ಕುಷ್ಠರೋಗ ಹೋಗಲಾಡಿಸುವತ್ತ ಆರೋಗ್ಯ ಇಲಾಖೆ ಕ್ರಮ ಜಿಲ್ಲೆಯಾದ್ಯಂತ ಕುಷ್ಠರೋಗಿಗಳ ಗಣತಿ ಕಾರ್ಯಕ್ರಮ ಅಶ್ವಮೇಧಕ್ಕೆ ಇಂದು ಚಾಲನೆ
0
ಡಿಸೆಂಬರ್ 05, 2018
ಕಾಸರಗೋಡು: ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಇಂದಿನಿಂದ ಡಿ.18 ರವರೆಗೆ ಅಶ್ವಮೇಧ- ಕುಷ್ಠರೋಗ ನಿರ್ಮೂಲನ ಪ್ರಚಾರ ಅಭಿಯಾನ ನಡೆಯಲಿದೆ. ಮನೆ ಮನೆ ಅಭಿಯಾನದ ಮೂಲಕ ಕುಷ್ಠರೋಗಿಗಳನ್ನು ಗೊತ್ತುಪಡಿಸಿ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸುವ ಕಾರ್ಯಕ್ರಮ ಜಿಲ್ಲೆಯಾದ್ಯಂತ ಏರ್ಪಡಲಿದೆ. ಜಿಲ್ಲೆಯ ಪ್ರತಿ ಮನೆಗಳಿಗೆ ತೆರಳಿ ಗಣತಿ ಕಾರ್ಯ ನಡೆಸಲು ವೈದ್ಯಕೀಯ ಸಿಬ್ಬಂದಿಗಳ 1297 ತಂಡಗಳನ್ನು ರಚಿಸಲಾಗಿದೆ.
ತಂಡದ ಸದಸ್ಯರು ಪ್ರತಿ ಮನೆಗಳಿಗೆ ಭೇಟಿ ನೀಡಿ ಕುಷ್ಠರೋಗಿಗಳನ್ನು ಗೊತ್ತುಪಡಿಸಿ ಮಾಹಿತಿ ಸಂಗ್ರಹಿಸಲಿದ್ದಾರೆ. ಗೃಹ ಭೇಟಿ ನೀಡಿ ಕುಷ್ಠರೋಗ ಪತ್ತೆ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡಲಾಗಿದ್ದು, ರೋಗ ಪತ್ತೆ ಮತ್ತು ರೋಗಗಳನ್ನು ಸೂಕ್ತ ಚಿಕಿತ್ಸೆ ಒಳಪಡಿಸುವಂತೆ ಮಾರ್ಗದರ್ಶನ ನೀಡಲಿದ್ದಾರೆ. ಮೇಲ್ವಿಚಾರಣೆಗಾಗಿ ಆರೋಗ್ಯ ಅಧಿಕಾರಿಗಳು ಸೇರಿದಂತೆ ದಾದಿಯರನ್ನು ನೇಮಿಸಲಾಗಿದೆ. ಆಸ್ವಮೇಧದ ಮೂಲಕ ಗೊತ್ತುಪಡಿಸಲಾದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಜಿಲ್ಲೆಯ ನಾನಾ ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಅಶ್ವಮೇಧ-ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಜಿಲ್ಲಾವಾರು ಉದ್ಘಾಟನೆಯು ಇಂದು ಬೆಳಗ್ಗೆ 8 ಗಂಟೆಗೆ ನಡೆಯಲಿದ್ದು, ಜಿ.ಪಂ ಅಧ್ಯಕ್ಷ ಎ.ಜಿ.ಸಿ ಬಶೀರ್ ಉದ್ಘಾಟಿಸಲಿದ್ದಾರೆ. 2016-17 ರಲ್ಲಿ ಗೊತ್ತುಪಡಿಸಿದ ಅಂಗವೈಕಲ್ಯವುಳ್ಳ ರೋಗಿಗಳು ಸಹಿತ ಮಕ್ಕಳಿಗೂ ಚಿಕಿತ್ಸೆಯನ್ನು ನೀಡಲಾಗುವುದೆಂದು ಜಿಲ್ಲಾ ಆರೋಗ್ಯ ಕಚೇರಿ ತಿಳಿಸಿದೆ. ಈ ವರ್ಷ ಜಿಲ್ಲೆಯಲ್ಲಿ ಒಟ್ಟು 4 ಮಕ್ಕಳು ಕುಷ್ಠರೋಗ ಚಿಕಿತ್ಸೆಗೆ ಒಳಪಟ್ಟಿದ್ದಾರೆ. ಹೊಸದಾಗಿ ಒಟ್ಟು 11 ಮಂದಿಯನ್ನು ಗುರುತಿಸಲಾಗಿದೆ. ಕಳೆದ ಬಾರಿಗಿಂತ ಈ ಬಾರಿ ಕುಷ್ಠರೋಗಿಗಳ ಒಟ್ಟಾರೆ ಸಂಖ್ಯೆ ಕಡಿಮೆಯಾಗಿದೆ. 2016-17 ರ ಸಾಲಿನಲ್ಲಿ ಒಟ್ಟು 30 ಮಂದಿಗೆ ಕುಷ್ಠರೋಗಿಗಳಿದ್ದರು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕುಂಬಳೆ, ಮಂಗಲ್ಪಾಡಿ, ಮುಳಿಯಾರು ಪ್ರದೇಶಗಳಲ್ಲಿ ಕುಷ್ಠರೋಗಿಗಳ ಸಂಖ್ಯೆ ಹೆಚ್ಚಿದೆ. ಗಣತಿ ಕಾರ್ಯ ಪೂರ್ಣಗೊಂಡ ನಂತರದಲ್ಲಿ ಕುಷ್ಠರೋಗಿಗಳ ಒಟ್ಟಾರೆ ಸಂಖ್ಯೆಯನ್ನು ತಿಳಿಸಬಹುದಾಗಿದೆಯೆಂದು ಉಪ ವೈದ್ಯಕೀಯ ಅಧಿಕಾರಿ ಡಾ.ಕೆ.ಕೆ.ಶಾಂತಿ. ಸಹಾಯಕ ಲೆಪ್ರಸಿ ಆಫೀಸರ್ ವಿ.ಎನ್ ಶಾಜಿಕುಮಾರ್ ತಿಳಿಸಿದ್ದಾರೆ.
ಏನಂತಾರೆ:
ಕುಷ್ಠರೋಗದ ಬಗ್ಗೆ ಅರಿವಿದ್ದು ಮತ್ತು ಅರಿವಿಲ್ಲದೆ ಚಿಕಿತ್ಸೆಯಿಂದ ವಿಮುಖರಾದ ರೋಗಿಗಳನ್ನು ಪತ್ತೆ ಹೆಚ್ಚುವ ಕಾರ್ಯ ಅಶ್ವಮೇಧ ಯಜ್ಞದ ಮೂಲಕ ನೆರವೇರಲಿದೆ. ಕಾಸರಗೋಡು ಜಿಲ್ಲೆಯನ್ನು ಕುಷ್ಠರೋಗದಿಂದ ಮುಕ್ತವಾಗಿಸಲು ಅಶ್ವಮೇಧ ಯಜ್ಞ ಪೂರಕವಾಗಿರಲಿದೆ-ಡಾ.ಡಿ ಸಜಿತ್ ಬಾಬು, ಕಾಸರಗೋಡು ಜಿಲ್ಲಾಧಿಕಾರಿ
ಏನಿದು ಕುಷ್ಠರೋಗ ?
ಮೈಕ್ರೋ ಬ್ಯಾಕ್ಟೀರಿಯಂ ಲೆಪ್ರೆ ಎಂಬ ಬ್ಯಾಕ್ಟೀರಿಯಾದ ಮೂಲಕ ಹರಡುವ ಒಂದು ಸಾಂಕ್ರಾಮಿಕ ರೋಗ ಕುಷ್ಠರೋಗವಾಗಿದೆ. ಚಿಕಿತ್ಸೆ ಪಡೆಯದ ರೋಗಗ್ರಸ್ಥ ವ್ಯಕ್ತಿಗಳ ಎಂಜಲು, ಉಗುಳಿನ ಸ್ಪರ್ಶದಿಂದ ರೋಗವು ಹರಡುತ್ತದೆ.
ಲಕ್ಷಣಗಳು?
-ಚರ್ಮದ ಮೇಲೆ ಬರುವ ತುರಿಕೆ, ಕೈ ಕಾಲುಗಳ ಮರಗಟ್ಟುವಿಕೆ,
-ನೋವು ಭರಿತ ಉಬ್ಬು ಚರ್ಮ,
-ನೋವಿಲ್ಲದ ಹುಣ್ಣುಗಳು,
-ಮುಖ, ಕಿವಿಯಲ್ಲಿ ಉಂಟಾಗುವ ದಡಿಕೆಗಳು.
- ಎಣ್ಣೆ ಅಂಶವಿರುವ ಹೊಳೆಯುವ ಚರ್ಮ
ಚಿಕಿತ್ಸೆ ಇದೆಯೇ?!
ಕುಷ್ಠರೋಗವನ್ನು ಫಲಪ್ರದವಾಗಿ ಚಿಕಿತ್ಸೆ ನೀಡಲಾಗುತ್ತದೆ. ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ಪಡೆದುಕೊಂಡರೆ ಅಂಗವೈಕಲ್ಯದಿಂದ ಮುಕ್ತಿ ಪಡೆಯಬಹುದಾಗಿದೆ. ಎಲ್ಲ ಸರಕಾರಿ ಆಸ್ಪತ್ರೆಗಳಲ್ಲೂ ಉಚಿತ ಚಿಕಿತ್ಸೆ ಲಭ್ಯವಿದೆ.