HEALTH TIPS

No title

            ಸ್ವಚ್ಛ ಬದಿಯಡ್ಕ ನನ್ನ ಬದಿಯಡ್ಕ

    ಬದಿಯಡ್ಕ:-ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಸಾಂಕ್ರಾಮಿಕ ರೋಗಗಳು ಪ್ರಾರಂಭವಾಗುವುದರಿಂದ ಅವುಗಳನ್ನು ತಡೆಗಟ್ಟಲು ಬೇಕಾದ ಅಗತ್ಯದ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಬೇಕಾದುದು ನಮ್ಮ ಕರ್ತವ್ಯವಾಗಿದೆ. ಪರಿಸರ ಸ್ವಚ್ಛತೆ ಹಾಗೂ ಸಂರಕ್ಷಣೆಯ ಪ್ರಜ್ಞೆಯನ್ನು ಜನರಿಗೆ ನೀಡಿ ಎದುರಾಗಬಹುದಾದ ಸಾಂಕ್ರಾಮಿಕ ರೋಗಗಳನ್ನು ತಡೆಯುವಂತೆ ಮಾಡಬಹುದು ಎಂದು ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್ ಹೇಳಿದರು. ಈ ಸಂದರ್ಭದಲ್ಲಿ ಅವರು ಬಸ್ಸು ನಿಲ್ದಾಣದಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದವರನ್ನು ಎಚ್ಚರಿಸಿ ಪ್ರಯಾಣಿಕರಿಗೆ ತೊಂದರೆ ಉಂಟುಮಾಡಬಾರದೆಂದು ಎಚ್ಚರಿಕೆ ನೀಡಿದರು.
ಬದಿಯಡ್ಕ ಗ್ರಾಮ ಪಂಚಾಯತ್,ಆರೋಗ್ಯ ಇಲಾಖೆ,ಕುಟುಂಬಶ್ರೀ ಬದಿಯಡ್ಕ ಬಸ್ ನಿಲ್ದಾಣದ ಪರಿಸರವನ್ನು ಶುಚಿಗೊಳಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ಪ್ರತಿಯೊಬ್ಬರೂ ಶುಚಿತ್ವಕ್ಕೆ ಮೊದಲ ಪ್ರಾಶಸ್ತ್ಯವನ್ನು ನೀಡಿದರೆ ರೋಗ ಬಾರದಂತೆ ತಡೆಗಟ್ಟಬಹುದು. ಎಂದು ಅವರು ಅಭಿಪ್ರಾಯಪಟ್ಟರು.
ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಶೆಟ್ಟಿ ವಿಶ್ವನಾಥ ಪ್ರಭು,ಸಿರಾಜ್ ಮುಹಮ್ಮದ್,ರಾಜೇಶ್ವರಿ,ಆರೋಗ್ಯ ಇಲಾಖೆಯ ಅಧಿಕಾರಿ ದೇವಿಜಾಕ್ಷನ್, ಪಂಚಾಯತ್ ಸಿಡಿ.ಎಸ್ ಅಧ್ಯಕ್ಷೆ ಸುಧಾ ಜಯರಾಂ,ಕುಟುಂಬ ಶ್ರೀ ಸದಸ್ಯೆಯರು,ಆರೋಗ್ಯ ಇಲಾಖೆಯ ಅಧಿಕಾರಿಗಳು ಜೊತೆಗಿದ್ದರು.
     
ನೌಕರರಿಲ್ಲ
ಬದಿಯಡ್ಕ ಗ್ರಾಮ ಪಂಚಾಯತ್ನಲ್ಲಿ ಪೇಟೆ ಶುಚಿತ್ವಕ್ಕೆ ನೌಕರರಿಲ್ಲದಿರುವುದೂ ತ್ಯಾಜ್ಯ ಹೆಚ್ಚಾಗಲು ಪ್ರಧಾನ ಕಾರಣವಾಗಿದೆ. ಪೇಟೆಯ ವಿವಿಧೆಡೆ ತ್ಯಾಜ್ಯದ ರಾಶಿ ತುಂಬಿದ್ದು ಮಳೆಗಾಲದಲ್ಲಿ ಇವುಗಳಲ್ಲಿ ನೀರುನಿಂತು ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಬದಲಾಗುವುದು ನಿಸ್ಸಂಶಯ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಚೀಲಗಳು ಹಾಗೂ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿಟ್ಟ ತ್ಯಾಜ್ಯಗಳು ಮಾತ್ರವಲ್ಲದೆ ಕೊಳೆತ ಮಾಂಸದ ತ್ಯಾಜ್ಯಗಳನ್ನೂ ರಸ್ತೆಬದಿಯಲ್ಲಿ ಎಸೆಯುತ್ತಿರುವುದು ಸಾಂಕ್ರಾಮಿಕ ರೋಗಗಳನ್ನು ಆಹ್ವಾನಿಸಿದಂತೆಯೇ ಸರಿ.

     ಬಸ್ ನಿಲ್ದಾಣ ನಿತ್ಯ ಶುಚಿಗೊಳಿಸುವ ಪತ್ರಿಕಾ ವಿತರಕ ಬಾಲಕೃಷ್ಣ

ಅನೇಕ ವರ್ಷಗಳಿಂದ ಬದಿಯಡ್ಕ ಬಸ್ ನಿಲ್ದಾಣದಲ್ಲಿ ಪತ್ರಿಕೆ ವಿತರಿಸುತ್ತಿರುವ ಬಾಲಕೃಷ್ಣ ಪೊಯ್ಯಕಂಡ ಬಸ್ ನಿಲ್ದಾಣವನ್ನು ಶುಚಿಗೊಳಿಸುತ್ತಿದ್ದು ಅವರ ನಿಸ್ವಾರ್ಥ ಸೇವೆ ಹಾಗೂ ಕಾಳಜಿ ಶ್ಲಾಘನೀಯ. ಎಲ್ಲರಿಗೂ ಪರಿಚಿರಾಗಿರುವ ಬಾಲಕೃಷ್ಣ ಅವರು ಪ್ರತೀ ದಿನ ಬೆಳಗ್ಗೆ ಜಾವ 4.30ಕ್ಕೆ ಬದಿಯಡ್ಕ ಬಸ್ ನಿಲ್ದಾಣಕ್ಕೆ ಆಗಮಿಸಿ ಪತ್ರಿಕೆಯನ್ನು ಓದುಗರಿಗೆ ನೀಡಲು ಸರಿಯಾಗಿ ಜೋಡಿಸಿಡುತ್ತಾರೆ.ಮತ್ತೆ ಮೊದಲ ಬಸ್ ಬರುವುದರೊಳಗೆ ಬಸ್ ನಿಲ್ದಾಣದ ಒಳಭಾಗ,ಪ್ರಯಾಣಿಕರು ನಿಲ್ಲುವ ರಸ್ತೆಯ ಬದಿಯಲ್ಲಿದ್ದ ಕಸವನ್ನು ಗುಡಿಸಿ ಸ್ವಚ್ಛಗೊಳಿಸುತ್ತಾರೆ. ನಿಸ್ವಾರ್ಥ ಮನೋಭಾವದಿಂದ ತನ್ನ ಕಾಯಕದಲ್ಲಿ ಅವರು ಮಗ್ನನಾಗಿರುತ್ತಾರೆ. ಜನರು ಬಸ್ ನಿಲ್ದಾಣಕ್ಕೆ ಆಗಮಿಸುವ ಮೊದಲೇ ಅವರ ಕೆಲಸವನ್ನು ಮುಗಿಸಿ ಪತ್ರಿಕೆಯನ್ನು ವಿತರಿಸುವ ಕಾಯಕದಲ್ಲಿ ತೊಡಗುತ್ತಾರೆ.

ಪ್ರತೀ ವರ್ಷ ಡೆಂಗ್ಯೂ, ನೀಪಾ, ಮಲೇರಿಯಾದಂತ ಮಾರಕ ರೋಗಗಳು ಸಾಮಾನ್ಯ ಜನರನ್ನು ಬಲಿತೆಗೆಯುತ್ತಿರುವುದು ಪ್ರತಿದಿನ ಕಂಡುಬರುತ್ತದೆ. ಶಿಸ್ತಿಲ್ಲದ ಆಹಾರ ಪದ್ಧತಿ ಹಾಗೂ ಜೀವನ ಕ್ರಮ ಹಾಗೂ ಸ್ವಚ್ಛತೆಯ ಕೊರತೆ ಈ ಸಮಸ್ಯೆಗೆ ಮುಖ್ಯ ಕಾರಣ. ಆದುದರಿಂದ ಪ್ರತಿಯೊಬ್ಬರೂ ತಮ್ಮ ಮನೆ ಹಾಗೂ ಪರಿಸರವದ ಶುಚಿತ್ವಕ್ಕೆ ಆದ್ಯತೆ ನೀಡಿ ರೋಗಾಣುಗಳು ಸೃಷ್ಟಿಯಾಗದಂತೆ ಜಾಗ್ರತೆವಹಿಸಬೇಕು.
ಶ್ಯಾಮ್ಪ್ರಸಾದ್ ಮಾನ್ಯ(ಆರೋಗ್ಯ,ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ)

ನಮ್ಮ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡುವುದು ನಮ್ಮ ಕರ್ತವ್ಯ. ಅಂತೆಯೇ ಉಪಯೋಗ ಶೂನ್ಯ ವಸ್ತುಗಳಾದ ಪ್ಲಾಸ್ಟಿಕ್ ಚೀಲಗಳು, ಮಕ್ಕಳ ಆಟಿಕೆಗಳೂ ಸೇರಿದಂತೆ ಮಣ್ಣಿನಲ್ಲಿ ಸೇರದೆ ನೀರು ಕಟ್ಟಿನಿಂತು ರೋಗಾಣುಗಳ ಹುಟ್ಟಿಗೆ ಕಾರಣವಾಗುವ ವಸುಗಳ ಬಗ್ಗೆ ಜಾಗ್ರತೆವಹಿಸಬೇಕು. ಕಂಡಕಂಡಲ್ಲಿ ಎಸೆಯದೆ ಸೂಕ್ತವಾದ ರೀತಿಯಲ್ಲಿ ಮಾಲಿನ್ಯ ಸಂಸ್ಕರಣೆ ಮಾಡಬೇಕು. ಪ್ರತಿಯೊಬ್ಬರೂ ಹಾಗೆ ಮಾಡಿದಾಗ ಗ್ರಾಮ ಸ್ವಚ್ಛವಾಗುತ್ತದೆ. ಮಾತ್ರವಲ್ಲದೆ ಆರೋಗ್ಯಭಾಗ್ಯ ನಮ್ಮದಾಗುತ್ತದೆ.

ಕೆ.ಎನ್ ಕೃಷ್ಣ ಭಟ್. ಅಧ್ಯಕ್ಷರು ಬದಿಯಡ್ಕ ಗ್ರಾಮ ಪಂಚಾಯತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries