆಕಾಶ ದೇವತೆಯಾಗಿ ಆಕೆಯು ಸರ್ವಭೂತಗಳ ಹುಟ್ಟು, ಬದುಕು, ಸಾವಿನ ವರ್ತುಲಗಳ ಜೈವಿಕ ಪ್ರಕ್ರಿಯೆಗೆ ಕಾರಕಳೂ, ಕಾರಣಳೂ ಆಗುತ್ತಾಳೆ.ಇದೇ ಪರಾಶಕ್ತಿ-ಆದಿಮಾತೆಯ-ಪರಾಪ್ರಕೃತಿ-ವಿಭವದ ರೂಪ ತಾಳುವ ಮೂರು ಮಜಲುಗಳು. ಈ ಮೂರು ಮಜಲುಗಳಲ್ಲಿ ತ್ರಂಬ್ಯಕೆಯನ್ನು ನಾವು ಗ್ರಹಿಸಬೇಕು. *ಶ್ರೀವಿದ್ಯಾ ನಮಾಮಿ* ಶ್ರೀ ಎಂದರೆ ಅಸದೃಶ್ಯಕಾಂತಿ, ಆನಂದ, ರಮಣೀಯತ್ವ, eನರೂಪ ವಿದ್ಯೆ, ಕೀರ್ತಿ, ಸಂಪ್ತತು, ರಾಜತ್ವ, ಗುರುತ್ವ ಇವೆಲ್ಲ ಯಾವ ವಿದ್ಯೆಯಲ್ಲಡಿಗದೆಯೋ ಅದೇ ಶ್ರೀ ವಿದ್ಯೆ. ಇನ್ನು ಶ್ರೀ ಶಬ್ಧದಲ್ಲಿನ ಶ (ಸತ್) ರ(ಚಿತ್) ಈ (ಆನಂದ) ಇವು ಪರಬ್ರಹ್ಮ ತತ್ವದ ಸಚ್ಚಿದಾನಂದ ತತ್ವವನ್ನು ಸೂಚಿಸುತ್ತದೆ. ಅಂದರೆ ಬ್ರಹ್ಮಾಂಡದ ಸೃಷ್ಟಿ ಸ್ಥಿತಿ ಲಯ ಕಾರ್ಯಗಳನ್ನು ಮಾಡುವ ಪ್ರಧಾನ ಮೂಲಶಕ್ತಿ ಶ್ರೀ ವಿದ್ಯಾಮಾತೆ. ತಂತ್ರವು ಅತೀಂದ್ರಿಯವಾದ, ಶ್ರೇಷ್ಟವಾದ, ನಿರ್ವಿಕಲ್ಪವಾದ, ವರ್ಣಾತೀತವಾದ ಪ್ರಕಾಶವನ್ನು ತನ್ನಿಂತಾನೆ ಹೊರ ಹೊಮ್ಮಲೆತ್ನಿಸಿದಾಗ ವಿಮರ್ಶಾ ಗುಣವು ಕಾಣಿಸುತ್ತದೆ. ಈ ವಿಮರ್ಶೆಯು ಪ್ರೇರಣೆಯ ರೂಪ ತಾಳಿ ಕಾಮವಾಗುತ್ತದೆ. ಈ ಕಾಮವೇ ಮತ್ತೆ ನಿತ್ಯಲಯೆ ಅಂಶವಾಗಿ ವಿಭಜನಗೊಳ್ಳುತ್ತದೆ.ಆದ್ದರಿಂದಲೇ ದೇವಿಗೆ ಕಾಮಕಲಾ ಎಂದು ಹೆಸರು.ಭಗವಂತ ಪ್ರಕೃತಿಗೂ ಅತೀತನಾದವನ ಅರಿವಾಗಲಿ, ಒಲವಾಗಲಿ ತಾಯಿಗೆ ಇರುವಂತೆ ಬೇರಾರಿಗೂ ಇರುವುದು ಸಾಧ್ಯವೇ? ದಾರ್ಶನಿಕ ಜಗತ್ತಿನಲ್ಲಿ ಹುಟ್ಟಿನ ಹಸಿವಿದೆ. ತಾಯಿಯನ್ನು ಸೇರುವ ಹಸಿವು ಅದು. ತಂದೆಯನ್ನು ಕಾಣಬೇಕೆಂಬ ಹಂಬಲ. ತಂದೆ ಪ್ರವೇಶಿಸಿದ ಮಾರ್ಗವೇ ಮಗುವಿನ ನಿರ್ಗಮನ. ಈ ಮಗು ಮತ್ತೆ ತಂದೆಯ ಹುಡುಕಾಟದಲ್ಲಿದೆ. ಅದು ಅಲ್ಲಿಗೆ ಸೇರಬೇಕು. ಎಲ್ಲಿಂದ ಬಂದಿದೆಯೋ ಅಲ್ಲಿಯೇ ಮುಕ್ತಿ. ಇದು ತಾಯಿಯ ಗರ್ಭಚಕ್ರದ ಕತೆ. ಅದಕ್ಕೆಂದೇ ತಾಯಿ ಭಗವತಿ ಭಗವಂತ ಭಗವತಿಗೆ ಭಗವಂತನನ್ನು ಸೇರುವ ಸಮರ್ಪಣೆ. ತಾಯಿಯನ್ನು ಕಾಣದ ಮಗು ತಂದೆಯನ್ನು ಕಂಡೀತು ಹೇಗೆ? ತಂದೆಯ ಅರಿವು ತಾಯಿಯಿಂದ, ತಾಯಿಯ ಬಳಿ ಸೇರಿದರೆ ತಂದೆಯ ಬಳಿ ಸೇರಿದಂತೆಯೇ. ಹಾಗಾಗಿಯೇ ಬಲ್ಲವರು ಹೇಳಿದರು ಪ್ರಕೃತಿಯು ಪುರುಷನಿಂದ ಎಂದೆಂದೂ ಆಗಲಿಕೆ ಇಲ್ಲದವಳು. ಒಂದೆಡೆ ತಾಯಿ ಮಕ್ಕಳನ್ನು ಬಿಟ್ಟಗಲಳು. ಇನ್ನೊಂದೆಡೆ ಒಡೆಯನನ್ನೂ ಬಿಟ್ಟಗಲಳು. ಇಂಥ ಅಸಾಧಾರಣವಾದ ತಾದ್ಯಾತ್ಮ ಇಮ್ಮಡಿಯಾದ ತಾದ್ಯಾತ್ಮ. ಪ್ರಕೃತಿಯ ಧರ್ಮ ಆದುದರಿಂದಲೇ ಎಲ್ಲ ಉಪಾಸನೆಗೆ ಇವಳು ಆಸರೆ. *ತ್ವಮೇವ ಮಾತಾ ಚ ಪಿತಾ ತ್ವಮೇವ* ಭಗವಂತ ತಂದೆಯಾದಾಗ ದುರ್ಗೆ ತಾಯಿಯಾಗುತ್ತಾಳೆ. ನಮ್ಮನ್ನು ೧೫ ಸುತ್ತಿನ ಸಂಸಾರದ ಕೋmಯೊಳಗೆ ಬಂಧಿಯಾಗಿಡುವವಳು ಆ ತಾಯಿ; ಆ ಮಾಯೆ. ಕಟ್ಟು ಬಿಚ್ಚಿ, ಬಿಡುಗಡೆಯನ್ನೀಯವನು ೧೮ನೆಯವನಾದ ಮಾಯಾ ಪತಿ ಭಗವಂತ. ೧೮ರತ್ತ, ೧೬ಕ್ಕೆ ದಾರಿ ತೋರುತ್ತ ನೆರವನ್ನೀಯುವ ಮಾಧ್ಯಮವೇ ೧೭. ಇದೇ ದುರ್ಗಾರಾಧನೆಯ ರಹಸ್ಯ. ತಂದೆಯ ಜೊತೆಗೆ ತಾಯಿಯನ್ನು ನೆನೆದರೆ ಅವಳಿಗೆ ತುಂಬಾ ಖುಷಿ. ದುರ್ಗೆಯ ಜತೆಗೆ ನೆನೆಯಬೇಕಾದ ಭಗವಂತನ ರೂಪ ವಿಶೇಷತಃ ಪರಶುರಾಮ. ಅದಕ್ಕೆಂದೇ ಪರಶುರಾಮ ಕ್ಷೇತ್ರದಲ್ಲಿ ದುರ್ಗೆಯ ವಿಶೇಷ ಸನ್ನಿಧಾನ. ದುರ್ಗೆಯ ವ್ಯಾಪಕ ಮೂರ್ತಿಗಳಲ್ಲಿ ಮಹಿಷ ಮರ್ಧಿನಿ ಹೆಚ್ಚು. ಮಹಿಷಾಸುರ ಅeನದ ಸಂಕೇತ. ಕನ್ನಡದಲ್ಲೂ, ಎಂಥಾ ಕೋಣನಯ್ಯ ನೀನು? ಎನ್ನುತ್ತೇವೆ ಅಲ್ಲವೇ! ಹಿರಣ್ಯಕಶಿಪುವಿನ ಮೊಮ್ಮಗನಾದ ಈ ಮಹಿಷಾಸುರ ನಮ್ಮೊಳಗೆಯೇ ಇದ್ದಾನೆ. ಗಟ್ಟಿಯಾಗಿ ಕೂತಿರುತ್ತಾನೆ. ಅವನನ್ನೋಡಿಸಲು ಬರಬೇಕು ಮಹಿಷ ಮರ್ಧಿನಿ. ಶಾಸ್ತ್ರದ ಈ ದುರ್ಗಮ ಪ್ರಮೇಯ ಗೊತ್ತಿರದವರಿಗೆ ದುರ್ಗೆಯೆಂದರೆ ಗೊಂದಲಪುರ. ಗೊತ್ತಾದವರಿಗೆ ದುರ್ಗೆಯೆಂದರೆ ಆನಂದಮಯ. *ಭಾವುಕರೊಬ್ಬರು ಹೇಳುತ್ತಾರೆ* : ಜಗನ್ಮಾತೆ ತನ್ನ ಸಂತಾನವನ್ನು ಕಣ್ಣ ಮೇಲೆ ಕಣ್ಣಿಟ್ಟು ನೋಡಿಕೊಳ್ಳುವುದಕ್ಕಾಗಿಯೇ ಲಕ್ಷ್ಮೀಯಾಗಿ ವಿಷ್ಣುವಿನ ಉದರದಲ್ಲೇ ವಾಸವಾಗಿದ್ದಾಳಂತೆ – ಒಂದು ವೇಳೆ ವಿಷ್ಣು ಕೋಪಿಸಿಕೊಂಡರೆ ಅವನ ಎದೆಯನ್ನು ನೀವಿ ಸಮಾಧಾನಗೊಳಿಸುವುದಕ್ಕೆ. ಶಿವೆಯಾಗಿ ಶಿವನ ಅರ್ಧಶರೀರವೇ ತಾನಾಗಿದ್ದಾಳಂತೆ – ಶಿವ ಕುಪಿತನಾಗಿ ಶಿಕ್ಷಿಸಲು ಬಲಗೈ ಎತ್ತಿದರೆ ಅಲ್ಲೆ ಎಡಗಡೆ ಇರುವ ಮಾತೃಹಸ್ತ ಮಧ್ಯೆ ಬಂದು ಅದನ್ನು ಕೆಳಗಿಳಿಸುತ್ತದಂತೆ. ಕೋಪದಿಂದ ಬ್ರಹ್ಮ ಶಾಪ ಕೊಡಲು ಉದ್ಯುಕ್ತನಾದರೆ ಆ ಶಾಪ ನಾಲಿಗೆಯಿಂದ ಉರುಳುವ ಹೊತ್ತಿಗೆ ಅದನ್ನು ವರವಾಗಿ ಪರಿಣಮಿಸುವಂತೆ ಮಾಡುತ್ತಾಳಂತೆ ವಾಣಿ . *ಮಾತೃಮರ್ಯಾದೆ* ಮಾತೃ ಮರ್ಯಾದೆ ತಾಂತ್ರಿಕ ಅಥವಾ ಶಾಕ್ತ ಸಂಪ್ರದಾಯದ ಮೂಲಾಧಾರ. ಈ ಸಂಪ್ರದಾಯ ವೈದಿಕ ಯುಗಕ್ಕಿಂತಲೂ ಪ್ರಾಚೀನವಾದುದು ಎಂಬುದು ನಿರ್ವಿವಾದ. ಇದರಲ್ಲಿ ದಕ್ಷಿಣಾಚಾರವೆಂದೂ ವಾಮಾಚಾರವೆಂದೂ ಎರಡು ಕವಲುಗಳು. ಮೊದಲನೆಯದು ಸಾತ್ವಿಕ, ಎರಡನೆಯದು ರಾಜಸ.ಶಕ್ತಿ ಪೂಜೆಯ ಪ್ರಾಬಲ್ಯ ಎಷ್ಟಿದ್ದಿತೆನ್ನುವುದು ಶಕ್ತಿತೀರ್ಥಗಳ ಸಂಖ್ಯೆಯನ್ನು ಗಮನಿಸಿದರೆ ತಿಳಿಯುತ್ತದೆ. ಕೊಲ್ಲಾಪುರದಲ್ಲಿ ಮಹಾಲಕ್ಷ್ಮೀ, ಪ್ರಯಾಗದಲ್ಲಿ ಲಲಿತೆ, ಶ್ರೀಶೈಲದಲ್ಲಿ ಮಾಧವಿ, ಬದರಿಯಲ್ಲಿ ಊರ್ವಶಿ, ಜಾಲಂಧರದಲ್ಲಿ ವಿಶ್ವಮುಖೀ, ನೇಪಾಳದಲ್ಲಿ ಗುಹ್ಯಕಾಲಿ, ಗಯೆಯಲ್ಲಿ ಮಂಗಳಾ, ಕಾಮಾಖ್ಯಾದಲ್ಲಿ ಯೋನಿಮಂಡಲ ,ತ್ರಿಪುರ ಭೈರವಿ,ಶ್ರೀನಗರದಲ್ಲಿ ಜಂಬೂನದೇಶ್ವರಿ, ಗಂಧ ಮಾದನದಲ್ಲಿ ಕಾಲುಕಾ, ಹಿಮಾದ್ರಿಯಲ್ಲಿ ಉಮಾ, ಕಿಷ್ಕಿಂಧ ಪರ್ವತದಲ್ಲಿ ತಾರಾ, ದ್ವಾರಕೆಯಲ್ಲಿ ರುಕ್ಮಿಣಿ, ಬಂದಾವನದಲ್ಲಿ ರಾಧೆ, ಮಥುರೆಯಲ್ಲಿ ದೇವಕಿ, ಮಲಯಾಚಲದಲ್ಲಿ ಕಲ್ಯಾಣಿ, ವೇದಾರಣ್ಯದಲ್ಲಿ ಸುಂದರಿ, ಕುರುಕ್ಷೇತ್ರದಲ್ಲಿ ಸ್ಥಾಣುಪ್ರಿಯಾ, ಅವಿಮುಕ್ತ ವಾರಾಣಸಿಯಲ್ಲಿ ವಿಶಾಲಾಕ್ಷಿ, ಕಾಂಚಿಪುರದಲ್ಲಿ ಅನ್ನಪೂರ್ಣ, ಚಿದಂಬರದಲ್ಲಿ ಮೀನಾಕ್ಷಿ, ಏಕಾಂಬರದಲ್ಲಿ ಪರಾಶಕ್ತಿ, ವೈದ್ಯನಾಥದಲ್ಲಿ ಬಗಲಾಮುಖಿ, ಮಣಿದ್ವೀಪದಲ್ಲಿ ಭುವನೇಶ್ವರಿ, ನೈಮಿಶದಲ್ಲಿ ಲಿಂಗಧಾರಿಣಿ, ಪುಷ್ಕರದಲ್ಲಿ ಗಾಯತ್ರಿ, ಕೇದಾರದಲ್ಲಿ ಮಾರ್ಗದಾಯಿನಿ, ಚಿತ್ರಕೂಟದಲ್ಲಿ ಸೀತೆ, ವಿಂಧ್ಯಾಪರ್ವತದಲ್ಲಿ ವಿಂಧ್ಯವಾಸಿನಿ ಇತ್ಯಾದಿ… ಪರಾಶಕ್ತಿಯ ಹಲವು ರೂಪದಲ್ಲಿ ದುರ್ಗೆ ವಿಶಿಷ್ಟ ದೇವತೆ. ಸರ್ವಶಕ್ತ್ಯಾತ್ಮಿಕೆಯಾದವಳು. ವಿಷ್ಣುವಿನ ಯೋಗಮಾಯೆ ಇವಳು. ಮಹಿಷಾಸುರ ಮರ್ಧಿನಿ, ಶುಂಭ ನಿಶುಂಭರನ್ನು ವಧಿಸಿದ ಮಹಾಸರಸ್ವತಿ. ಸಮಸ್ತ ಪ್ರಾಣಿಗಳಲ್ಲಿ ಚೇನತರೂಪಳಾಗಿ ಶರನ್ನವರಾತ್ರಿಯಲ್ಲಿ ಮಂತ್ರ ಚಾಲನಶಕ್ತಿಯಾಗಿ ವಿಜಯಪ್ರದಳಾಗಿ ಪೂಜೆಗೊಳ್ಳುವ ದುರಿತನಿವಾರಿಣಿಯಾದ ಬಲರೂಪಳಾದ ದುರ್ಗೆಯ ಮಹಿಮೆ ಅನಂತ-ಅಪಾರ-ಅಸದೃಶ. ವೇದಕಾಲದಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಆರಾಧಿಸಲ್ಪಡುತ್ತಿದ್ದಾಳೆ ಶ್ರೀ ದುರ್ಗಾ, ಕಾಶ್ಮೀರದ ವೈಷ್ಣೋದೇವಿಯಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ ಹಲವು ತೇಜಸ್ಸುಗಳಿಂದ ಅವಿರ್ಭವಿಸಿದ್ದಾಳೆ ಸೌಂದರ್ಯ ಲಹರಿಯಾದ ಈ ಕಾತ್ಯಾಯಿನಿ. *ಸಪ್ತಮಾತೃಕೆಯರು* ಮಾತೃಭಾವ ಪಂಥದ ಮೂಲಭೂತ ಗ್ರಂಥಗಳಲ್ಲೊಂದಾದ ದುರ್ಗಾ ಸಪ್ತಶತಿದಲ್ಲಿ ವರ್ಣಿಸಿರುವಂತೆ ಕೌಶಕಿ ದುರ್ಗಿಯು ರಕ್ತ ಬೀಜಾಸುರನೊಡನೆ ಯುದ್ಧ ಮಾಡುವಾಗ ಅವನನ್ನು ಪರಾಭವಗೊಳಿಸಲು ತಾನೇ ತನ್ನ ದೇಹದಿಂದ ಏಳು ರೂಪವಾಗಿ ಹೊರಬಿದ್ದಳು. ಈ ಏಳು ರೂಪವನ್ನೇ ಸಪ್ತ ಮಾತೃಕೆಯರು ಎಂದು ಕರೆಯುತ್ತಾರೆ. ಮಾತೃಗುಣಗಳನ್ನು ಸಾಮಾನ್ಯವಾಗ ಏಳು ಎಂದು ತಿಳಿದಿದ್ದರೂ ಕೆಲವು ಸಂದರ್ಭದಲ್ಲಿ ಇವರು ಎಂಟು, ಒಂಬತ್ತು, ಹದಿನಾರು ಎಂದು ಹೇಳಲಾಗಿದೆ. ಈ ಮಾತೃ ದೇವತೆಗಳಲ್ಲಿ ಪೂರ್ಣಶಕ್ತಿ, ಅಂಶರೂಪಿಣೆ, ಕಲಾರೂಪಿಣೆ, ಕಲಾಂಶರೂಪಿಣೆ ಎಂಬ ಭೇದವಿದೆ. ತಾರತಮ್ಯ ಕ್ರಮದಲ್ಲ್ಲಿ ಈ ಮಾತೃ ದೇವತೆಗಳು ವಿದ್ಯಾದೇವಿಯರ ತರುವಾಯ ಬರುವವರು. *ಶಕ್ತಿಪೂಜಕರು – ಶಾಕ್ತೇಯ ಮತ* ಸಮಸ್ತ ಲೋಕಗಳಿಗೂ ಆಧಾರಶಕ್ತಿಯೆನಿಸಿದ ಮಹತ್ ತತ್ವ ಒಂದಿದೆ. ಇದನ್ನು ಸ್ತ್ರೀಮೂರ್ತಿಯನ್ನಾಗಿ ಆರಾಧಿಸಿ ಆಭೀಷ್ಟ ಸಿದ್ಧಿಯನ್ನು ಹೊಂದುವ ಸಂಪ್ರದಾಯವೇ ನಮ್ಮಲ್ಲಿ ಬೆಳೆದು ಬಂದಿದೆ. ಅದುವೆ ಶಾಕ್ತಪಂಥ ಕಾಲಕ್ರಮದಲ್ಲಿ ತಾಮಸ ಪೂಜೆಯಾಗಿ ಹಿಂಸಾತ್ಮಕವಾಯಿತು. ಶಕ್ತಿಪೀಠದಲ್ಲಿ ಮೂಲರೂಪವಾದದ್ದು ಶ್ರೀ ಚಕ್ರ ಅಥವಾ ಶ್ರೀವಿದ್ಯೆ. . ಇದನ್ನು ಎರಡು ವಿಧಗಳಲ್ಲಿ ಪೂಜಿಸಿರುವ ಸಂಪ್ರದಾಯ ಇಂದಿಗೂ ಉಳಿದುಬಂದಿದೆ. ಅನಾದಿಯಿಂದ ಬಂದ ಶಾಕ್ತ ಸಂಪ್ರದಾಯವು ಮೊದಲು ಶುದ್ಧ ರೂಪದಲ್ಲೇ ಇದ್ದು, ಶುದ್ಧ ವಿಧಿನಿಯಮಗಳಲ್ಲಿ ಪಂಚಮ ಮಕಾರಗಳು ಸೇರಿ ಕ್ರೂರ ರೀತಿಯ ಪೂಜಾ ವಿಧಾನವು ಬಳಕೆಗೆ ಬಂತು. ಅನೈತಿಕ ಆಚರಣೆಗೆ ದಾರಿ ಮಾಡಿಕೊಟ್ಟಿತು. ಅದನ್ನು ಮತ್ತೆ ಶುದ್ಧ ರೂಪಕ್ಕೆ ತಂದವರು ಆಚಾರ್ಯಶಂಕರರು. *ದುರ್ಗಾರಾಧನೆ* ಸಾಮಾಜಿಕ ಜೀವನದಲ್ಲಿ ದೇವಿಯ ಪೂಜಾ ಪ್ರಭಾವ ನಿರಾಶಯವಾದದ್ದು, ಎಲ್ಲ ಪ್ರಾಂತದವರೂ ನವರಾತ್ರಿಯ ಪರ್ವಕಾಲದಲ್ಲಿ ದುರ್ಗಾರಾಧನೆಯನ್ನು ನಡೆಸುತ್ತಾರೆ . ನಮ್ಮ ಋಷಿಗಳಿಗೆ ವಿಶ್ವದ ಕಲ್ಪನೆ ಎರಡು ಸ್ತರಗಳಲ್ಲಿ ಅಭಿವ್ಯಕ್ತವಾಗಿದೆ. ಮಾನಸಿಕ ಹಾಗೂ ಭೌತಿಕ (Mind & Matter) ಅಂತೆಯೇ ಒಂದು ಮಾನಸೀಸೃಷ್ಟಿ ಮತ್ತು ಇನ್ನೊಂದು ಮೈಥುನೀ ಸೃಷ್ಠಿ. ವಿಶ್ವವು ಅರ್ಥಾತ್ ಎರಡು ಸ್ತರಗಳಲ್ಲಿ ಸೃಷ್ಟಿಗೊಳ್ಳುತ್ತದೆ. ಒಂದು ಮಾನಸ ಪ್ರಪಂಚ ಇನ್ನೊಂದು ಭೌತಿಕ ವಸ್ತು ಪ್ರಪಂಚ. ಭೌತಿಕ ಪ್ರಪಂಚದ ಸೃಷ್ಠಿಗೆ ತಂದೆ-ತಾಯಿ ಇವುಗಳ ಅವಶ್ಯಕತೆಯಿದೆ. ಇದು ಕೂಟಕ ವಿಷಯ. ತಂದೆ-ಮಹಾದೇವ ತಾಯಿ-ಮಹಾದೇವಿ. ಒಂದು ವೃತ್ತದ ಕೇಂದ್ರ; ಇನ್ನೊಂದು ಆವೃತ್ತದ ಸಂಧಿ. (centre & the circumference of a circle) ಇಡಿಯ ಸೃಷ್ಠಿ-ಪ್ರಕೃತಿ ಪುರುಷ ಜೋಡಿ;ಇದನ್ನೇ ದುರ್ಗಾತಂತ್ರeನ ಮುಂತಾಗಿ ತಿಳಿಯಲಾಗುತ್ತದೆ. ಮಹಾವಿದ್ಯಾ ಎಂದೂ ಹೇಳಲಾಗುತ್ತದೆ. ಆದಿಶಕ್ತಿಯ ಹೆಸರುಗಳು ಏನೇ ಇರಲಿ, ಪುರಾಣದ ಕಥೆಗಳು ಏನೇ ಇರಲಿ ದುಷ್ಟ ಶಿಕ್ಷಣ – ಶಿಷ್ಟ ರಕ್ಷಕ ಕಾರ‍್ಯದಲ್ಲಿ ಸದಾ ನಿರತರಾಗಿರುವ ನಿಸರ್ಗ ಶಕ್ತಿಯ ಆರಾಧನೆಯೇ ನವರಾತ್ರಿಯಲ್ಲಿ ಪ್ರಧಾನ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries