ಕುಂಬಳೆ: ಟಿಪ್ಪರ್ ಲಾರಿ ಹಾಗೂ ಬಸ್ ಮುಖಾಮುಖಿ ಡಿಕ್ಕಿಯಾಗಿ ಹಲವರು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ ಮಧ್ಯಾಹ್ನ ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಅಪಘಾತದಲ್ಲಿ ಬಸ್ ಚಾಲಕ ಚಂದ್ರಹಾಸ ಕಿದೂರು(40), ಪ್ರಯಾಣಿಕರಾದ ಮುರಳೀ ಭಟ್ ಪಾವಲಕೋಡಿ(55),ಸಂಧ್ಯಾ ಬಾಯಾರು(20), ಸಿಲು(25), ಅಬ್ದುಲ್ ರಫೀಕ್ ಸೋಂಕಾಲ್(58), ಬದ್ರಲ್ ಮುಶಾನ್(19), ಅಫಾನಾ(ಅಟ್ಟೆಗೋಳಿ), ರಾಮಚಂದ್ರ ಬಾಯಿಕಟ್ಟೆ(47), ಸುಹರಾ ಅಟ್ಟೆಗೋಳಿ(40), ಹನಾನ ಅಟ್ಟೆಗೋಳಿ(18), ಬಸ್ ನಿವರ್ಾಹಕ ಚಂದ್ರಹಾಸ ಕಿದೂರು(35) ಎಂಬವರು ತೀವ್ರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕನಿಯಾಲ-ಕಾಸರಗೋಡು ರಸ್ತೆಯಲ್ಲಿ ಸಂಚರಿಸುವ ಶಿವಪ್ರಭಾ ಖಾಸಗೀ ಬಸ್ ಕುಂಬಳೆ ಕಣಿಪುರ ಶ್ರೀಕ್ಷೇತ್ರ ಸಮೀಪ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಸರಗೋಡಿನತ್ತ ಸಂಚರಿಸುತ್ತಿದ್ದಾಗ ಕುಂಬಳೆ ಕಡೆಯಿಂದ ಉಪ್ಪಳದತ್ತ ತೆರಳುತ್ತಿದ್ದ ಟಿಪ್ಪರ್ ಮತ್ತೊಂದು ವಾಹನವನ್ನು ದಾಟಿ ಸಂಚರಿಸುತ್ತಿದ್ದಾಗ ಈ ಅಪಘಾತ ನಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ ಪಲ್ಟಿಯಾಗಿ ತೀವ್ರಹಾನಿಗೊಂಡು ರಸ್ತೆಯ ಪಕ್ಕ ನಿಂತಿತು. ಬಸ್ ಚಾಲಕ ಟಿಪ್ಪರ್ ನೊಳಗೆ ಸಿಲುಕಿಕೊಂಡಿದ್ದು ಸಾರ್ವಜನಿಕರು ತಕ್ಷಣ ಆಗಮಿಸಿ ಹೊರತೆಗೆದರು. ಕುಂಬಳೆ ಪೋಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಅಪಘಾತದಲ್ಲಿ ಇನ್ನಷ್ಟು ಪ್ರಯಾಣಿಕರು ಗಾಯಗೊಂಡಿದ್ದು ಕುಂಬಳೆ ಹಾಗೂ ಕಾಸರಗೋಡಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅಪಘಾತದಿಂದ ಗಂಟೆಗಳಷ್ಟು ಹೊತ್ತು ಹೆದ್ದಾರಿ ಸಂಚಾರ ಮೊಟಕುಗೊಂಡಿತು.