ಡಿ.5ರಿಂದ 17 ವರೆಗೆ ಕುಷ್ಠರೋಗ ಪತ್ತೆ, ಚಿಕಿತ್ಸೆ ಕಾರ್ಯಕ್ರಮ "ಅಶ್ವಮೇಧಂ" ಎಂಬ ಹೆಸರಿನಲ್ಲಿ ಮನೆಮನೆಗಳಲ್ಲಿ ರೋಗಪತ್ತೆ ಜಾಗೃತಿ
0
ಡಿಸೆಂಬರ್ 03, 2018
ಕಾಸರಗೋಡು:ಜಿಲ್ಲೆಯಲ್ಲಿ ಕುಷ್ಠರೋಗ ನಿವಾರಣೆಗೆ ಸಮಗ್ರ ಉದ್ದೇಶ ಇರಿಸಿಕೊಂಡು "ಅಶ್ವಮೇಧಂ" ಎಂಬ ಹೆಸರಿನಲ್ಲಿ ಜಾಗೃತಿ ಜೊತೆಗೆ ತಪಾಸಣೆ ಕಾರ್ಯಕ್ರಮ ಡಿ.5ರಿಂದ 18 ವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಸೋಮವಾರ ತಮ್ಮ ಕೊಠಡಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಎಲೆಮರೆಯಂತಿರುವ ರೋಗಿಗಳನ್ನು ಪತ್ತೆಮಾಡಿ, ಅವರಿಗೆ ಚಿಕಿತ್ಸೆ ನೀಡುವ ಮೂಲಕ ಈ ರೋಗವನ್ನು ಜಿಲ್ಲೆಯಿಂದ ಬೇರು ಸಹಿತ ಕಿತ್ತೊಗೆಯುವ ಉದ್ದೇಶದಿಂದ ಈ ಸರಣಿ ಕಾರ್ಯಕ್ರಮ ಜರುಗಲಿದೆ.ಇದಕ್ಕಾಗಿ ಜಿಲ್ಲೆಯಲ್ಲಿ 1297 ತಂಡಗಳನ್ನು ರಚಿಸಲಾಗಿದೆ. ತಲಾ ಒಬ್ಬ ಆಶಾ ಕಾರ್ಯಕರ್ತೆ ಯಾ ಇತರ ಸ್ವಯಂ ಸೇವಕ ತಂಡದ ಸದಸ್ಯೆ, ಇನ್ನೊಬ್ಬ ಪುರುಷ ಕಾರ್ಯಕರ್ತ ಇರುವ ತಂಡಗಳು ಇವಾಗಿವೆ. ಇಂದು ಕುಷ್ಠರೋಗ ಚಿಕಿತ್ಸೆ ಲಭಿಸದೇ ಇರುವ ರೋಗವಲ್ಲ. ಸೂಕ್ತ ಚಿಕಿತ್ಸೆಯಿಂದ ಪೂರ್ಣ ರೂಪದಲ್ಲಿ ಗುಣಮುಖರಾಗಲು ಸಾಧ್ಯ ಎಂದವರು ತಿಳಿಸಿದರು.
ಈ ರೋಗ ನಿವಾರಣೆಗೆ ಆರೋಗ್ಯ ಇಲಾಖೆ ನಡೆಸುತ್ತಿರುವ ಯತ್ನ ಶ್ಲಾಘನೀಯ ಎಂದು ತಿಳಿಸಿದ ಅವರು ಸರಕಾರಿ ದಾಖಲೆಗಳನ್ನು ಗಮನಿಸಿದರೆ ವರ್ಷದಿಂದ ವರ್ಷಕ್ಕೆ ರೋಗ ಸಂಖ್ಯೆ ಇಳಿಮುಖವಾಗುತ್ತಿರುವುದು ಕಂಡುಬಂದಿದೆ ಎಂದರು. 2016-17ರಲ್ಲಿ30 ರೋಗಬಾಧಿತರ ಪತ್ತೆಯಾಗಿದ್ದರೆ, 2017-18ರಲ್ಲಿ 18 ಮಂದಿ, 2018-19ರಲ್ಲಿ (ಈ ವರೆಗೆ) 11 ಮಂದಿ ಪತ್ತೆಯಾಗಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಸಹಾಯಕ ವೈದ್ಯಾಧಿಕಾರಿ ಮತ್ತು ನೋಡೆಲ್ ಅಧಿಕಾರಿ ಡಾ.ಕೆ.ಕೆ.ಶಾಂತಿ ಅವರು ಮನೆಮನೆ ಸಂದರ್ಶನ ಮಾಡುವ ಮೂಲಕ ಈ ಸಲದ ರೋಗ ನಿರ್ಣಯ ಕಾರ್ಯ ನಡೆಯಲಿದೆ. ಬೆಳಗ್ಗಿನ ಮತ್ತು ಸಂಜೆ ಹೊತ್ತು ಈ ಸಂದರ್ಶನ ನಡೆಯಲಿದೆ. ಆಶಾ ಕಾರ್ಯಕರ್ತೆಯರು ಮನೆಯ ಮಹಿಳೆಯರನ್ನು ಮತ್ತು ಪುರುಷ ಕಾರ್ಯಕರ್ತರು ಗಂಡಸರ ತಪಾಸಣೆ ನಡೆಸುವರು. ಜಿಲ್ಲಾ ಮಟ್ಟದ ಕಾರ್ಯಕ್ರಮದ ಉದ್ಘಾಟನೆ ಡಿ.5ರಂದು ಬೆಳಗ್ಗೆ 8.30ಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅವರ ಮನೆಯಲ್ಲಿ ಸದಸ್ಯರ ತಪಾಸಣೆ ನಡೆಸುವ ಮೂಲಕ ನಡೆಯಲಿದೆ ಎಂದು ಹೇಳಿದರು.
ಸ್ಪರ್ಶ ಮಾತ್ರದಿಂದ ಕುಷ್ಠರೋಗ ಹರಡುವುದಿಲ್ಲ. ಉಗುಳುವ ಮೂಲಕ ಹೊರಬರುವ ಕಫ ಇತ್ಯಾದಿಗಳು ರೋಗಕಾರಣವಾಗುತ್ತವೆ ಎಂದರು. ಸಾಧಾರಣ ಗತಿಯಲ್ಲಿ 6 ತಿಂಗಳ ಚಿಕಿತ್ಸೆ ಮೂಲಕ ಕುಷ್ಠರೋಗ ಗುಣಮುಖವಾಗುತ್ತದೆ. ಕೊಂಚ ಗಂಭೀರ ಸ್ಥಿತಿಯಿದ್ದರೆ 9ರಿಂದ 12 ತಿಂಗಳ ಚಿಕಿತ್ಸೆ ಬೇಕಾಗಿ ಬರಬಹುದು ಎಂದು ನುಡಿದರು.
ರೋಗಬಾಧೆಯಾದ ತಕ್ಷಣ ಯಾವುದೋ ಲಕ್ಷಣ ಪತ್ತೆಯಾಗದಿರುವುದು ಈ ವಲಯದ ದುರಂತ. ಅನೇಕ ವರ್ಷಗಳ ನಂತರ ರೋಗಲಕ್ಷಣ ಪತ್ತೆಯಾಗುತ್ತದೆ. ಒಂದೊಮ್ಮೆ ರೋಗನಿರ್ಣಯವಾದರೂ ಕೆಲವರು ಚಿಕಿತ್ಸೆ ಪಡೆಯಲು ಹಿಂದೇಟು ಹಾಕುವುದು ರೋಗ ಹರಡಲು ಪ್ರಧಾನ ಕಾರಣವಾಗುತ್ತದೆ. ಪುಟ್ಟ ಮಕ್ಕಳಲ್ಲೂ ಈ ರೋಗ ಕಂಡುಬರುತ್ತಿರುವುದು ದುರಂತ. ಆರಿಕ್ಕಾಡಿ ಮತ್ತು ಮಂಗಲ್ಪಾಡಿ ಪ್ರದೇಶಗಳಲ್ಲಿ ಈ ರೋಗದಿಂದ ಬಳಲುತ್ತಿರುವ ಮಕ್ಕಳೂ ಪತ್ತೆಯಾಗಿದ್ದಾರೆ. ಮುಳಿಯಾರು, ಮಂಜೇಶ್ವರ, ಕುಂಬಳೆ, ಮಂಗಲ್ಪಾಡಿ ಪ್ರದೇಶಗಳಲ್ಲಿ ರೋಗಬಾಧಿತರ ಸಂಖ್ಯೆ ಅಧಿಕವಾಗಿದೆ ಎಂದು ನುಡಿದರು.
ಸಹಾಯಕ ಕುಷ್ಠರೋಗ ನಿಯಂತ್ರಣಾಧಿಕಾರಿ ಶಾಜಿ ಉಪಸ್ಥಿತರಿದ್ದರು.