ಕೊಟ್ಯಾಡಿಯಲ್ಲಿ ಪಂಚಾಯಿತಿ ಕಾಂಪ್ಲೆಕ್ಸ್ ನಿರ್ಮಾಣ ವಿವಾದ; ಅರಣ್ಯ ಇಲಾಖೆಯಿಂದ ಸರ್ವೆ
0
ಡಿಸೆಂಬರ್ 04, 2018
ಮುಳ್ಳೇರಿಯ: ಕೊಟ್ಯಾಡಿಯಲ್ಲಿ ದೇಲಂಪಾಡಿ ಗ್ರಾಮ ಪಂಚಾಯಿತಿ ವತಿಯಿಂದ ವ್ಯಾಪಾರ ಸಂಕೀರ್ಣ ನಿರ್ಮಾಣ ಮಾಡುವ ಸಂದರ್ಭದಲ್ಲಿ ಅರಣ್ಯ ಇಲಾಖೆಗೆ ಸೇರಿದ ಸ್ಥಳವನ್ನು ಅತಿಕ್ರಮಣ ಮಾಡಲಾಗಿದೆ ಎಂದು ಅರಣ್ಯ ಇಲಾಖೆಯು ತಡೆಯೊಡ್ಡಿದ ಹಿನ್ನೆಲೆಯಲ್ಲಿ ಸೋಮವಾರ ಮಿನಿ ಸರ್ವೆ ನಡೆಸಲಾಗಿದೆ.
ಸರ್ವೆಯಿಂದ ಸ್ವಲ್ಪ ಪ್ರಮಾಣದ ಅತಿಕ್ರಮಣ ನಡೆದಿದೆ ಎಂದು ತಿಳಿದು ಬಂದಿದೆ. ಆದರೆ ಯಾವುದೇ ವರದಿ ನೀಡಲಾಗಿಲ್ಲ. ವರದಿ ಲಭಿಸಿದ ಬಳಿಕ ವಲಯ ಅರಣ್ಯಾಧಿಕಾರಿ ವಿಚಾರಣೆ ನಡೆಸಿ ಡಿಎಫ್‍ಒ ಅವರಿಗೆ ವರದಿ ಸಲ್ಲಿಸುವರು.
ಕಾಸರಗೋಡು-ಸುಳ್ಯ ರಾಜ್ಯ ರಸ್ತೆಯ ನಿಕಟವಾಗಿ ಕೊಟ್ಯಾಡಿಯಲ್ಲಿ ಗ್ರಾಮ ಪಂಚಾಯಿತಿ 5ಸೆಂಟ್ ಸ್ಥಳದಲ್ಲಿ ವ್ಯಾಪಾರ ಸಂಕೀರ್ಣ ನಿರ್ಮಿಸಲು ನಿರ್ಧರಿಸಿ ಮಣ್ಣು ಸಮತಟ್ಟುಗೊಳಿಸುವ ಕಾಮಗಾರಿ ಆರಂಭಿಸಲಾಗಿತ್ತು. ಆಗ ಅರಣ್ಯ ಇಲಾಖೆಯು ತಡೆಹಿಡಿದಿತ್ತು. 1906ರಲ್ಲಿ ಆರ್‍ಡಿಒ ಅವರು ಪ್ರತ್ಯೇಕವಾದ ಆದೇಶದ ಮೂಲಕ ಈ ಸ್ಥಳವನ್ನು ನೀಡಲಾಗಿತ್ತು ಎಂದು ಹೇಳಲಾಗುತ್ತಿದೆ. ಆದರೆ ಸ್ಥಳದ ಬಗ್ಗೆ ಸಂಶಯವಿರುವ ಕಾರಣ ನ.2ರಂದು ನಿರ್ಮಾಣವನ್ನು ತಡೆಯಲಾಗಿತ್ತು. ಈ ಬಗ್ಗೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು, ಹಾಗೆಯೇ ಕರಾರುದಾರನ ವಿರುದ್ಧ ದೂರು ನೀಡಲಾಯಿತು. ಈ ಬಗ್ಗೆ ಈಗ ಸರ್ವೆ ನಡೆಸಲಾಯಿತು.
ಅರಣ್ಯ ಗಡಿ ಪ್ರದೇಶದಲ್ಲಿ ನಿರ್ಮಾಣಗಳನ್ನು ಕೈಗೊಳ್ಳುವಾಗ ಅನುಮತಿ ಪಡೆಯಬೇಕೆಂಬ ನಿಯಮವಿದೆ. ಈಗ ಅಲ್ಪ ಅತಿಕ್ರಮಣ ನಡೆದ ಹಿನ್ನೆಲೆಯಲ್ಲಿ ಈ ಪ್ರಕರಣದ ಬಗ್ಗೆ ಮುಂದಿನ ಆದೇಶ ಅರಣ್ಯ ಇಲಾಖೆಯನ್ನು ಹೊಂದಿಕೊಂಡಿದೆ. ಹೆಡ್ ಸರ್ವೆಯರ್ ಬಿಜು ಮೋನ್ ಮೇಥ್ಯು ನೇತೃತ್ವದಲ್ಲಿ ಸರ್ವೆ ನಡೆಸಲಾಯಿತು. ಈ ಸಂದರ್ಭದಲ್ಲಿ ರೇಂಜ್ ಅಧಿಕಾರಿ ಅನಿಲ್ ಕುಮಾರ್, ಎಂ.ಕೆ.ನಾರಾಯಣನ್, ಸಿ.ಕೆ.ಕುಮಾರನ್, ಪಿ.ಸುಹೈಬ್, ಪಿ.ಮಾಧವ ಮೊದಲಾದವರು ಉಪಸ್ಥಿತರಿದ್ದರು.