HEALTH TIPS

No title

                ಮುಳಿಯಾರಿನಲ್ಲಿ ಶೇಣಿ ಮಾಸದ ನೆನಪು : ಸರಣಿ ಕೂಟಕ್ಕೆ ಚಾಲನೆ
     ಮುಳ್ಳೇರಿಯ: ಯಕ್ಷಲೋಕದ ದಂತಕತೆ ಶೇಣಿ ಗೋಪಾಲಕೃಷ್ಣ ಭಟ್ಟರ ಶತಮಾನೋತ್ತರ ಶತಕ ಸರಣಿಯಂಗವಾಗಿ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ತಿಂಗಳಿಗೊಮ್ಮೆ ಶೇಣಿ ಮಾಸದ ನೆನಪಿನೊಂದಿಗೆ ತಾಳಮದ್ದಳೆ ಸರಣಿ ಕೂಟಕ್ಕೆ ಶನಿವಾರ ಚಾಲನೆ ನೀಡಲಾಯಿತು.
      ಶ್ರೀ ಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಕ್ಷೇತ್ರದ ಟ್ರಸ್ಟಿ ಸೀತಾರಾಮ ಬಳ್ಳುಳ್ಳಾಯ ಅವರು ದೀಪ ಬೆಳಗಿಸಿ `ಮಾಸದ ನೆನಪುಗಳ ಸರಣಿ ಕೂಟ'ಕ್ಕೆ ಚಾಲನೆಯಿತ್ತರು. ಈ ಸಂದರ್ಭ ನಡೆದ ಶೇಣಿ ಸಂಸ್ಮರಣೆಯಲ್ಲಿ ಶೇಣಿಯವರ ಒಡನಾಡಿಯಾಗಿದ್ದ ಬೆಳ್ಳಿಗೆ ನಾರಾಯಣ ಮಣಿಯಾಣಿ ಸಂಸ್ಮರಣಾ ಭಾಷಣ ಮಾಡಿ ಶೇಣಿಯವರು ತಡವಾಗಿ ಯಕ್ಷಗಾನಕ್ಕೆ ಬಂದರೂ ಅವರೊಬ್ಬ ಪರಿಪೂರ್ಣ ಕಲಾವಿದ. ಅವರಿಗೆ ನಾಟ್ಯಗಳು ಗೊತ್ತಿಲ್ಲ ಎಂಬ ಆಕ್ಷೇಪವನ್ನು ಅವರೇ ತುಂಬಿದ ಸಭೆಯಲ್ಲಿ ಅಲ್ಲಗಳೆದು, ಯಾವ ತಾಳಕ್ಕೆ ಬೇಕಾದರೂ ಕುಣಿದು ತೋರಿಸುತ್ತೇನೆಂದು ಸವಾಲೊಡ್ಡಿ, ಕುಣಿದು ತೋರಿಸಿದವರು. ಅವರು ರಂಗಭೂಮಿಯನ್ನು ಅಕ್ಷರಶ: ಆಳಿದ ಕಲಾವಿದ ಎಂದು ಒಡನಾಟದ ಮೆಲುಕುಗಳನ್ನು ಹಂಚಿಕೊಂಡರು.
     ಶೇಣಿ ರಂಗಜಂಗಮ ಟ್ರಸ್ಟ್ ಕಾಸರಗೋಡು, ಯಕ್ಷತೂಣೀರ ಸಂಪ್ರತಿಷ್ಠಾನ ಮುಳಿಯಾರು ಮತ್ತು ಮುಳಿಯಾರು ಕ್ಷೇತ್ರದ ಸಹಭಾಗಿತ್ವದಲ್ಲಿ ಪ್ರತೀ ತಿಂಗಳೊಗೊಂದರಂತೆ ಸರಣಿ ತಾಳಮದ್ದಳೆ ಅಭಿಯಾನ ಮತ್ತು ಸಂಸ್ಮರಣಾ ಕಾರ್ಯಕ್ರಮಗಳು ನಡೆಯಲಿದ್ದು, ಮುಂದಿನ ತಿಂಗಳ ಕಾರ್ಯಕ್ರಮವನ್ನು ಜುಲೈ  15ರಂದು ನಡೆಸಲು ನಿರ್ಧರಿಸಲಾಗಿದೆ.
   ಸಮಾರಂಭದಲ್ಲಿ `ಕಣಿಪುರ' ಯಕ್ಷಗಾನ ಮಾಸಪತ್ರಿಕೆಯ ಸಂಪಾದಕ ಎಂ.ನಾ.ಚಂಬಲ್ತಿಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಶೇಣಿಯವರ ದೀರ್ಘಕಾಲೀನ ಒಡನಾಡಿ, ಸಹ ಅರ್ಥಧಾರಿ ಅಡ್ಕ ಗೋಪಾಲಕೃಷ್ಣ ಭಟ್ಟರು ಅಧ್ಯಕ್ಷತೆ ವಹಿಸಿ ಶೇಣಿಯವರ ಜೊತೆಗಿನ ಸಹವಾಸದ ಅನುಭವಗಳನ್ನು ತೆರೆದಿಟ್ಟರು. ಶೇಣಿ ರಂಗಜಂಗಮ ಟ್ರಸ್ಟ್ ಸಂಚಾಲಕ, ಅರ್ಥಧಾರಿ ವೇಣುಗೋಪಾಲ ಭಟ್ ಶೇಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ಯಕ್ಷ ತೂಣೀರದ ಪೆರಡಂಜಿ ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ಬಳ್ಳಮೂಲೆ ಗೋವಿಂದ ಭಟ್ ವಂದಿಸಿದರು.
    ಬಳಿಕ ತಾಮ್ರಧ್ವಜ ಕಾಳಗ ಆಖ್ಯಾನದ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ತಲ್ಪನಾಜೆ ವೆಂಕಟ್ರಮಣ ಭಟ್, ಬಳ್ಳಮೂಲೆ ಈಶ್ವರ ಭಟ್, ಈಶ್ವರ ಮಲ್ಲ, ಮುಮ್ಮೇಳದಲ್ಲಿ ಅಡ್ಕ ಗೋಪಾಲಕೃಷ್ಣ ಭಟ್, ಬೆಳ್ಳಿಗೆ ನಾರಾಯಣ ಮಣಿಯಾಣಿ, ಅಡ್ಕ ಸುಬ್ರಹ್ಮಣ್ಯ ಭಟ್, ಪೆರಡಂಜಿ ಗೋಪಾಲಕೃಷ್ಣ ಭಟ್, ಶಿವಶಂಕರ ದಿವಾಣ ಮತ್ತು ಶೇಣಿ ವೇಣುಗೋಪಾಲ ಭಟ್ ಪಾಲ್ಗೊಂಡರು.

    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries