ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 29, 2017
ಕಿದೂರಿನಪಕ್ಷಿಲೋಕದಲ್ಲಿ ಬಲೂಚಿಸ್ಥಾನದ ಪಕ್ಷಿ
ಕುಂಬಳೆ: ದಿನೇ ದಿನೇ ಕುಂಬಳೆ ಪಂ.ವ್ಯಾಪ್ತಿಯ ಕಿದೂರು ಪರಿಸರದ ಪಕ್ಷಿಗಳ ಕಲರವದೊಂದಿಗೆ ಪ್ರಕೃತಿ ಸೌಂದರ್ಯವನ್ನು ವೃದ್ಧಿಸುತ್ತಿದೆ. ಇದೀಗ ಕಿದೂರಿನ ಪಕ್ಷಿ ಪ್ರಪಂಚಕ್ಕೆ ಇನ್ನೊಂದು ಬಲೂಚಿಸ್ಥಾನದಿಂದ ಬಂದ ಬಾನಾಡಿಯ ಸೇರ್ಪಡೆಯಾಗಿದೆ.
ಗ್ರೇ ನೆಕ್ಡ್ ಬಂಟಿಂಗ್ ಎಂಬ ವಲಸೆಗಾರ ಹಕ್ಕಿ ಎಂಬೆರಿಜಾ ಬುಚನಾನಿ ಎಂಬ ವೈಜ್ಞಾನಿಕ ಹೆಸರನ್ನು ಹೊಂದಿದೆ. ಕಿದೂರು ಪರಿಸರಕ್ಕೆ ಪಕ್ಷಿ ವೀಕ್ಷಣೆಗಾಗಿ ಬಂದಿದ್ದ ಕಣ್ಣೂರಿನ ಖ್ಯಾತ ಪಕ್ಷಿ ನಿರೀಕ್ಷಕರಾದ ಪಿ.ಸಿ.ರಾಜೀವನ್ ಈ ಹಕ್ಕಿಯನ್ನು ಮೊದಲಾಗಿ ವೀಕ್ಷಿಸಿದ್ದು,ಕಿದೂರು-ಕುಂಟಂಗೇರಡ್ಕದ ಪಾರೆ ಪ್ರದೇಶದಿಂದ ಪತ್ತೆ ಹಚ್ಚಲಾಗಿದೆ. ನಂತರ ಕಿದೂರು ಪಕ್ಷಿ ಪ್ರೇಮಿ ತಂಡದ ಸದಸ್ಯರಿಗೆ ಮಾಹಿತಿ ರವಾನಿಸಿದ್ದು, ಕಾಸರಗೋಡಿನ ಪಕ್ಷಿ ಪ್ರಿಯರಿಗೆ ವಿಶೇಷ ಅನುಭವ ನೀಡಿದೆ.
ನಾಡಿಗೆ ಅತಿಥಿಯಾಗಿ ಆಗಮಿಸಿದ ಈ ಅಪರೂಪದ ಹಕ್ಕಿಯು ಕಾಣಲು ಅಂಗಡಿ ಹಕ್ಕಿಯನ್ನು ಹೋಲುತ್ತಿದೆ. ಗುಲಾಬಿ ಬಣ್ಣದ ಕೊಕ್ಕು ಹಾಗೂ ಕಣ್ಣಿನ ಬದಿಯಲ್ಲಿ ರಿಂಗಿನಾಕಾರದ ರಚನೆಯು ಈ ಪಕ್ಷಿಗಿದ್ದು ನೋಡಲು ಬಹಳ ಅತ್ಯಾಕರ್ಷಕವಾಗಿದೆ. ಪಾದೆ ಪ್ರದೇಶದಲ್ಲಿ ಧಾರಾಳವಾಗಿರುವ ಒಣಹುಲ್ಲಿನ ಬೀಜವನ್ನು ನಿರಂತರವಾಗಿ ಭಕ್ಷಿಸುವುದನ್ನು ಪಕ್ಷಿ ನಿರೀಕ್ಷಕರಾದ ರಾಜು ಕಿದೂರು,ಪ್ರದೀಪ್ ಕಿದೂರು ಹಾಗೂ ಗ್ಲೆನ್ ಕಿದೂರು ಅವರು ಗುರುತಿಸಿ ದಾಖಲಿಸಿಕೊಂಡಿದ್ದಾರೆ.
ಚಳಿಗಾಲದ ಈ ಹೊಸ ಅಥಿತಿಯ ಆಗಮನದೊಂದಿಗೆ ಕಿದೂರಿನ ವೈವಿದ್ಯಮಯ ಪಕ್ಷಿ ಪ್ರಪಂಚದ ಸಂಖ್ಯೆ 150 ಕ್ಕೆ ತಲುಪಿದೆ.
ಸದಾ ಜೈವ ವೈವಿಧ್ಯವನ್ನು ಉಳಿಸಿ ಬೆಳೆಸುವುದರಲ್ಲಿ ಅಪರಮಿತ ಕಾಳಜಿ ವಹಿಸುತ್ತಿರುವ ಕಿದೂರು ಪಕ್ಷಿ ಪ್ರೇಮಿ ತಂಡ ಕಳೆದ ತಿಂಗಳು ಯುರೋಪಿನ ವೈಟ್ ಸ್ಟ್ರೋಕ್ ಎಂಬ ಹಕ್ಕಿಯನ್ನು ಈ ಪರಿಸರದಿಂದ ದಾಖಲಿಸಿದ್ದು. ಇದೀಗ ಮತ್ತೆ ಹೊಸ ಪಕ್ಷಿಯ ಗುರುತಿಸುವಿಕೆಯಿಂದ ಸಂಭ್ರಮದಲ್ಲಿದೆ. ಬಲೂಚಿಸ್ಥಾನದಿಂದ ಕೇವಲ ಬೆರಳಿಣಿಕೆಯಷ್ಟೇ ಆಗಮಿಸುವ ಗ್ರೇ ನೆಕ್ಡ್ ಬಂಟಿಂಗ್ ಎಂಬ ವಲಸೆಗಾರ ಪಕ್ಷಿಗಳು ಕಿದೂರು ಪರಿಸರದಲ್ಲಿ ಕಂಡು ಬಂದಿದ್ದು, ಇಲ್ಲಿನ ಪಕ್ಷಿ ಪ್ರಪಂಚದ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸಿದೆ.