ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 04, 2017
ನಿರಂತರ ಪ್ರಯತ್ನಗಳು ಅಭಿವೃದ್ದಿಗೆ ಪೂರಕ: ಡಾ.ಎ.ರಾಧಾಕೃಷ್ಣನ್ ನಾಯರ್
ಬದಿಯಡ್ಕ: ಇಂದಿನ ಏಕತಾನತೆಯ ಬದುಕಿನ ಮಧ್ಯೆ ಸಮಯ ಕಲ್ಪಿಸಿ ವ್ಯತ್ಯಸ್ಥ ಬದಲಾವಣೆಗಳಿಗೆ ಹೊಂದಿಕೊಳ್ಳುವುದನ್ನು ಅಭ್ಯಸಿಸಬೇಕು. ಸಾಮಾಜಿಕ ಬದಲಾವಣೆಗಳು ಸ್ವಾಭಾವಿಕವಾಗಿ ಆಗದೆ, ಯೋಜನಾಬದ್ದ ಪ್ರಯತ್ನ, ನಿರಂತರ ಪ್ರಕ್ರಿಯೆಗಳಿಂದ ಆಗುತ್ತದೆ ಎಂದು ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ರಿಜಿಸ್ಟಾರ್ ಡಾ.ಎ.ರಾಧಾಕೃಷ್ಣನ್ ನಾಯರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯ ಪೆರಿಯದ ಸಮಾಜ ಅಧ್ಯಯನ ವಿಭಾಗದ ನೇತೃತ್ವದಲ್ಲಿ ಪೆರಡಾಲ ಕೊರಗ ಕಾಲನಿಯಲ್ಲಿ ಹಮ್ಮಿಕೊಂಡಿರುವ 7 ದಿನಗಳ "ನಲಿಪುಗ, ಕಲ್ಪುಗೊ" ವಿಶೇಷ ಸಮಾಜ ಅಧ್ಯಯನ ಶಿಬಿರವನ್ನು ಬುಧವಾರ ಸಂಜೆ ಪೆರಡಾಲ ನವಜೀವನ ಶಾಲಾ ಸಭಾಂಗಣದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಪರಿವರ್ತನೆಯಲ್ಲಿ ಅರಿವಿನಿಂದೊಡಗೂಡಿದ ನಿರಂತರ ಪ್ರಯತ್ನಗಳು ಮುಖ್ಯವಾಗಿದ್ದು, ಅಂತಹ ಪ್ರಯತ್ನಗಳು ಬದಲಾವಣೆ ಮತ್ತು ಅಭಿವೃದ್ದಿಗೆ ಕಾರಣವಾಗುತ್ತದೆ. ಭಾರತೀಯ ಸಮಾಜ ವ್ಯವಸ್ಥೆಯಲ್ಲಿ ಈ ಹಿಂದಿದ್ದಷ್ಟು ಭಿನ್ನತೆಗಳು ಇಂದಿಲ್ಲವಾದರೂ ಕೆಲವು ಸಮುದಾಯಗಳು ಇದೀಗಲೂ ಅತಿ ಹಿಂದುಳಿದು ವರ್ತಮಾನದ ಸಮಾಜದೊಡನೆ ಮಿಳಿತವಾಗದೆ ಸಂಕಷ್ಟವನ್ನು ಅನುಭವಿಸುತ್ತಿರುವುದರ ಬಗ್ಗೆ ಗಂಭೀರ ಚಿಂತನೆಗಳು ಆಗಬೇಕಿದೆ ಎಂದು ಅವರು ತಿಳಿಸಿದರು. ವಿಕಾಸ ಮತ್ತು ಆಧುನಿಕ ಸಮಾಜದೊಡನೆ ಬೆರೆಯಲಾರದ ಮಾನಸಿಕತೆ ಮತ್ತು ಜೀವನ ವ್ಯವಸ್ಥೆಗಳ ಬಗ್ಗೆ ಅನುಸರಿಸಬೇಕಾದ ಕ್ರಮಗಳು ಮತ್ತು ದೀರ್ಘಕಾಲೀನ ಯೋಜನೆಗಳು ಗುರಿ ಮುಟ್ಟದಿರುವ ಬಗೆಗೂ ಹೆಚ್ಚಿನ ಅಧ್ಯಯನ, ಹೊಸ ಚಿಂತನೆಗಳು ಮೂಡಿಬರಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್ ಮಾತನಾಡಿ, ಕಾಲನಿಗಳ ಜೀವನಕ್ರಮ, ವ್ಯವಸ್ಥೆಗಳ ಬಗ್ಗೆ ವಿದ್ಯಾಥರ್ಿಗಳು ನಡೆಸುವ ಅಧ್ಯಯನ, ಬಳಿಕ ಅವರು ಕಲ್ಪಿಸುವ ಪರಿಹಾರಗಳು ಸಮರ್ಥ ಸಮಾಜಾಭಿವೃದ್ದಿಗೆ ಪೂರಕವಾಗಿದ್ದು, ಭವಿಷ್ಯದ ಸಾಮಾಜಿಕ ವ್ಯವಸ್ಥೆಯ ಉನ್ನತಿಗೆ ಕಾರಣವಾಗಲಿ. ಕೊರಗ ಸಮಾಜ ಸಹಿತ ಹಿಂದುಳಿದ ಜಾತಿ-ವಿಭಾಗಗಳ ಸಮಗ್ರ ಅಭಿವೃದ್ದಿಯ ತುಡಿತವಿರುವ ಯುವ ಸಮೂಹದಿಂದ ಇತರರಿಗೆ ಪ್ರೇರಣೆಯಾಗಲಿ ಎಂದು ಹಾರೈಸಿದರು.
ಕೇರಳ ಕೇಂದ್ರೀಯ ವಿದ್ಯಾಲಯದ ಹಣಕಾಸು ಅಧಿಕಾರಿ ಡಾ.ಬಿ.ಆರ್.ಪ್ರಸನ್ನಕುಮಾರ್, ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಶ್ಯಾಮ್ ಭಟ್, ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ಸಮಾಜ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಮೋಹನ್ ಎ.ಕೆ, ಬದಿಯಡ್ಕ ಗ್ರಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ, ಪೆರಡಾಲ ಕೊರಗ ಅಭಿವೃದ್ದಿ ಅಸೋಸಿಯೇಶನ್ ಅಧ್ಯಕ್ಷೆ ವಿಮಲ, ಗ್ರಾ.ಪಂ.ಸದಸ್ಯೆ ರಾಜೇಶ್ವರಿ ಎಂ, ಬದಿಯಡ್ಕ ಆರಕ್ಷಕ ಠಾಣಾಧಿಕಾರಿ ಪ್ರಶಾಂತ್ ಕೆ ಉಪಸ್ಥಿತರಿದ್ದು ಶುಭಹಾರೈಸಿದರು.
ಅಧ್ಯಯನ ಶಿಬಿರದ ಅಧಿಕಾರಿ ಡಾ.ಲಕ್ಷ್ಮೀ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಬಿರದ ಸಹ ನಿದರ್ೇಶಕ ಡಾ.ರಂಜಿತ್ ಪಿಳ್ಳೆ ವಂದಿಸಿದರು. ಶಿಬಿರ ಅ. 10ರವರೆಗೆ ಪೆರಡಾಲ ಕೊರಗ ಕಾಲನಿ ಕೇಂದ್ರೀಕರಿಸಿ ನಡೆಯಲಿದ್ದು, ಪೆರಿಯದಲ್ಲಿರುವ ಕೇರಳ ಕೇಂದ್ರೀಯ ವಿವಿಯ ಸಮಾಜ ಅಧ್ಯಯನ ವಿಭಾಗದ 36 ಮಂದಿ ವಿದ್ಯಾಥರ್ಿಗಳು ಪಾಲ್ಗೊಳ್ಳುತ್ತಿದ್ದಾರೆ.