HEALTH TIPS

No title

                  ಕನ್ನಡಿಗರ ಸಾಂವಿಧಾನಿಕ ಹಕ್ಕುಗಳು ಸಾಕಾರವಾಗಲಿ -ಡಾ. ಹರಿಕೃಷ್ಣ ಭರಣ್ಯ
      ಬದಿಯಡ್ಕ: ಜಿಲ್ಲೆಯಲ್ಲಿ ಅಸಂಖ್ಯಾತ ಕನ್ನಡ ಬರಹಗಾರರಿದ್ದಾರೆ. ಇಲ್ಲಿನ ಕನ್ನಡವು ಅತ್ಯಂತ ಶುದ್ಧವಾಗಿದೆ. ಕಾಸರಗೋಡಿನಲ್ಲಿ ಕನ್ನಡಕ್ಕೆ ಸಂವಿಧಾನ ಮಟ್ಟದ ಹಕ್ಕುಗಳಿದ್ದು, ಕೇರಳ ಸರಕಾರ  ಅದಕ್ಕೆ ಮಾನ್ಯತೆ ನೀಡಿ, ಕಾಸರಗೋಡಿನಲ್ಲಿ ಕನ್ನಡ ಭಾಷೆಗೆ ಮಾನ್ಯತೆ ನೀಡಬೇಕು. ಕಾಸರಗೋಡು ಜಿಲ್ಲೆಯ ಎಲ್ಲಾ ಸರಕಾರಿ ಆದೇಶಗಳೂ ಕೂಡಾ ಕನ್ನಡ ಭಾಷೆಯಲ್ಲೇ ಕನ್ನಡಿಗರಿಗೆ ದೊರೆಯಬೇಕು. ಕಾಸರಗೋಡಿನ ಕನ್ನಡಿಗರು ವಿಶ್ವಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ಮಧುರೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವಿಶ್ರಾಂತ ಮುಖ್ಯಸ್ಥ ಡಾ.ಹರಿಕೃಷ್ಣ ಭರಣ್ಯ ಹೇಳಿದರು.
    ಅವರು ಬದಿಯಡ್ಕದ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ಸೋಮವಾರ ನಡೆದ "ವಿಶ್ವ ಪುಸ್ತಕ ದಿನಾಚರಣೆ" ಕಾರ್ಯಕ್ರಮದಲ್ಲಿ ಮಾತನಾಡಿದರು.
   ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ವಿರಾಜ್ ಅಡೂರು ಮಾತನಾಡಿ, ಮಾನವನಿಗೆ ನಾಗರಿಕತೆ ಹಾಗೂ ಮನುಷ್ಯತ್ವದ ಸಂಸ್ಕಾರವು ಉತ್ತಮ ಪುಸ್ತಕ ಅಧ್ಯಯನದಿಂದ ದೊರಕುತ್ತದೆ. ಇದರಿಂದ ವ್ಯಕ್ತಿತ್ವ ವಿಕಸನವೂ ಆಗುತ್ತದೆ. 1995ರಲ್ಲಿ ಯುನಸ್ಕೋ ಸಂಸ್ಥೆಯು ವಿಶ್ವ  ಪುಸ್ತಕ ದಿನಾಚರಣೆಯನ್ನು ಪ್ರತೀ ವರ್ಷದ ಎಪ್ರಿಲ್ 23ರಂದು ಆಚರಿಸಲು ಘೋಷಣೆ ಮಾಡಿತು. ಇದರಿಂದ ಅನೇಕ ಲೇಖಕರು, ಪ್ರಕಾಶಕರು, ಪುಸ್ತಕ ಪ್ರೇಮಿಗಳು ಒಂದೇ ಸೂರಿನಡಿಯಲ್ಲಿ ಸೇರುವುದಕ್ಕೆ ಸಾಧ್ಯವಾಯಿತು. ಇಂದು 100ಕ್ಕೂ ಮಿಕ್ಕಿದ ರಾಷ್ಟ್ರಗಳು ವಿಶ್ವ ಪುಸ್ತಕ ದಿನಾಚರಣೆಯನ್ನು ನಡೆಸುತ್ತಿವೆ. ಪುಸ್ತಕ ಪ್ರಕಟಣೆ, ಹೊಸ ಲೇಖಕರ ಪರಿಚಯ, ವಿಚಾರಗಳ ಅನ್ವೇಷಣೆ, ಉತ್ತಮ ಕೃತಿಗಳ ಪ್ರಕಟಣೆ ಮೊದಲಾದ ಅನೇಕ ಉದ್ದೇಶದಿಂದ ವಿಶ್ವ ಪುಸ್ತಕ ದಿನಾಚರಣೆಯನ್ನು ನಡೆಸಲಾಗುವುದು ಎಂದು ಹೇಳಿದರು.
    ವಾಟ್ಸ್ಪ್, ಫೇಸ್ಬುಕ್ನಂತಹಾ ಆಧುನಿಕ ತಂತ್ರಜ್ಞಾನಗಳಿಂದ ಯುವಜನಾಂಗದಲ್ಲಿ ಭಾಷಾ ಸಂವಹನದ ಕೊರತೆ ಕಾಡುತ್ತಿದೆ. ಆದ್ದರಿಂದ ಇಂದಿನ ಮಕ್ಕಳಲ್ಲಿ ಪರಸ್ಪರ ಸಂಬಂಧಗಳ ಬಗ್ಗೆ ಗೌರವ, ಪ್ರೀತಿ ಕಡಿಮೆಯಾಗಿದೆ. ಆಧುನಿಕ ತಂತ್ರಜ್ಞಾನಗಳ ಸದುಪಯೋಗ ನಡೆಯಬೇಕು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಪ್ರಾಂಶುಪಾಲ ಡಾ.ಬೇ.ಸಿ.ಗೋಪಾಲಕೃಷ್ಣ ಹೇಳಿದರು.
   ಕಾರ್ಯಕ್ರಮದಲ್ಲಿ ಕಾಸರಗೋಡಿನಲ್ಲಿ ಕನ್ನಡ ಪುಸ್ತಕೋದ್ಯಮ ಎಂಬ ವಿಚಾರದಲ್ಲಿ ನಿವೃತ್ತ ಉಪನ್ಯಾಸಕ ಎಸ್.ಬಿ.ಖಂಡಿಗೆ, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಕಾಸರಗೋಡಿನ ಹಿರಿಯ ಹಾಸ್ಯ ಸಾಹಿತಿ ಹರೀಶ್ ಪೆರ್ಲ ಅವರನ್ನು ಶಾಲು ಹೊದೆಸಿ ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು. 
   ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಸುನೀತ್ ಕುಮಾರ್ ಡಿ, ನಿವೃತ್ತ ಉಪನೋಂದಾವಣಾಧಿಕಾರಿ ಮಹಮ್ಮದಾಲಿ ಪೆರ್ಲ, ದಸ್ತಾವೇಜು ಬರಹಗಾರ ಕರಿಂಬಿಲ ಲಕ್ಷ್ಮಣ ಪ್ರಭು, ನಿವೃತ್ತ ಶಿಕ್ಷಕ ಬಳ್ಳಂಬೆಟ್ಟು ಈಶ್ವರ ಭಟ್ ಮೊದಲಾದವರು ಉಪಸ್ಥಿತರಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರದ ಸಿರಿಗನ್ನಡ ಪುಸ್ತಕ ಮಳಿಗೆಯ ಕಾಸರಗೋಡು ಜಿಲ್ಲಾ ಸಂಚಾಲಕ ಕೇಳು ಮಾಸ್ತರ್ ಅಗಲ್ಪಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಉಚಿತವಾಗಿ ಪುಸ್ತಕ ವಿತರಣೆ ಮಾಡಲಾಯಿತು. ಇದೇ ಮೇ 23ರಿಂದ ಪ್ರತೀ ತಿಂಗಳು ಬದಿಯಡ್ಕದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಕನ್ನಡ ಸಾಹಿತ್ಯ ಸಿರಿ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries