HEALTH TIPS

No title

                 ಪೆರ್ಲದಲ್ಲಿ 6 ದಿನಗಳ ಯಕ್ಷಕೂಟ ಸರಣಿ ಗಾನವೈಭವದೊಂದಿಗೆ ಚಾಲನೆ
    ಪೆರ್ಲ: ಯಕ್ಷಗಾನ ಕಲೆಯನ್ನು ಇಂದು ಇಷ್ಟೊಂದು ಮೇಲ್ಮಟ್ಟಕ್ಕೇರಿಸುವಲ್ಲಿ ಕೊಡುಗೆ ನಿಡಿದ ಮಹಾನ್ ಸಂತರ ಪೈಕಿ ಶೇಣಿ ಗೋಪಾಲಕೃಷ್ಣ ಭಟ್ ಅವರು ಅಗ್ರಗಣ್ಯರು.    ಶೇಣಿ ಶತಮಾನ ಆಚರಣೆಗಳು ಅಲ್ಲಲ್ಲಿ ನಡೆಯುವ ಮೂಲಕ ಶೇಣಿಯವರನ್ನು ಹೊಸ ಪೀಳಿಗೆಗೆ ಪರಿಚಯಿಸುವ ಕೆಲಸದ ಜೊತೆಗೆ ಹೊಸ ಕಲಾವಿದರ ಉದಯಕ್ಕೆ ಶೇಣಿ ರಂಗಜಂಗಮ ವೇದಿಕೆಯೊದಗಿಸುತ್ತಿರುವುದು ಸ್ತುತ್ಯರ್ಹ ಕೆಲಸವೆಂದು ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದ ಪ್ರಬಂಧಕ ಸೀತಾರಾಮ ಬಳ್ಳುಳ್ಳಾಯ ಅಭಿಪ್ರಾಯಪಟ್ಟರು.
  ಶೇಣಿ ರಂಗಜಂಗಮ ಟ್ರಸ್ಟ್ ಕಾಸರಗೋಡು ಮತ್ತು ಯಕ್ಷ ಸ್ನೇಹಿ ಬಳಗ ಪೆರ್ಲ ಇದರ ಜಂಟಿ ನೇತೃತ್ವದಲಿ ಶೇಣಿ ಶತಕ ಸರಣಿಯಂಗವಾಗಿ ನಾಡಿನಾದ್ಯಂತ ನಡೆಯುವ ಕಾರ್ಯಕ್ರಮಗಳ ಭಾಗವಾಗಿ ಪೆರ್ಲ ಶ್ರೀ ಸತ್ಯನಾರಾಯಣ ಸಭಾಮಂದಿರದಲ್ಲಿ 6 ದಿನಗಳ ಯಕ್ಷಕೂಟ ಸರಣಿಗೆಯನ್ನು ಬುಧವಾರ  ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. 
  ಸಮಾರಂಭದಲ್ಲಿ ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಪ್ರಧಾನ ಸಂಪಾದಕ ಎಂ.ನಾ.ಚಂಬಲ್ತಿಮಾರ್ ನುಡಿನಮನ ಸಲ್ಲಿಸಿ ಮಾತನಾಡಿ ಶೇಣಿಯವರು ಯಕ್ಷಗಾನದ ದ್ರಾಷ್ಟಾರರು. ಅವರ ವಿಯೋಗದೊಂದಿಗೆ ಯಕ್ಷಗಾನದ ವೈಚಾರಿಕ ಪ್ರಭುತ್ವದ ಮಾತಿನ ಯುಗ ಅಂತ್ಯಗೊಂಡಿದೆ. ಆದರೆ ಬೆರಗು ಹುಟ್ಟಿಸುವ ಅವರ ಜೀವನ ಸಾಧನೆ ನಮ್ಮ ಮುಂದಿದೆ. ಅಭಿಮಾನಿಗಳು ಮನೆ, ಆಸ್ತಿಗಳನ್ನು ಕೊಟ್ಟು ದಕ್ಷಿಣ ಕನ್ನಡ ಜಿಲ್ಲೆಗೆ ಅವರನ್ನು ಕರೆದಿದ್ದರು. ಆದರೆ ಕಾಸರಗೋಡನ್ನು ಬಿಟ್ಟಗಲದ ಅವರು ತಾಯ್ನೆಲದ ಬಗ್ಗೆ, ಇಲ್ಲಿನ ಸಂಸ್ಕೃತಿಗಳ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು. ದ್ವೈತಾದ್ವೈತಗಳ ಸಹಿತ ವೇದವಾಞ್ಮಯಗಳನ್ನು ಯಕ್ಷಗಾನದ ನುಡಿಗಡಲಲ್ಲಿ ಹರಿಯಬಿಟ್ಟು ಯಕ್ಷಗಾನವನ್ನು ಭಾಷಿಕವಾಗಿ, ಬೌದ್ಧಿಕವಾಗಿ ಎತ್ತರಿಸಿದ ಅವರಂತೆ ಮತ್ತೊಬ್ಬ ಕಲಾವಿದರಿಲ್ಲ. ಅವರು ಅಗಲಿದ ಬಳಿಕ ಯಕ್ಷವಾಞ್ಮಯದಲ್ಲಿ  ವೈಚಾರಿಕ ಬರಡುತನದ ಶೂನ್ಯತೆ ಆವರಿಸಿದೆ. ಹೊಸ ತಲೆಮಾರು ಇಂಥ ಸಾಧಕರ ಬಗ್ಗೆ ಅರಿಯುತ್ತಾ, ತಾವು ಸಾಧನೆಗೈಯ್ಯುವುದರ ಜೊತೆಯಲ್ಲೇ ಮಣ್ಣಿನ ಕಲಾ ಸಂಸ್ಕೃತಿಗಳ ಬಗ್ಗೆ ಅಂತರಂಗದ ಅಭಿಮಾನ ಹೊಂದುವ ಅಗತ್ಯ ವರ್ತಮಾನದಲ್ಲಿದೆ ಎಂದರು.
   ಪೆರ್ಲ ಶ್ರೀ ವಿದ್ಯಾರಣ್ಯ ವಿದ್ಯಾವರ್ಧಕ ಸಂಘದ ಪ್ರಬಂಧಕ ಶ್ರೀಕೃಷ್ಣ ವಿಶ್ವಾಮಿತ್ರ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಪೆರ್ಲ ಶ್ರೀ ವಿದ್ಯಾರಣ್ಯ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ.ಜಿ.ರಾಮ ಭಟ್ ಅಧ್ಯಕ್ಷತೆ ವಹಿಸಿದರು. ಯಕ್ಷಸ್ನೇಹಿ ಬಳಗದ ಸತೀಶ ಪುಣಿಂಚಿತ್ತಾಯ ಪೆರ್ಲ ಸ್ವಾಗತಿಸಿ, ಶೇಣಿ ರಂಗಜಂಗಮದ ಸಂಚಾಲಕ ಶೇಣಿ ವೇಣುಗೋಪಾಲ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು. ಅಮೈ ಉದಯ ಶಂಕರ ಭಟ್ ವಂದಿಸಿದರು.
     ಗಮನಸೆಳೆದ ಕಿಶೋರ ಗಾನವೈಭವ : ಉದ್ಘಾಟನಾ ಸಮಾರಂಭದ ಬಳಿಕ ನಡೆದ ಯಕ್ಷ-ಗಾನವೈಭವದಲ್ಲಿ  ಮೊದಲಿಗೆ ಯಕ್ಷಗಾನ ಭಾಗವತಿಕೆ ಅಭ್ಯಸಿಸುತ್ತಿರುವ ಕಿರಿಯ ಪ್ರತಿಭೆಗಳಾದ ಸಮೃದ್ಧ ಪುಣಿಂಚಿತ್ತಾಯ,  ವಾಣಿಶ್ರೀ ಬಜಕೂಡ್ಲು, ರತ್ನಮಾಲಾ ಎಸ್.ವಿ. ಅವರಿಂದ ಬೇರೆ-ಬೇರೆ ಪ್ರಸಂಗದ  ಪದ್ಯಗಳ ಹಾಡುಗಾರಿಕೆ ನಡೆಯಿತು. ಮಕ್ಕಳ ಭವಿಷ್ಯಕ್ಕೆ ಅವಕಾಶಗಳ ಪ್ರೋತ್ಸಾಹ ನೀಡುವ ದೃಷ್ಟಿಯಲ್ಲಿ ಏರ್ಪಡಿಸಿದ ಈ ಕಿಶೋರ ಗಾನವೈಭವ ಪ್ರೇಕ್ಷಕರ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು. ಬಳಿಕ ಕೊಲ್ಲಂಗಾನ ಮೇಳದ ಭಾಗವತರುಗಳಾದ ಸತೀಶ ಪುಣಿಂಚಿತ್ತಾಯ ಪೆರ್ಲ, ಮನೋಹರ ಬಳ್ಳಾಲ್ ಅಡ್ವಳ ಇವರಿಂದ ದ್ವಂದ್ವ ಗಾನವೈಭವ ನಡೆಯಿತು. ಹಿಮ್ಮೇಳದಲ್ಲಿ ಶ್ರೀಧರ ಎಡಮಲೆ ಮತ್ತು ಅನೂಪ್ ಸ್ವರ್ಗ ಪಾಲ್ಗೊಂಡರು. ಶೇಣಿ ವೇಣುಗೋಪಾಲ ಭಟ್ ನಿರೂಪಣೆಗೈದರು.
    ಅ.8ರಂದು ಬುಧವಾರ ಬೇಂದ್ರೋಡು ಗೋವಿಂದ ಭಟ್ ಬಳಗ `ಮಾಗಧವಧೆ, 9ರಂದು ವಿಶ್ವಭಾರತೀ ಯಕ್ಷಸಂಜೀವಿನಿ ಟ್ರಸ್ಟ್ ಮುಡಿಪು ಇವರಿಂದ 'ಜಾಂಬವತಿ ಕಲ್ಯಾಣ' ನಡೆಯಿತು. ಆ.10ರಂದು ಧೀಶಕ್ತಿ ಮಹಿಳಾ ಬಳಗ ಪುತ್ತೂರು ಇವರಿಂದ `ಸಮರ ಸೌಗಂಧಿಕ',  11ರಂದು ಕಾವುಗೋಳಿ ಶ್ರೀ ವಿಷ್ಣುವಿನಾಯಕ ಮಹಿಳಾ ತಂಡದಿಂದ `ಕರ್ಣಬೇಧನ' ಮತ್ತು 12ರಂದು ಸಮಾರೋಪ ಸಮಾರಂಭ ಮತ್ತು ಪ್ರಸಿದ್ಧ ಕಲಾವಿದರಿಂದ `ಉತ್ತರನ ಪೌರುಷ' ತಾಳಮದ್ದಳೆ ನಡೆಯಲಿದೆ. ಪ್ರತಿದಿನ ಸಂಜೆ 4.30ರಿಂದ ಪೆರ್ಲದ ಸ.ನಾ.ಮಂದಿರದಲ್ಲಿ ಸಮಾರಂಭ ನಡೆಯಲಿದೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries