ಕಾಸರಗೋಡು: ಏಡ್ಸ್ ರೋಗ ನಿಯಂತ್ರಣದಲ್ಲಿ ಸಮಾಜದೊಂದಿಗೆ ಕೈಜೋಡಿಸಿರುವ ಜಿಲ್ಲಾಡಳಿತೆ ಮತ್ತು ಆರೋಗ್ಯ ಇಲಾಖೆಗಳ ಜಂಟಿ ಹೋರಾಟ ಇತರರಿಗೆ ಮಾದರಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅಭಿಪ್ರಾಯಪಟ್ಟರು.
ನಗರದ ನೂತನ ಬಸ್ನಿಲ್ದಾಣ ಬಳಿ ಏಡ್ಸ್ ವಿರುದ್ಧ ದಿನಾಚರಣೆ ಅಂಗವಾಗಿ ನಡೆದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿ ಡಾ.ಸಜಿತ್ ಬಾಬು ಅವರು ಮಾತನಾಡಿ, "ನಿಮ್ಮ ಎಚ್ಐವಿ ಸೋಂಕಿನ ಪ್ರಮಾಣ ಅರಿಯಿರಿ" ಎಂಬುದು ಈ ಬಾರಿಯ ಏಡ್ಸ್ ಜಾಗೃತಿ ದಿನದ ಸಂದೇಶವಾಗಿದ್ದು, ಕಳೆದ 11 ತಿಂಗಳಲ್ಲಿ
1.40 ಲಕ್ಷ ಮಂದಿ ತಪಾಸಣೆಗೆ ಒಳಗಾಗಿದ್ದಾರೆ. ಇನ್ನೂ ಅಧಿಕ ಮಂದಿ ಈ ಬಗ್ಗೆ ತಪಾಸಣೆ ಮಾಡಿಸಿಕೊಳ್ಳಬೇಕಾದುದು ಅನಿವಾರ್ಯ ಎಂದರು.
ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ಪಿ.ದಿನೇಶ್ಕುಮಾರ್,
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಟಿ.ಪಿ.ಆಮಿನಾ ಏಡ್ಸ್ ವಿರುದ್ಧ ಜಾಗೃತಿ ಪ್ರತಿಜ್ಞೆಗೆ ನೇತೃತ್ವ ವಹಿಸಿರು. ವಾರ್ಡ್ ಸದಸ್ಯೆ ಸಂಧ್ಯಾ ಶೆಟ್ಟಿ, ಜನರಲ್ ಆಸ್ಪತ್ರೆ ವರಿಷ್ಠಧಿಕಾರಿ ಡಾ.ಕೆ.ರಾಜಾರಾಮ್, ಕುಂಞಿಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು.
ಮೆರವಣಿಗೆ : ಸಮಾರಂಭ ಅಂಗವಾಗಿ ನಗರದಲ್ಲಿ ಮೆರವಣಿಗೆ ಜರುಗಿತು. ಪ್ರೆಸ್ಕ್ಲಬ್ ಜಂಕ್ಷನ್ ಬಳಿಯಿಂದ ನೂತನಬಸ್ ನಿಲ್ದಾಣ ವರೆಗೆ ಮೆರವಣಿಗೆ ನಡೆಯಿತು. ಡಿವೈಎಸ್ಪಿ ಸುಕುಮಾರನ್ ಮೆರವಣಿಗೆಗೆ ಹಸುರು ನಿಶಾನೆ ತೋರಿದರು. ವಿದ್ಯಾರ್ಥಿಗಳ ಸಹಿತ ನೂರಾರು ಮಂದಿ ಭಾಗವಹಿಸಿದರು. ನವೋದಯ ಶಾಲೆಯ ವಿದ್ಯಾರ್ಥಿಗಳಿಂದ ಬ್ಯಾಂಡ್ಮೇಳ ಜರುಗಿತು.
ತದನಂತರ ಏಡ್ಸ್ ವಿರುದ್ಧ ಜಾಗೃತಿಗೆ ಸಂಬಂಧಿಸಿ ನ್ಯಾಷನಲ್ ಅಬ್ದುಲ್ಲ, ವಿದ್ಯಾರ್ಥಿಗಳಾದ ಮಧುರಿಮಾ, ಹಸನ್ ಚಿತ್ರರಚನೆ ನಡೆಸಿಕೊಟ್ಟರು.
ಸಾರ್ವಜನಿಕ ಸಭೆ ಅಂಗವಾಗಿ ಕಂದೀಲು ಹಿಡಿದು ಏಡ್ಸ್ ವಿರುದ್ಧ ಲಾಂಛನ ಸ್ವರೂಪದಲ್ಲಿ ನಿಂತುಕೊಳ್ಳುವ ಕಾರ್ಯಕ್ರಮ ನಡೆಯಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್,
ಜಿಲ್ಲಾಧಿಕಾಡಿ ಡಾ.ಡಿ.ಸಜಿತ್ ಬಾಬು, ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ ಮೊದಲಾದವರು ನೇತೃತ್ವ ವಹಿಸಿದರು.