22ರಿಂದ 9 ದಿನಗಳ ಬೃಹತ್ ಸಾಂಸ್ಕೃತಿಕ ಮೇಳ "ಗದ್ದಿಕ-2018" : ಕಾಲಿಕಡವು ಮೈದಾನದಲ್ಲಿನಡೆಯುವ ಸಂಸ್ಕೃತಿ ಹಬ್ಬಕ್ಕೆ ಭರದ ಸಿದ್ಧತೆ
0
ಡಿಸೆಂಬರ್ 04, 2018
ಕಾಸರಗೋಡು: 9 ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಪ್ರದರ್ಶನ ಮತ್ತು ಮಾರಾಟ ಮೇಳ "ಗದ್ದಿಕ-2018"ಕ್ಕೆ ಭರದ ಸಿದ್ದತೆಗಳು ನಡೆಯುತ್ತಿವೆ. ಪರಿಶಿಷ್ಟ ಜಾತಿ-ಪಂಗಡ ಅಭಿವೃದ್ಧಿ ಇಲಾಖೆ ಮತ್ತು ಕಿತಾರ್ಡ್ಸ್ ಸಂಸ್ಥೆಗಳು ಜಂಟಿಯಾಗಿ ಡಿ.22ರಿಂದ 30 ವರೆಗೆ ಕಾಲಿಕಡವು ಮೈದಾನದಲ್ಲಿ ಸಮಾರಂಭವನ್ನು ನಡೆಸಲಿವೆ.
ಪರಂಪರಾಗತ ಕಲೆಗಳ ಸಹಿತ ವಿಚಾರಕ್ಕೆ ವೇದಿಕೆ : ಪರಿಶಿಷ್ಟ ಜಾತಿ-ಪಂಗಡದ ಜನತೆಯ ಧಾರ್ಮಿಕ ಮತ್ತು ಪರಂಪರಾಗತ ಸಾಂಸ್ಕೃತಿಕತೆ ಕುರಿತು ಮಾಹಿತಿ ನೀಡಿಕೆ ಮತ್ತು ಕರಕುಶಲ ಸಾಮಾಗ್ರಿಗಳ ಪ್ರದರ್ಶನ, ಮಾರಾಟ ಇತ್ಯಾದಿಗಳು ಈ ವೇಳೆ ನಡೆಯಲಿವೆ. ಜೊತೆಯಲ್ಲಿ ಸಾರ್ವಜನಿಕರಿಗೂ ಈ ಸಂಬಂಧ ಅವಕಾಶಗಳಿವೆ ಎಂದು ಸಂಘಟಕ ಸಮಿತಿ ಪದಾಧಿಕಾರಿಗಳು ತಿಳಿಸಿದರು. ಪರಂಪರಾಗತ ಚಿಕಿತ್ಸಾ ಪದ್ಧತಿ, ಆಹಾರ ವಿಧಾನ ಇತ್ಯಾದಿಗಳು ಮೇಳದ ಪ್ರಮುಖ ಆಕರ್ಷಣೆಗಳಾಗಿರುವುವು. ನೂರು ಸ್ಟಾಲ್ಗಳಲ್ಲಿ ಮಾರಾಟ ಮತ್ತು ಪ್ರದರ್ಶನ ನಡೆದರೆ, ಸುಮಾರು ನೂರು ಕಲಾವಿದರು ಪರಂಪರಾಗತ ಪ್ರತಿಭೆಯ ಪ್ರದರ್ಶನ ನೀಡುವರು. 9 ದಿನಗಳ ಕಾಲ ನಡೆಯುವ ಈ ಸಂಸ್ಕೃತಿಮೇಳ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ನಡೆಯುತ್ತಿದೆ. 22 ರಿಂದ ಪ್ರತಿದಿನ ಸಾಂಸ್ಕೃತಿಕ ಸಮ್ಮೇಳನಗಳು ಮತ್ತು ಕಲಾಪ್ರದರ್ಶನಗಳು ನಡೆಯಲಿವೆ. ಜಿಲ್ಲೆಯ ಕಲಾವಿದರಿಗೆ ಪ್ರದರ್ಶನಕ್ಕೆ ಆದ್ಯತೆ ನೀಡಲಾಗುತ್ತಿದೆ. ಸಮಾರಂಭದ ಕೈಗನ್ನಡಿಯಾಗಿ ವರ್ಣರಂಜಿತ ಮೆರವಣಿಗೆ ನಡೆಯಲಿದೆ.
ಪ್ರಚಾರ ಕಾರ್ಯಕ್ರಮ : ಈ ಬೃಹತ್ ಸಮಾರಂಭದ ಪ್ರಚಾರ ನಿಟ್ಟಿನಲ್ಲಿ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಎಸ್.ಸಿ.ಪ್ರಮೋಟರ್ ಗಳ, ಕುಟುಂಬಶ್ರೀಯ ಸಹಕಾರದೊಂದಿಗೆ ಮನೆಮನೆ ಸಂಪರ್ಕ ನಡೆಸಲಾಗುವುದು. ನೀಲೇಶ್ವರ ಬ್ಲೋಕ್ ಪಂಚಾಯತ್ ಮತ್ತು ನಗರಸಭೆ ವ್ಯಾಪ್ತಿಯ ಎಲ್ಲ ಶಾಲೆಗಳಿಗೆ ಸಂಘಟಕ ಸಮಿತಿ ಪದಾಧಿಕಾರಿಗಳು ಭೇಟಿ ನೀಡಿ ಈ ಕುರಿತು ಮಾಹಿತಿ ನೀಡುವರು.
ಸ್ಥಳೀಯ ಗ್ರಾಮಪಂಚಾಯತ್ ಕಚೇರಿ ಬಳಿ ಸಿದ್ಧಪಡಿಸಲಾದ ಸಂಘಟಕ ಸಮಿತಿ ಕಚೇರಿ ಡಿ.8ರಂದು ಸಂಜೆ 4 ಗಂಟೆಗೆ ಉದ್ಘಾಟನೆಗೊಳ್ಳಲಿದ್ದು, ಶಾಸಕ ರಾಜಗೋಪಾಲ್ ಚಾಲನೆ ನೀಡುವರು.
ಉಪಸಮಿತಿ ಪದಾಧಿಕಾರಿಗಳ ಸಭೆ
ಡಿ.22ರಿಂದ ಕಾಲಿಕಡವು ಮೈದಾನದಲ್ಲಿ ನಡೆಯುವ "ಗದಿಕ-2018" ಸಮಾರಂಭದ ಯಶಸ್ಸಿಗಾಗಿ ಪಿಲಿಕೋಡ್ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಉಪಸಮಿತಿ ಪದಾಧಿಕಾರಿಗಳ ಸಭೆ ಜರುಗಿತು. ಪಂಚಾಯತ್ ಅಧ್ಯಕ್ಷ ಟಿ.ವಿ.ಶ್ರೀಧರನ್ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ತ್ರಿಕರಿಪುರ ಗ್ರಾಮಪಂಚಾಯತ್ ಅಧ್ಯಕ್ಷೆ ವಿ.ಪಿ.ಫೌಸಿಯಾ, ವಲಿಯಪರಂಬ ಗ್ರಾಮಪಂಚಾಯತ್ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಜಿಲ್ಲಾ ಪಂಚಾಯತ್ ಸದಸ್ಯ ವಿ.ಪಿ.ಪಿ.ಮುಸ್ತಫಾ, ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ಮೀನಾರಾಣಿ ಎಸ್. ಉಪಸ್ಥಿತರಿದ್ದರು.