ಯಾವುದೇ ಶೀರ್ಷಿಕೆಯಿಲ್ಲ
0
ಸೆಪ್ಟೆಂಬರ್ 21, 2017
ಸಮರಸ ಸಂವಾದ-ಸಂಪಾದಕೀಯ:
ಇಂದಿನ ಕಾಲಧರ್ಮವೋ, ಜನಸಾಮಾನ್ಯರ ಮನೋಧರ್ಮವೋ ವ್ಯಾವಹಾರಿಕ ಪ್ರಪಂಚ, "ಸಂಬಂಧಗಳನ್ನು ಮರೆಯುತ್ತಿದೆ" ಎಂಬ ಕೂಗು ಆಗಾಗ ಕೇಳಿಬರುತ್ತಿದೆ. ತಂತ್ರಜ್ಞಾನ, ಅದರೊಂದಿಗಿನ ಮಾಂತ್ರಿಕ ಸಂವೇದನೆಗಳಿಂದ ಮಾನವನ ನೈಜ ಸಂವೇದನೆಗಳು ಕೊಲ್ಲಲ್ಪಟ್ಟವೆಂಬ ನಿರೀಕ್ಷೆಗಳ ಅರಿವಿದ್ದರೂ ನಾವು ನೀವೆಲ್ಲ ಆ ಮಾಂತ್ರಿಕ ಸಂವೇದನೆಯಿಂದ ಬಿಡುಗಡೆಗೊಳ್ಳದೆ, ನೈಜ ಸಂವೇದನೆಗಳತ್ತ ಹೊರಳುವುದೇ ಇಲ್ಲ.
ಮಿತಿಗೊಳಪಟ್ಟ ಸಂಸಾರ, ಅಮಿತ ಪ್ರಮಾಣದ ಬೇಡಿಕೆಯ ಪಟ್ಟಿಗಳನ್ನು ನಿರ್ವಹಿಸಲು ಮನೆಯಿಂದ ಹೊರಗುಳಿಯುವ ಚಿಕ್ಕ ಸಂಸಾರಗಳಲ್ಲಿ ಇಂದು ಕೂಡಿಯಾಡುವ, ನಕ್ಕು ಹಗುರಾಗುವ ವ್ಯವಧಾನ ಕನಸಿನ ಮಾತೇ ಸರಿ. ಹಸುಳೆಗಳೇ ಹಾಲುಣ್ಣುವ ಮಧ್ಯೆ ಯೂಟ್ಯೂಬಿನತ್ತ ಒಮ್ಮೆ ಕಣ್ಣು ಹಾಯಿಸುವಷ್ಟು ಬೆಳೆದಿರುವ ಈ ಕಾಲಮಾನದ ವ್ಯವಸ್ಥೆಗಳು ಮುಂದೆಲ್ಲಿಗೆ ಒಯ್ಯುವುದೋ ಎಂಬ ಭೀತಿ ಅನೇಕರದ್ದು.
ವರ್ತಮಾನದ ದಿನವನ್ನು ಬೆಳಿಗ್ಗೆ ಹಾಸಿಗೆಯಿಂದೇಳುವಲ್ಲಿಂದ ರಾತ್ರಿ ಮತ್ತೆ ಅದರತ್ತ ಬರುವಲ್ಲಿಯವರೆಗೆ ಮಿತಿಗೊಳಪಟ್ಟು ಮೀಸಲಿಡುವ ಇಂದಿನ ಸ್ಥಿತಿ ತೀವ್ರ ಗಲಿಬಿಲಿಗೊಳಿಸುವಂತದ್ದು. ಪತಿ-ಪತ್ನಿಯರು, ಅಣ್ಣ-ತಮ್ಮಂದಿರು, ತಾಯಿ-ಮಕ್ಕಳು ಮುಖಕ್ಕೆ ಮುಖಕೊಟ್ಟು ಮಾತನಾಡದೆ, ಅಂತಹ ಗಳಿಗೆಗಳಿಗಾಗಿ ಕಾತರಿಸುವ ಕಾಲಮಾನಕ್ಕೆ ಹಳ್ಳಿಗಳೂ ಬಂದು ತಲಪಿರುವುದು ಭಾರತೀಯ ಸಾಂಸ್ಕೃತಿಕ, ಕೌಟುಂಬಿಕ, ಸಾಮಾಜಿಕ ವ್ಯವಸ್ಥೆಯ ಮೇಲೆ ಗಾಢ ಪರಿಣಾಮ ಬೀರಿ ವ್ಯಾಪಕ ಹಿನ್ನಡೆಯ ವ್ಯವಸ್ಥೆಯಾಗಿ ರೂಪುಗೊಳ್ಳುವುದೆಂಬ ಪರಿಜ್ಞಾನ ಈಗೀಗ ಕೇಳಿಬರುತ್ತಿದೆ.
ಹಿಂದಿನಂತಿಲ್ಲದ ಇಂದಿನ ಯುವ ಜನಾಂಗದ ಅಭಿರುಚಿಗಳು ತಂತ್ರಜ್ಞಾನದ ಯುಗಕ್ಕನುಸರಿಸಿ ವಿಶಾಲವಾಗಿ ಬೆಳೆದುಬಿಟ್ಟಿದೆ. ಆದರೆ ಆ ವೈಶಾಲ್ಯತೆ ತನ್ನ ನೆಲದ ಅರಿವನ್ನು ಮೂಡಿಸುವಲ್ಲಿ ಸೋತಿರುವುದನ್ನೂ ಚಿಂತಕರು ಗುರುತಿಸಿಕೊಂಡಿದ್ದಾರೆ. ಇದು ಮನೋವಿಕಾಸಕ್ಕೆ ಹಿನ್ನಡೆಯಾಗಿ ಕೇವಲ ಭ್ರಮಾ ಜಗತ್ತನ್ನು, ವ್ಯವಸ್ಥೆಯನ್ನು ಸೃಷ್ಟಿಸುವ ಬಗ್ಗೆ ಭೀತಿಪಡಲೇಬೇಕಿದೆ. ನೈತಿಕತೆ, ಸತ್ಯ, ಧಮರ್ಾಚರಣೆಯ ಬದುಕು ಮೂಲ ಸೆಲೆಯಾಗಿ ಗುರುತಿಸಲ್ಪಟ್ಟ ಈ ಭರತ ಖಂಡದ ಇಂದಿನ ಈ ಸಂಕ್ರಾಂತಿಯ ಘಟ್ಟವನ್ನು ಸಬಲವಾಗಿ ನಿವಾರಿಸಿ ಗಂಭೀರ ಚಿಂತನೆಗಳೊಂದಿಗೆ ಉಳಿಸಿ ಬೆಳೆಸುವ ಬಗ್ಗೆ ಕಾರ್ಯಯೋಜನೆಗಳ ಅಗತ್ಯ ತುತರ್ು ಇದೆ.