HEALTH TIPS

No title

                 ಜೀವ-ಭಾವಗಳಿಗೆ ನಿಕಟತೆಯ ಕಾವ್ಯ ಹುಟ್ಟಬೇಕು-ಬಾಲಕೃಷ್ಣ ಬೇರಿಕೆ
                  ಕವಿ ಹೃದಯದ ಸವಿ ಮಿತ್ರರು ವೇದಿಕೆಯ ಎರಡನೇ ಸಾಹಿತ್ಯ ಕಾಯಕ ಬದಿಯಡ್ಕದಲ್ಲಿ ಸಂಪನ್ನ     
   ಬದಿಯಡ್ಕ: ಕನ್ನಡ ಕಾವ್ಯ ಪರಂಪರೆ ಗಟ್ಟಿ ನೆಲೆ ತಂದ ನೆಲ ಗಡಿನಾಡು ಕಾಸರಗೋಡು. ಹೊಸ ತಲೆಮಾರಿನ ಉದಯೋನ್ಮುಖ ಬರಹಗಾರರಿಗೆ ಸೂಕ್ತ ಮಾರ್ಗದರ್ಶನದೊಡನೆ ವೇದಿಕೆಯೊದಗಿಸುವ ನಿಟ್ಟಿನಲ್ಲಿ ನಿರಂತರ ಸಾಹಿತ್ಯ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ಉಪನ್ಯಾಸಕ, ಸಾಹಿತಿ ಬಾಲಕೃಷ್ಣ ಬೇರಿಕೆ ಅಭಿಪ್ರಾಯ ವ್ಯಕ್ತಪಡಿಸಿದರು.
   ಪೆರ್ಲದ "ಕವಿ ಹೃದಯದ ಸವಿ ಮಿತ್ರರು" ವೇದಿಕೆಯ ಬದಿಯಡ್ಕ ನವಜೀವನ ಶಾಲೆಯಲ್ಲಿ ಭಾನುವಾರ ಅಪರಾಹ್ನ ಆಯೋಜಿಸಲಾದ ಕವಿಗೋಷ್ಠಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
   ಸಮಕಾಲೀನ ವಿದ್ಯಮಾನಗಳಿಗೆ ಸ್ಪಂದಿಸುವ ಕಾವ್ಯಗಳ ಹುಟ್ಟು ರಸ ಮತ್ತು ಧ್ವನಿಪೂರ್ಣತೆಯಿಂದೊಡಗೂಡಿ ಹೊಸ ಭಾವ ಸೃಷ್ಟಿಗೆ ಕಾರಣವಾಗುತ್ತದೆ. ಹೊಸ ಆಲೋಚನೆಗಳು ವಿಭಿನ್ನ ಆಯಾಮಗಳಿಂದ ಅಕ್ಷರ ರೂಪದಲ್ಲಿ ಧ್ವನಿಸಿದಾಗ ಸಾಗಿಬಂದ ಹಾದಿ, ವರ್ತಮಾನದ ನೆಲೆ ಮತ್ತು ಭವಿಷ್ಯದ ಪರಿಕಲ್ಪನೆಗಳು ನಿಖರಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಜೀವ-ಭಾವಗಳಿಗೆ ನಿಕಟತೆಯಿರುವ ಕಾವ್ಯಗಳು ಹುಟ್ಟಿಕೊಳ್ಳುತ್ತವೆ ಎಂದು ಅವರು ತಿಳಿಸಿದರು.
   ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕವಿ, ಪತ್ರಕರ್ತ ವಿರಾಜ್ ಅಡೂರು ಮಾತನಾಡಿ, ಕಾಸರಗೋಡಿನ ಕನ್ನಡ ಪ್ರಜ್ಞೆಯ ಧ್ವನಿಯಾಗಿ ಗಡಿನಾಡಿನ ಸಾಹಿತ್ಯ ಪ್ರಪಂಚ ಬೆಳೆದುಬಂದಿದ್ದು, ಇಂದದು ಆ ಭಾವಗಳಿಂದ ವಿಮುಖವಾಗುತ್ತಿರುವುದು ಖೇದಕರ. ಸಾಹಿತ್ಯ, ಕಾವ್ಯಗಳು ಭಾಷೆಯ ಬೆಳವಣಿಗೆಯ ದೃಷ್ಟಿಯಲ್ಲಿ ಪ್ರಧಾನವಾಗಿದ್ದು, ಗಡಿನಾಡಿನ ಅತಂತ್ರವ ಕನ್ನಡ ಮನಸ್ಸುಗಳನ್ನು ಒಗ್ಗೂಡಿಸುವ ಕವನಗಳು ಹುಟ್ಟಬೇಕು ಎಂದು ತಿಳಿಸಿದರು.
    ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಹಿರಿಯ ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಅವರು ಮಾತನಾಡಿ, ಸಾರ್ವಕಾಲಿಕ ಮೌಲ್ಯಗಳಿಂದ ಪರಿಪುಷ್ಟವಾದ ಸಾಹಿತ್ಯಗಳು ಸಮಾಜಕ್ಕೆ ಪ್ರೇರಣೆ ನೀಡಿ ಬದಲಾವಣೆಗಳಿಗೆ, ಕ್ರಾಂತಿಗೆ ಕಾರಣವಾಗಬಲ್ಲದು. ಈ ನಿಟ್ಟಿನಲ್ಲಿ ಹೆಚ್ಚು ಬಲಶಾಲಿಯಾದ ಕಾವ್ಯ ವೃಕ್ಷಗಳು ಎಲ್ಲೆಡೆ ಚಾಚಲ್ಪಡಬೇಕು ಎಂದು ಅವರು ಕರೆನೀಡಿದರು.
   ಹಿರಿಯ ಸಾಹಿತಿ ಹರೀಶ್ ಪೆರ್ಲ, ಶಾರದಾ ಎಸ್. ಭಟ್ ಕಾಡಮನೆ,ಜ್ಯೋಸ್ನ್ಸಾ ಎಂ.ಕಡಂದೇಲು, ಉದಯೋನ್ಮುಖ ಕವಿಗಳಾದ ಚಿನ್ಮಯಕೃಷ್ಣ, ಚಿತ್ತರಂಜನ್ ಕಡಂದೇಲು,ಲತಾ ಆಚಾರ್ಯ ಬನಾರಿ, ಶ್ವೇತಾ ಕಜೆ, ದಯಾನಂದ ರೈ ಕಳ್ವಾಜೆ, ಶ್ಯಾಮಲಾ ರವಿರಾಜ್ ಕುಂಬಳೆ, ಸುಭಾಶ್ಚಂದ್ರ ಪೆರ್ಲ, ಮಣಿರಾಜ್ ವಾಂತಿಚ್ಚಾಲ್ ಮೊದಲಾದವರು ಸ್ವರಚಿತ ಕವಿತೆಗಳನ್ನು ವಾಚಿಸಿದರು. 
    ಕವಿ ಹೃದಯದ ಸವಿಮಿತ್ರರು ವೇದಿಕೆಯ ಸಂಚಾಲಕ ಮಣಿರಾಜ್ ವಾಂತಿಚ್ಚಾಲ್ ಸ್ವಾಗತಿಸಿ, ಪುರುಷೋತ್ತಮ ಭಟ್ ಕೆ.ವಂದಿಸಿದರು. ಪ್ರಭಾವತಿ ಕೆದಿಲಾಯ ಪುಂಡೂರು ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries