ಶನೈಶ್ಚರನ ಅನುಗ್ರದಿಂದ ಸಮೃದ್ದಿ ಪ್ರಾಪ್ತಿ-ರವಿರಾಜ್ ಶರ್ಮಾ ಒಕ್ಕೂಟ ಪದಗ್ರಹಣ-ಪೂಜಾ ಕಾರ್ಯಕ್ರಮ ಧಾರ್ಮಿಕ ಸಭೆಯಲ್ಲಿ
0
ಡಿಸೆಂಬರ್ 04, 2018
ಪೆರ್ಲ: "ಶನೈಶ್ಚರ ಆಯುಧಗಳನ್ನು ರಕ್ಷಣೆ ಮಾಡುವ ದೇವರು. ಈ ಹಿನ್ನೆಲೆಯಲ್ಲಿ ಶನೈಶ್ಚರ ಪೂಜೆಯ ಮೊದಲ ಫಲ ನಮ್ಮ ದೇಶದ ಗಡಿ ಕಾಯುವ ಯೋಧರಿಗೆ ಸಲ್ಲಬೇಕು. ಶನಿ ಎಂದರೆ ಕಂಟಕಪ್ರಾಯ ಎನ್ನುವುದು ತಪ್ಪು ಗ್ರಹಿಕೆ. ಶನಿ ಮೊದಲಿಗೆ ತನ್ನ ದೆಸೆಯ ಮೂಲಕ ಸಮಸ್ಯೆಗಳನ್ನೊದಗಿಸಿ ಪರೀಕ್ಷೆಗೊಳಪಡಿಸಿದರೂ ಕೂಡ ಬಳಿಕ ರಾಜಯೋಗವನ್ನು ನೀಡುತ್ತಾನೆ. ಶನಿ ಪ್ರಭಾವದಿಂದ ಜೀವನದಲ್ಲಿ ಅನೇಕ ಪರೀಕ್ಷೆಗಳೆದುರಾದರೂ ಶನಿ ದೇವರ ಆರಾಧನೆಯಿಂದ ಬದುಕಿನಲ್ಲಿ ಸಮೃದ್ಧಿ ಸಂಪತ್ತುಗಳು ಸನ್ಮಂಗಳ ಕಾರ್ಯಗಳು ನೆರವೇರುತ್ತದೆ ಎಂದು ಏತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ರವಿರಾಜ್ ಶರ್ಮಾ ತಿಳಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೆರ್ಲ ವಲಯ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಮತ್ತು ಶ್ರೀದುರ್ಗಾಪರಮೇಶ್ವರೀ ಭಜನಾ ಮಂದಿರ ಏತಡ್ಕ ಇದರ ಸಂಯುಕ್ತಾಶ್ರಮದಲ್ಲಿ ಏತಡ್ಕ ಶ್ರೀದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ನಡೆದ ಸಾಮೂಹಿಕ ಶ್ರೀಶನೈಶ್ಚರ ಪೂಜೆ ಹಾಗೂ ಮಹಿಳಾ ಜ್ಞಾನವಿಕಾಸ ವಾರ್ಷಿಕೋತ್ಸವ ಸಮಾರಂಭದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಶ್ರೀದುರ್ಗಾಪರಮೇಶ್ವರೀ ಭಜನಾ ಮಂದಿರದ ಅಧ್ಯಕ್ಷ ಬಾಲಕೃಷ್ಣ ಕೆ.ಕೆ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಯೋಜನೆಯ ಮಾನವ ಸಂಪನ್ಮೂಲ ವಿಭಾಗದ ನಿದೇಶಕಿ ಮಮತಾ ಹರೀಶ್ ರಾವ್ ಮಾತನಾಡಿ, ಶೈನೈಶ್ಚರ-ಸತ್ಯನಾರಾಯಣ ಪೂಜೆಯಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಘಟನಾತ್ಮಕ ಕ್ರೀಯಾಶೀಲತೆಯ ಚಟುವಟಿಕೆ ಜಾಗೃತಗೊಳ್ಳುತ್ತದೆ. ಕರ್ನಾಟಕ ಮಾತ್ರವಲ್ಲದೆ ಕಾಸರಗೋಡನ್ನೂ ಕರ್ನಾಟಕದ ಒಂದು ಭಾಗವೆಂದೇ ಪರಿಗಣಿಸಿಕೊಂಡು ಕಾಸರಗೋಡಿನಲ್ಲೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಯಶಸ್ವಿಯಾಗಿ ಸಂಘಟಿಸಲು ಸಾಧ್ಯವಾಯಿತು. ಹಲವಾರು ಮಾತೆಯರ ಮೂಲಕ ಪ್ರಗತಿನಿಧಿ ವಿನಿಯೋಗಿಸಿ ಕಾರ್ಯಪೃವೃತ್ತಗೊಂಡು ಸೇವಾ ಮನೋಭಾವ ಬೆಳೆಸಿಕೊಂಡು ಸ್ತ್ರೀ ಸಂಘಟನೆ, ಸ್ತ್ರೀಸಬಲತೆ, ವ್ಯಕ್ತಿತ್ವ ವಿಕಸನ, ಜಾತಿ ಧರ್ಮ ಮತ ಬೇಧವಿಲ್ಲದೆ ಬೆಳೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.
ಶ್ರೀಕ್ಷೇತ್ರ ಧ.ಗ್ರಾ. ಯೋಜನೆ ಕಾಸರಗೋಡು ವಲಯ ಜನಜಾಗೃತಿ ಸದಸ್ಯ ಸುಮಿತ್ ರಾಜ್, ಶ್ರೀಕ್ಷೇತ್ರ ಧ.ಗ್ರಾ. ಯೋಜನೆ ಕಾಸರಗೋಡು ವಲಯ ಯೋಜನಾಧಿಕಾರಿ ಚೇತನಾ ಎಂ, ಏತಡ್ಕ ಶಾಲಾ ಮುಖ್ಯೋಪಾಧ್ಯಾಯಿನಿ ಸರೋಜ. ಪಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9.30 ಕ್ಕೆ ಶ್ರೀದುರ್ಗಾಪರಮೇಶ್ವರೀ ಭಜನಾ ಸಂಘ ಏತಡ್ಕ ಇವರ ವತಿಯಿಂದ ಭಜನೆ, 10 ಗಂಟೆಗೆ ಮಹಾಪೂಜೆ ನಡೆಯಿತು.