ಕುಂಬಳೆ: ಕೇರಳದಲ್ಲಿ ಆಡಳಿತ ನಡೆಸುತ್ತಿರುವ ಮಾಕ್ರ್ಸ್‍ವಾದಿ ಕಮ್ಯೂನಿಸ್ಟ್ ಪಕ್ಷದ ನೇತೃತ್ವದಲ್ಲಿ ಜನವರಿ 1ರಂದು ಆಯೋಜಿಸಿರುವ ಮಹಿಳಾ ಗೋಡೆ ಎಂಬ ಕಾರ್ಯಕ್ರಮವು ರಾಜ್ಯ ಸರಕಾರದ ಖರ್ಚಿನಲ್ಲಿ ನಡೆಸಲ್ಪಡುವ ಸಿಪಿಎಂ ಪಕ್ಷವು ನಿಶ್ಚಯಿಸಿದ ಅಜೆಂಡಾವಾಗಿದೆ. ಇದು ಆಡಳಿತ ಯಂತ್ರದ ಸ್ಪಷ್ಟ ದುರುಪಯೋಗವಾಗಿದೆ ಎಂದು ಹಿಂದು ಐಕ್ಯ ವೇದಿಕೆಯ ಮಂಜೇಶ್ವರ ತಾಲೂಕು ಸಮಿತಿಯು ಆರೋಪಿಸಿದೆ.
ಕುಂಬಳೆಯಲ್ಲಿ ಜರಗಿದ ಹಿಂದು ಐಕ್ಯ ವೇದಿಕೆಯ ತಾಲೂಕು ಸಮಿತಿಯ ಮಾಸಿಕ ಸಭೆಯಲ್ಲಿ ಈ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಿಂದು ಐಕ್ಯ ವೇದಿಕೆಯ ಜಿಲ್ಲಾ ಸಮಿತಿಯ ಸದಸ್ಯ ಸುರೇಶ್ ಶಾಂತಿಪಳ್ಳ ಅವರು ಸಿಪಿಎಂ ಪಕ್ಷದ ಕಾರ್ಯಕ್ರಮವನ್ನು ಸರಕಾರದ ಕಾರ್ಯಕ್ರಮವೆಂಬಂತೆ ಬಿಂಬಿಸಿ ರಾಜ್ಯ ಸರಕಾರವು ಜನರನ್ನು ಮೂರ್ಖರನ್ನಾಗಿಸುತ್ತಿದೆ. ಸರಕಾರಿ ನೌಕರರನ್ನು ಮತ್ತು ವಿವಿಧ ಎಡಪಂಥೀಯ ಸಂಘಟನೆಗಳ ಸದಸ್ಯರನ್ನು, ಅಂಗನವಾಡಿ ಮತ್ತು ಉದ್ಯೋಗ ಖಾತರಿ ಕಾರ್ಮಿಕರಿಗೆ ಮಹಿಳಾ ಗೋಡೆಯನ್ನು ಬೆಂಬಲಿಸಲು ಒತ್ತಡ ಹೇರಲಾಗುತ್ತಿದೆ. ಇದರ ಪ್ರಚಾರಕ್ಕಾಗಿ ಸರಕಾರದ ಹಣವನ್ನು ಪೆÇೀಲು ಮಾಡಲಾಗುತ್ತಿದೆ ಎಂದು ದೂರಿದರು.
ತಾಲೂಕು ಸಮಿತಿಯ ಅಧ್ಯಕ್ಷ ವಿನಯಚಂದ್ರ ಆಳ್ವ ಕಾರ್ಲೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘಟನಾ ಕಾರ್ಯದರ್ಶಿ ಸಂದೀಪ್ ಗಟ್ಟಿ ದೇವಿನಗರ, ಮಹಿಳಾ ಐಕ್ಯ ವೇದಿಕೆಯ ವಸಂತಿ ಕೃಷ್ಣನ್, ಸಂದೀಪ್ ಕಾರ್ಲೆ, ಗಣೇಶ್ ಪಿ.ಎಂ. ಮುಂತಾದವರು ಉಪಸ್ಥಿತರಿದ್ದರು. ಸತೀಶ್ ಕೆ.ಬಿ. ಸ್ವಾಗತಿಸಿ, ಶರತ್ ಕಾರ್ಲೆ ವಂದಿಸಿದರು.