ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 29, 2017
ಸಾಹಿತ್ಯ-ಕಲೆ ಈ ಹೊತ್ತಿನ ಅಧ್ಯಾತ್ಮ: ಜಯಂತ ಕಾಯ್ಕಿಣಿ
'ಸಮಾಜದೊಳಗೆ ವ್ಯಕ್ತಿ ಇರುವಂತೆ ವ್ಯಕ್ತಿಯೊಳಗೂ ಸಮಾಜ ಇರುತ್ತದೆ. ಈ ವ್ಯಕ್ತಿಯೊಳಗಿನ ಸಮಾಜವೂ ಮುಖ್ಯ. ನಮ್ಮೊಳಗಿನ ಅಂತಃಕರಣಕ್ಕೆ ನಾವು ಸ್ಪಂದಿಸಬೇಕು. ಕಾವ್ಯಕ್ಕೆ ಸ್ಫೂತರ್ಿ ಸಿಗುವುದು ಜನರ ನಡುವಿನಿಂದ. ಮಮತೆ ಮತ್ತು ಸಮತೆ ನಮ್ಮ ಒಳಗಿನ ಕಣ್ಣುಗಳ ದೃಷ್ಟಿಯಾಗಬೇಕು' ಎಂದು ಕವಿ ಜಯಂತ ಕಾಯ್ಕಿಣಿ ನುಡಿದರು.
ಸಾಹಿತ್ಯ-ಕಲೆ ಈ ಹೊತ್ತಿನ ಅಧ್ಯಾತ್ಮ: ಜಯಂತ ಕಾಯ್ಕಿಣಿ
ರಾಷ್ಟ್ರಕವಿ ಕುವೆಂಪು ವೇದಿಕೆ (ಮೈಸೂರು): 'ಸಾಹಿತ್ಯ ಮತ್ತು ಕಲೆಯೇ ಈ ಹೊತ್ತಿನ ಅಧ್ಯಾತ್ಮ. ಬೇರೆ ಯಾವುದೂ ಇಂದಿನ ಅಧ್ಯಾತ್ಮ ಅಲ್ಲ' ಎಂದು ಕವಿ ಜಯಂತ ಕಾಯ್ಕಿಣಿ ಅಭಿಪ್ರಾಯಪಟ್ಟರು.
ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಭಾನುವಾರ ನಡೆದ ಕವಿಗೋಷ್ಠಿಯಲ್ಲಿ ಆಶಯ ನುಡಿಗಳನ್ನಾಡಿದ ಅವರು, 'ಕಾವ್ಯ ನಮ್ಮೆಲ್ಲರನ್ನೂ ಜೀವಂತವಾಗಿಡುವ ಮಾನವೀಯತೆಯ ಸೆಲೆ. ಯಾವುದನ್ನು ನೇರವಾಗಿ ಹೇಳಲು ಆಗುವುದಿಲ್ಲವೋ ಅದನ್ನು ಹೇಳುವುದು, ಧ್ವನಿಸುವುದು ಕಾವ್ಯ' ಎಂದರು.
'ಸಮಾಜದೊಳಗೆ ವ್ಯಕ್ತಿ ಇರುವಂತೆ ವ್ಯಕ್ತಿಯೊಳಗೂ ಸಮಾಜ ಇರುತ್ತದೆ. ಈ ವ್ಯಕ್ತಿಯೊಳಗಿನ ಸಮಾಜವೂ ಮುಖ್ಯ. ನಮ್ಮೊಳಗಿನ ಅಂತಃಕರಣಕ್ಕೆ ನಾವು ಸ್ಪಂದಿಸಬೇಕು. ಕಾವ್ಯಕ್ಕೆ ಸ್ಫೂತರ್ಿ ಸಿಗುವುದು ಜನರ ನಡುವಿನಿಂದ. ಮಮತೆ ಮತ್ತು ಸಮತೆ ನಮ್ಮ ಒಳಗಿನ ಕಣ್ಣುಗಳ ದೃಷ್ಟಿಯಾಗಬೇಕು' ಎಂದು ನುಡಿದರು.
'ವೈದ್ಯಕೀಯ ಕ್ಷೇತ್ರ ಮತ್ತು ಸಾಹಿತ್ಯ ಕ್ಷೇತ್ರ ಎರಡೂ ಒಂದೇ ಕೆಲಸ ಮಾಡುತ್ತವೆ. ಇವೆರಡೂ ಮನುಷ್ಯನ ಯಾತನೆಯನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುತ್ತವೆ. ಮನುಷ್ಯನನ್ನು ಒರೆಗೆ ಹಚ್ಚುವ ಜಾಗ ಆಸ್ಪತ್ರೆ. ನಮ್ಮ ತಂದೆ ಗೌರೀಶ ಕಾಯ್ಕಿಣಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದ ಸಂದರ್ಭದಲ್ಲಿ ಸಾವಿನ ಸಮೀಪದಲ್ಲೂ ಜೀವನವನ್ನು ಸುಂದರವಾಗಿ ನೋಡುವ ದೃಶ್ಯಗಳನ್ನು ಆಸ್ಪತ್ರೆಯಲ್ಲಿ ಕಂಡವನು ನಾನು' ಎಂದು ನೆನಪುಗಳನ್ನು ಬಿಚ್ಚಿಟ್ಟರು.
'ಸಾಹಿತ್ಯದಿಂದಲೇ ಹುಟ್ಟುವ ಸಾಹಿತ್ಯ ಗಟ್ಟಿಯಾಗುವುದಿಲ್ಲ. ಬದುಕಿನಿಂದ, ಬದುಕಿನ ಕರುಣೆಯಿಂದ ಹುಟ್ಟುವ ಸಾಹಿತ್ಯ ಹೆಚ್ಚು ಸ್ಪಂದನಶೀಲವಾಗುತ್ತದೆ. 'ಮಧುರಚೆನ್ನರನ್ನ ಮಣ್ಣು ಮಾಡಿಲ್ಲ, ಅವರನ್ನು ಬಿತ್ತಿದ್ದಾರೆ' ಎಂದು ಮಧುರಚೆನ್ನರನ್ನು ಮಣ್ಣು ಮಾಡುವ ಸಂದರ್ಭದಲ್ಲಿ ದ.ರಾ. ಬೇಂದ್ರೆ ಹೇಳಿದ್ದರು. ಅಂತಹ ಮಾನವೀಯ ಸ್ಪಂದನ ಮುಖ್ಯವಾಗಬೇಕು' ಎಂದರು.
'ಬರಹಗಾರನಿಗೆ ಬರವಣಿಗೆಯೇ ಸತ್ಯ. ಕಲಾವಿದನಿಗೆ ಕಲೆಯೇ ಸತ್ಯ. ಕಾವ್ಯವು ಪ್ರಶಸ್ತಿ, ಪತ್ರಿಕೆಗಳ ಪುರವಣಿಗಳ ಪ್ರಚಾರ, ಬಯೊಡೇಟಾಗಳನ್ನು ಮೀರಬೇಕು' ಎಂದು ಹೇಳಿದರು.
'ಅಪವಾಸ್ತವದಲ್ಲಿ ನಾವು ಈಗ ಬದುಕುತ್ತಿದ್ದೇವೆ. ತಂತ್ರಜ್ಞಾನ ಹಾಗೂ ಸಾಮಾಜಿಕ ಮಾಧ್ಯಮಗಳು ಮನೋದಾಸ್ಯಕ್ಕೆ ದಾರಿಯಾಗಬಾರದು. ಎಲ್ಲ ಕಾಲದ ಕೆಟ್ಟ ರಾಜಕಾರಣವೂ ಜನರು ಮೈ ಮರೆಯಬೇಕು ಎಂದು ಬಯಸುತ್ತದೆ. ಸಾಮಾಜಿಕ ಮಾಧ್ಯಮಗಳ ಮನೋದಾಸ್ಯಕ್ಕೆ ಒಳಗಾಗಿ ನಾವು ಮೈ ಮರೆಯಬಾರದು. ಮನಸ್ಸನ್ನು ಎಚ್ಚರವಾಗಿಟ್ಟುಕೊಳ್ಳುವುದು ಈಗ ಬಹಳ ಮುಖ್ಯ. ನಾವು ಯಾವುದೇ ರಾಜಕೀಯ ಪಕ್ಷದ ಸದಸ್ಯರಾಗದೆ ಸ್ವತಂತ್ರವಾಗಿ ಯೋಚಿಸಬೇಕು. ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಬೇಕು' ಎಂದು ಹೇಳಿದರು.
'ಹೊಲಗಳಲ್ಲಿ ಇರಬೇಕಾದ ಟ್ರ್ಯಾಕ್ಟರ್ ಈಗ ನಗರಗಳಲ್ಲಿನ ಮುರಿದ ಕಟ್ಟಡಗಳ ಅವಶೇಷ ಹೊತ್ತು ಬರುತ್ತಿದೆ. ಟ್ರ್ಯಾಕ್ಟರ್ನ ಹಿಂಭಾಗದಲ್ಲಿ ಹಳ್ಳಿಯಿಂದ ಗುಳೆ ಬಂದ ಕುಟುಂಬ ಕುಳಿತಿರುತ್ತದೆ. ಇದು ನನ್ನನ್ನು ಹೆಚ್ಚು ಕಾಡುವ ಪ್ರತಿಮೆ. ಹೀಗೆ ಕಾಡುವ ಹೊಸ ಪ್ರತಿಮೆಗಳು ಕಾವ್ಯಕ್ಕೆ ಬರಬೇಕು. ಮಕ್ಕಳಿಂದ ಪ್ರತಿಮೆಗಳು ಕಾವ್ಯಕ್ಕೆ ಬರಬೇಕು' ಎಂದು ಜಯಂತ ಕಾಯ್ಕಿಣಿ ಆಶಿಸಿದರು.