ಸಾಹಿತ್ಯ ಬರಹಗಳಿಂದ ಸಂಭ್ರಮವೇ ಹೊರತು ಸಂಘರ್ಷ ಸೃಷ್ಟಿಯಾಗಬಾರದು-ಡಾ.ಸದಾನಂದ ಪೆರ್ಲ ಸಾಹಿತ್ಯ ಸಂಭ್ರಮ 2018 ಆಶಯ ಭಾಷಣದಲ್ಲಿ ಅಭಿಮತ
0
ಡಿಸೆಂಬರ್ 04, 2018
ಬದಿಯಡ್ಕ: ಇತ್ತೀಚೆಗೆ ದಿಢೀರ್ ಸಾಹಿತ್ಯದ ಸೃಷ್ಟಿ ಆಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಜೊತೆಗೆ ದ್ವೇಶ-ನಿಂದನೆಗಳಂತಹ ಮನೋಸ್ಥಿತಿಗಳೂ ಬೆಳವಣಿಗೆ ಪಡೆಯುತ್ತಿದೆ. ಜನಪ್ರೀಯತೆಯ ಹುಚ್ಚಿಗೆ ಇಂಬುನೀಡದೆ ಅಧ್ಯಯನದ ಮೂಲಕ ಹೆಚ್ಚೆಚ್ಚು ತಿಳಿದು ಯಾವುದಕ್ಕೂ ಬದ್ದರಾಗದೆ ಮಧ್ಯಮ ಮಾರ್ಗ ಹಿಡಿಯುವ ಪರಿಪಾಠ ಬೆಳೆಸಬೇಕು ಎಂದು ಮಂಗಳೂರು ಆಕಾಶವಾಣಿಯ ನಿಲಯ ಕಾರ್ಯಕ್ರಮ ನಿರ್ವಾಹಕ ಡಾ.ಸದಾನಂದ ಪೆರ್ಲ ಕರೆನೀಡಿದರು.
ಪುತ್ತೂರಿನ ಸಾಹಿತ್ಯ ವೇದಿಕೆ, ಮಾನ್ಯದ ಯಕ್ಷಮಿತ್ರರು ಮಾನ್ಯ, ಉಪ್ಪಿನಂಗಡಿಯ ಸತ್ಯಶಾಂತಾ ಪ್ರೊಡಕ್ಷನ್ಸ್ ಹಾಗೂ ಕೆದಿಲಾಯ ಪ್ರತಿಷ್ಠಾನ ಕಾಸರಗೋಡು ಘಟಕದ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನೀರ್ಚಾಲು ಸಮೀಪದ ಪುದುಕೋಳಿ ಶೇಷ ಸಭಾ ಭವನದಲ್ಲಿ ಆಯೋಜಿಸಲಾದ ಸಾಹಿತ್ಯ ಸಂಭ್ರಮ 2018-19 ಕಾರ್ಯಕ್ರಮದಲ್ಲಿ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸಾಹಿತ್ಯ ಸಂಭ್ರಮದ ಆಶಯ ಭಾಷಣಗೈದು ಅವರು ಮಾತನಾಡಿದರು.
ಮನಸ್ಸುಗಳನ್ನು ಪರಸ್ಪರ ಬೆಸೆಯುವ ಸಾಹಿತ್ಯಗಳು ಬೇಕು. ಗ್ರಾಮೀಣ ಪರಂಪರೆಯ ಗಟ್ಟಿ ಸಾಹಿತ್ಯಗಳು ಇದನ್ನು ಸಾಕಾರಗೊಳಿಸಬಲ್ಲದು. ಅಧ್ಯಯನ ಮತ್ತು ಭಾಷಾ ಶುದ್ದಿಯ ಬರಹಗಳು ಭಾಷೆ, ಸಂಸ್ಕøತಿಯನ್ನು ಉನ್ನತ ಮಟ್ಟಕ್ಕೇರಿಸುತ್ತದೆ ಎಂದ ಅವರು ಸಾಹಿತ್ಯಗಳಿಂದ ಸಂಭ್ರಮ ಮಾತ್ರವೇ ಬೇಕಿದ್ದು, ಸಂಘರ್ಷವಲ್ಲ ಎಂದು ಈ ಸಂದರ್ಭ ತಿಳಿಸಿದರು.
ಯಕ್ಷಮಿತ್ರರು ಮಾನ್ಯ ಸಂಸ್ಥೆಯ ಅಧ್ಯಕ್ಷರೂ, ಕಾರ್ಯಕ್ರಮದ ರೂವಾರಿಗಳೂ ಆದ ಕೃಷ್ಣಮೂರ್ತಿ ಪುದುಕೋಳಿ ಅವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮಧುರೈ ಕಾಮರಾಜ ವಿವಿಯ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ, ಸಾಹಿತಿ-ಸಂಶೋಧಕ ಡಾ.ಹರಿಕೃಷ್ಣ ಭರಣ್ಯ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ, ಮನೆಮನೆಗಳಲ್ಲಿ ಸಾಹಿತ್ಯದ ಸಂಸ್ಕøತಿ ಕಾಸರಗೋಡಿನ ವಿಶೇಷತೆಯಾಗಿದೆ. ಆದರೆ ಕಾರ್ಯಕ್ರಮಗಳ ಆಯೋಜನೆಯಲ್ಲಿ ತೊಡಗಿಸಿಕೊಂಡಷ್ಟು ತಮ್ಮ ಬರಹಗಳಲ್ಲಿ ಫ್ರೌಢಿಮೆಯ ಕೊರತೆ ಎದ್ದು ಕಾಣುತ್ತಿರುವುದು ಆತಂಕಕಾರಿ ಎಂದು ತಿಳಿಸಿದರು. ಅನುಭವಗಳನ್ನು ಹೆಚ್ಚಿಸುವ ಸಾಹಿತ್ಯಗಳು ಮೂಡಿಬರಬೇಕು. ಎಳೆಯರನ್ನು ಎಳೆದು ತರಬೇಕು ಎಂದು ಅವರು ತಿಳಿಸಿದರು.
ಹಿರಿಯ ಸಾಹಿತಿ ವಿ.ಬಿ.ಅರ್ತಿಕಜೆ ಉಪಸ್ಥಿತರಿದ್ದು ಮಾತನಾಡಿ, ಸಾಹಿತ್ಯದಲ್ಲಿ ನಿತ್ಯಜೀವನದ ನವುರಾದ ಹಾಸ್ಯದ ಲೇಪವಿದ್ದಾಗ ಆಪ್ಯಾಯತೆ ಮೂಡಿಬರುತ್ತದೆ. ಚಿವುಟುವ ಇಂತಹ ಪ್ರಕ್ರಿಯೆ ಬಳಿಕ ಸುಧೀರ್ಘ ಚಿಂತನೆಗೆ ದಾರಿ ಮಾಡಿಕೊಡುತ್ತದೆ. ಜೀವ ಪ್ರೀತಿಯ, ಭಿನ್ನತೆಗೆ ಆಸ್ಪದ ನೀಡದ ಬರಹಗಳು ಮೂಡಿಬರಲೆಂದು ಹಾರೈಸಿದರು.
ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಕವಿ ಶ್ರೀಕೃಷ್ಣಯ್ಯ ಅನಂತಪುರ ಅವರು, ಕಾಸರಗೋಡಿನ ಬಹುಭಾಷಾ ಸಂಸ್ಕøತಿಯ ಮಧ್ಯೆ ಅವರೆಲ್ಲಾ ಕನ್ನಡ ಭಾಷೆಯ ಚೌಕಟ್ಟಿನಡಿ ವಿಶಿಷ್ಟವಾಗಿ ಬೆಳೆದುಬಂದ ಹಿನ್ನೆಲೆಯದ್ದಾಗಿದೆ. ಆದರೆ ಇಂದು ಅದನ್ನು ಹಿಸುಕುವ ಯತ್ನಗಳು ನಡೆಯುತ್ತಿದೆ. ಆದರೂ ಕನ್ನಡದ ಅಸ್ಮಿತೆಯನ್ನು ಉಳಿಸಿ ಬೆಳೆಸಲು ಮಾಡುತ್ತಿರುವ ಯತ್ನಗಳು ಮುಂದುವರಿಯುತ್ತಿರುವುದು ಸ್ತುತ್ಯರ್ಹ ಎಂದು ತಿಳಿಸಿದರು. ಎಲ್ಲಾ ಭಾಷೆ,ಸಂಸ್ಕøತಿಯನ್ನು ಪ್ರೀತಿಸಬೇಕು. ಆದರೆ ಮೂಲ ನೆಲದ ಭದ್ರ ನೆಲೆಯ ಸಂಸ್ಕøತಿಯನ್ನು ಮರೆಯುವುದು ಅಪಾಯಕಾರಿ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕಸಾಪ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಬದಿಯಡ್ಕ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ, ಕಾರ್ಮಾರು ಶ್ರೀಮಹಾವಿಷ್ಣು ಕ್ಷೇತ್ರದ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ, ಗ್ರಾ.ಪಂ. ಸದಸ್ಯೆ ಪ್ರೇಮಾ ಕೆ, ಕಹಳೆ ಮಾಧ್ಯಮ ಸಂಪಾದಕ ಶ್ಯಾಮ್ ಸುದರ್ಶನ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಉದಯೋನ್ಮುಖ ಚಿತ್ರಕಲಾವಿದೆ ಅನುಪಮಾ ಪಿ.ಜಿ ಅವರಿಗೆ ಕಲಾಶ್ರೀ, ಲೇಖಕಿ, ಧಾರ್ಮಿಕ ಬರಹಗಾರ್ತಿ ವಿಜಯಾ ಸುಬ್ರಹ್ಮಣ್ಯ ಕುಂಬಳೆಯವರಿಗೆ ಸೇವಾಸಿರಿ ಹಾಗೂ ಶಾಂತಾ ರವಿ ಕುಂಟಿನಿ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಖಿಲೇಶ್ ನಗುಮುಗಂ ಸ್ವಾಗತಿಸಿ, ಪುರುಷೋತ್ತಮ ಭಟ್ ಕೆ ವಂದಿಸಿದರು. ಸುಂದರ ಶೆಟ್ಟಿ ಮಾಸ್ತರ್ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು.
ಪರಿಸರವೇ ಕವನದ ಜೀವಾಳ - ಸನ್ನಿಧಿ ಪೆರ್ಲ
ಸಮಾರಂಭದ ಬೆಳಿಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದ ಬಳಿಕ ಸಾಹಿತ್ಯ ಸಂಭ್ರಮದ ಮೊದಲ ಭಾಗದಲ್ಲಿ ಬಾಲ ಕವಿಗೋಷ್ಠಿ ನಡೆಯಿತು. ಈ ಸಂದರ್ಭ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಬಹುಮುಖ ಪ್ರತಿಭೆ ಸನ್ನಿಧಿ ಟಿ. ರೈ ಪೆರ್ಲ ಅವರು ಮಾತನಾಡಿ, ಕವಿಗೆ ಎದುರಾಗುವ ಸನ್ನಿವೇಶಗಳು ಕವನ ರಚಿಸಲು ಪ್ರಚೋದನೆ ನೀಡುತ್ತವೆ. ಕವನದ ಮೌಲೀಕರಣವು ನಿಖರ ಹಾಗೂ ನಿಷ್ಠೂರವಾಗಿರಬೇಕು. ಬಾಲ ಕವಿಗಳು ಸ್ವಯಂ ಅಧ್ಯಯನ ಹಾಗೂ ಹಿರಿಯ ಕವಿಗಳ ಜತೆ ಸಂವಾದ ನಡೆಸುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಮಕ್ಕಳ ಕವನಗಳಿಗೆ ಪರಿಸರವೇ ಜೀವಾಳ' ಎಂದು ಹೇಳಿದರು.
ಕವಿಗೋಷ್ಠಿಯಲ್ಲಿ ಆದ್ಯಂತ್ ಅಡೂರು, ಅಭಿಲಾಷ್ ಪೆರ್ಲ, ಉಪಾಸನಾ ಪಂಜರಿಕೆ, ಸ್ವಸ್ತಿಶ್ರೀ ಮಂಗಳೂರು, ವೈಷ್ಣವಿ ಮಾನ್ಯ ಮೊದಲಾದವರು ಕವನ ವಾಚಿಸಿದರು. ಸತ್ಯಾತ್ಮ ಕುಂಟಿನಿ ಸ್ವಾಗತಿಸಿದರು. ಚಿತ್ತರಂಜನ್ ಕಡಂದೇಲು ವಂದಿಸಿದರು. ಸೃಷ್ಟಿ ಶೆಟ್ಟಿ ಪೆರ್ಲ ಹಾಗೂ ಸೌರಭ ಕುಂಟಿನಿ ನಿರ್ವಹಿಸಿದರು. ಪುತ್ತೂರು ಸಾಹಿತ್ಯ ವೇದಿಕೆಯ ಅಧ್ಯಕ್ಷ ಕಟ್ಟತ್ತಿಲ ಗೋಪಾಲಕೃಷ್ಣ ಭಟ್ ಅವರು ಕವಿಗಳನ್ನು ಸ್ಮರಣಿಕೆ ಹಾಗೂ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು.
ಬಳಿಕ ನಡೆದ ಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಚುಟುಕು ಸಾಹಿತಿ ವಿರಾಜ್ ಅಡೂರು ವಹಿಸಿದ್ದರು. ಅವರು ಈ ಸಂದರ್ಭ ಮಾತನಾಡಿ, ಯಾವುದೇ ಭಾಷೆಯ ಬೆಳವಣಿಗೆಗೆ ಭಾಷೆಯ ಬಳಕೆ ಅಗತ್ಯ. ಸಂಹವನಗಳು ನಡೆದಷ್ಟೂ ಭಾಷೆ ಬಲಿಷ್ಠವಾಗುತ್ತದೆ. ಭಾಷೆಗಳು ಬಲಿಷ್ಠವಾಗಲು ಸಮ್ಮೇಳನಗಳು ನಡೆಯಬೇಕು. ಸಾಹಿತಿಯಾದವನು ತನ್ನ ಕೃತಿಗಳ ಸಂದೇಶದ ಮೂಲಕ ಚಿರಂಜೀವಿಯಾಗುತ್ತಾನೆ. ಕವನದಲ್ಲಿ ಆಕರ್ಷಣೆ ಹಾಗೂ ದೂರಾಲೋಚನೆ ಹಾಗೂ ಹೊಸ ಸಂವೇದನೆಗಳ ಹೊಳಪು ಇರಬೇಕು' ಎಂದು ಹೇಳಿದರು.
ಕವಿಗೋಷ್ಠಿಯಲ್ಲಿ ಅಕ್ಷತಾರಾಜ್ ಪೆರ್ಲ, ರಂಗಶರ್ಮ ಉಪ್ಪಂಗಳ, ವಿಜಯರಾಜ ಪುಣಿಂಚಿತ್ತಾಯ, ಸುಭಾಷ್ ಪೆರ್ಲ, ಸುಕುಮಾರ ಬೆಟ್ಟಂಪಾಡಿ, ಆನಂದ ರೈ ಅಡ್ಕಸ್ಥಳ, ಕೆ ಎಸ್ ದೇವರಾಜ್, ಶ್ರೀಶಕುಮಾರ ಪಂಜಿತ್ತಡ್ಕ, ವೀರೇಶ್ವರ ಭಟ್, ಡಾ. ರತ್ನಾಕರ ಮಲ್ಲಮೂಲೆ, ಚಿನ್ಮಯಕೃಷ್ಣ ಕಡಂದೇಲು, ಭೀಮಾರಾವ್ ವಾಷ್ಟರ್ ಸುಳ್ಯ ಮೊದಲಾದವರು ಭಾಗವಹಿಸಿದ್ದರು. ಪತ್ರಕರ್ತ ಪುರುಷೋತ್ತಮ ಭಟ್ ನಿರ್ವಹಿಸಿದರು. ಹರೀಶ್ ಸುಲಾಯ ಒಡ್ಡಂಬೆಟ್ಟು ನಿರೂಪಿಸಿದರು. ದೇವರಾಜ್ ಕುಂಬಳೆ ಸ್ವಾಗತಿಸಿ, ಗಣೇಶ್ ಪೈ ಬದಿಯಡ್ಕ ವಂದಿಸಿದರು.
ಬಳಿಕ ನಡೆದ ಮಹಿಳಾ ಕವಿಗೋಷ್ಠಿಯಲ್ಲಿ ಶಾಂತಾ ರವಿ ಕುಂಟಿನಿ ಅಧ್ಯಕ್ಷತೆ ವಹಿಸಿದ್ದರು. ಅವರು ಈ ಸಂದರ್ಭ ಮಾತನಾಡಿ, ಹೆಣ್ಮಕ್ಕಳ ಸಾಹಿತ್ಯಕ್ಕೆ ಒಲವು ಹೆಚ್ಚಾಗಿ ಸಮಾಜಮುಖಿಯಾಗಹೊರಟಾಗ ಹಲವು ಒತ್ತಡಗಳ ಸವಾಲುಗಳಿಗೆ ಆಕೆ ಒಳಗಾಗಬೇಕಾಗುತ್ತದೆ. ಇಂತಹ ಒತ್ತಡಗಳಿಂದ ಅಂತಮುಖಿಯಾಗುವ ಹೆಣ್ಮಕ್ಕಳು ಸವಾಲುಗಳನ್ನು ದಾಟಿ ಅಕ್ಷರ ರೂಪದ ಭಾವ ಸ್ಪುರಣಕ್ಕೆ ತೆರೆದುಕೊಂಡಾಗ ಯಶಸ್ಸು ಸಾಧ್ಯ ಎಂದು ತಿಳಿಸಿದರು. ಶ್ಯಾಮಲಾ ರವಿರಾಜ್ ಕುಂಬಳೆ, ಅನ್ನಪೂರ್ಣಾ ಬೆಜಪ್ಪೆ, ಶ್ರದ್ದಾ ನಾಯರ್ಪಳ್ಳ, ನಿರ್ಮಲಾ ಶೇಷಪ್ಪ, ಶಶಿಕಲಾ, ಚಿತ್ರಕಲಾ ದೇವರಾಜ್, ಆಶಾಲತಾ, ಗೀತಾ, ಸವಿತಾ ಎಸ್.ಭಟ್ ಅಡ್ವಾಯಿ, ರಮ್ಯಾ,ರೇಖಾ, ದಿವ್ಯಗಂಗಾ ಪಿ, ಸೌಮ್ಯಾ ಪ್ರಸಾದ್, ವಿಜಯಾ ಸುಬ್ರಹ್ಮಣ್ಯ, ಜ್ಯೋಸ್ನ್ಸಾ ಎಂ.ಕಡಂದೇಲು, ಪ್ರಭಾವತಿ ಕೆದಿಲಾಯ ಮೊದಲಾದವರು ಸ್ವರಚಿತ ಕವಿತೆಗಳನ್ನು ವಾಚಿಸಿದರು.