ಸಾಹಿತ್ಯ ಸಂಭ್ರಮ ಉದ್ಘಾಟಿಸಿ ಅಭಿಮತ
ಬದಿಯಡ್ಕ: ಯುವ ಮನಸ್ಸುಗಳ ಸೃಜನಶೀಲತೆಯ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕಾದ ಅನಿವಾರ್ಯತೆ ಇಂದಿದೆ. ಪ್ರಾದೇಶಿಕ ಭಾಷೆಗಳ ಬೆಳವಣಿಗೆಗೆ ಹಿನ್ನಡೆ ಎದಿರಾಗಿರುವ ವರ್ತಮಾನದ ಕಾಲಘಟ್ಟ ಅಪಾಯಕಾರಿಯಾಗಿದ್ದು, ಕಲೆ-ಸಾಹಿತ್ಯಗಳು ವ್ಯವಸ್ಥೆಯನ್ನು ಕಟ್ಟುವ ಕಾಯಕ ಮಾಡುತ್ತದೆ ಎಂದು ಕರ್ನಾಟಕ ಸರಕಾರದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಪುತ್ತೂರಿನ ಪುತ್ತೂರು ಸಾಹಿತ್ಯ ವೇದಿಕೆ, ಮಾನ್ಯದ ಯಕ್ಷಮಿತ್ರರು ಮಾನ್ಯ, ಉಪ್ಪಿನಂಗಡಿಯ ಸತ್ಯಶಾಂತಾ ಪ್ರೊಡಕ್ಷನ್ಸ್ ಹಾಗೂ ಕೆದಿಲಾಯ ಪ್ರತಿಷ್ಠಾನ ಕಾಸರಗೋಡು ಘಟಕದ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನೀರ್ಚಾಲು ಸಮೀಪದ ಪುದುಕೋಳಿ ಶೇಷ ಸಭಾ ಭವನದಲ್ಲಿ ಆಯೋಜಿಸಲಾದ ಸಾಹಿತ್ಯ ಸಂಭ್ರಮ 2018-19 ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪರಂಪರೆಯ ಧಾತುಗಳಿಂದೊಡಗೂಡಿದ ಭಾಷೆಗಳು,ಸಮಕಾಲೀನ ಜಟಿಲತೆಯ ಜಗತ್ತಿನಲ್ಲಿ ಪೈಪೋಟಿಯನ್ನು ಎದುರಿಸುತ್ತಿರುವುದು ನಿಜವಾದರೂ ಯುವ ಸಮೂಹದ ಸೃಜನಶೀಲತೆಯನ್ನು ಬೆಳೆಸುವ ಮೂಲಕ ಉಳಿಸುವ ಹೊಣೆ ನಾಗರಿಕ ಪ್ರಪಂಚದ್ದಾಗಿದೆ. ಜೀವನ ಮೌಲ್ಯಗಳು, ಅನುಭವಗಳಿಂದ ಕೂಡಿದ ಅನಕ್ಷರಸ್ಥ ಜನಸಮೂಹದಿಂದ ಬೆಳೆದು ಬಂದ ಜನಪದ ಕಥನ ಕಾವ್ಯಗಳು ಸಾಹಿತ್ಯ ಪ್ರಪಂಚವನ್ನು ಶ್ರೀಮಂತಗೊಳಿಸಿದೆ ಎಂದು ಅವರು ತಿಳಿಸಿದರು.
ಕಾವ್ಯ ಸತ್ಯವನ್ನು ಮಾತ್ರ ಹೇಳುತ್ತದೆ. ಈ ಹಿನ್ನೆಲೆಯಲ್ಲಿ ಕಾಲಘಟ್ಟಗಳ ನೈಜ ಸ್ವರೂಪವನ್ನು ಬಿಚ್ಚಿಡುವ ಸಾಹಿತ್ಯ ಬರಹಗಳು ಎಂದಿಗೂ ಆಕರ ಗ್ರಂಥಗಳಾಗಿ ಹೊಸ ಸಮಾಜಕ್ಕೆ ಬೆಳಕು ನೀಡುತ್ತದೆ ಎಂದು ತಿಳಿಸಿದ ಅವರು ಹಿಂಸೆ, ಭಯೋತ್ಪಾಧನೆಗಳಂತಹ ಘಾತುಕ ಶಕ್ತಿಯಿಂದ ಪಾರಾಗಲು ಉತ್ತಮ ಸಾಹಿತ್ಯಗಳು ಪ್ರೇರಣೆ ನೀಡಬೇಕು ಎಂದು ಕರೆನೀಡಿದರು.
ಸಮಾರಂಭವನ್ನು ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದ ಶ್ರೀಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಅವರು ಮಾತನಾಡಿ, ಸಮಾಜ, ಸಮೂಹ, ರಾಷ್ಟ್ರಗಳ ಬಗ್ಗೆ ಅಭಿಮಾನ ಮೂಡಿಸುವ, ದೈವ ಶಕ್ತಿಯನ್ನು ಅಲ್ಲಗೆಳೆಯದೆ ವಿಶ್ವಾಸವನ್ನು ಬೆಂಬಲಿಸುವ ಸಾಹಿತ್ಯ ಬರಹಗಳು ಇಂದಿಗೆ ಅಗತ್ಯವಿದೆ ಎಂದು ತಿಳಿಸಿದರು. ಯಕ್ಷಗಾನ ಕಲಾ ಪರಂಪರೆಯು ಕನ್ನಡ ಸಾಹಿತ್ಯ ಪ್ರಪಂಚದ ಅದ್ವಿತೀಯ ಸಾಹಿತ್ಯ ಪರಂಪರೆಯಾಗಿದ್ದು, ಅಲ್ಲಿಯ ಸಾಹಿತ್ಯ-ಮಾತಿನ ಚಮತ್ಕಾರಗಳೊಳಗಿನ ಧ್ವನಿಗಳ ದಾಖಲೀಕರಣ ಆಗಬೇಕು ಎಂದು ತಿಳಿಸಿದ ಅವರು, ಶಬ್ದ ಮತ್ತು ಅದರೊಳಗೆ ಬಹುಮುಖಿ ಅರ್ಥ ಹೊಮ್ಮುವ ಸಾಹಿತ್ಯಗಳು ರಚನೆಗೊಳ್ಳಬೇಕು. ಸಾಹಿತ್ಯದ ಬಗೆಗಿನ ಮಡಿವಂತಿಕೆ ನಾಶವಾಗಬಾರದು ಎಂದು ತಿಳಿಸಿದರು. ಸ್ವಾತಂತ್ರ್ಯದ ಛಾಯೆಯ ಮರೆಯಲ್ಲಿ ಕೆರಳಿಸುವ, ವಿಕೃತಿಗೊಳಪಡಿಸುವ ಬರಹಗಳಿಂದ ಅಪಾಯಗಳಿದೆ ಎಂದು ಅವರು ವಿಶ್ಲೇಶಿಸಿದರು.
ಸಾಹಿತಿ, ವಿಮರ್ಶಕ ವಿ.ಬಿ.ಅರ್ತಿಕಜೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಸಾಹಿತ್ಯ ಕಾರ್ಯಕ್ರಮಗಳು ಪರಂಪರೆಯ ಮೌಲ್ಯಗಳಿಂದ ಕಳಚದಿರಲಿ. ಬರೆಯುವ ಹುಮ್ಮನಸ್ಸು ಕ್ರಿಯಾತ್ಮಕವಾಗಿ ಗಟ್ಟಿತನದಿಂದೊಡಗೂಡಿ ಭಾವನೆಗಳನ್ನು ಅಥ್ರ್ಯಸುವ ಮಾಧ್ಯಮವಾಗಿ ಮೂಡಿಬರಬೇಕು. ವ್ಯಾಪಕ ಸಾಧ್ಯತೆಗಳ ಸಾಹಿತ್ಯ ಪ್ರಪಂಚ ಮನಬಂದಂತೆ ತೋಚಿದ್ದನ್ನು ಗೀಚುವ ವಿಭಾಗವಾಗಿ ಕುಲಗೆಡಿಸದಿರಲಿ ಎಂಬ ತುಡಿತ ಸಾಹಿತ್ಯ ಪ್ರಿಯರದ್ದು ಎಂದು ತಿಳಿಸಿದರು.
ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್, ಸಾಹಿತಿ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಉಪಸ್ಥಿತರಿದ್ದು ಶುಭಹಾರೈಸಿರು.
ಸಮಾರಂಭದಲ್ಲಿ ಬಹುಮುಖ ಪ್ರತಿಭೆಗಳಾದ ಸ್ವಸ್ರಿಶ್ರೀ ಮಂಗಳೂರು, ಪ್ರಿತಾಲಿ ಶೆಟ್ಟಿ ಮಂಗಳೂರು, ಶ್ರೇಯಾ ಕಲ್ಲೂರಾಯ, ಆದಿತ್ಯ ಎಸ್.ಆರ್, ಸಮನ್ವಿತಾ ಗಣೇಶ್ ಕಾಸರಗೋಡು, ಪ್ರಣಮ್ಯ ಎಂ.ಕಾಟುಕುಕ್ಕೆ, ಉಪಾಸನಾ ಪಂಜರಿಕೆ, ವೈಷ್ಣವಿ ಮಾನ್ಯ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಸಾಹಿತಿ ವಿ.ಬಿ.ಅರ್ತಿಕಜೆ ಅವರು ಶಾಂತಾ ರವಿ ಕುಂಟಿನಿ ಅವರ ಸಾಧನೆಯ ಹಾದಿ ಕೃತಿಯನ್ನು ಬಿಡುಗಡೆಗೊಳಿಸಿದರು. ಜಯಶ್ರೀ ಅನಂತಪುರ ಮತ್ತು ಬಳಗ ಪ್ರಾರ್ಥನಾ ಗೀತೆ ಹಾಡಿದರು. ಪುತ್ತೂರು ಸಾಹಿತ್ಯ ವೇದಿಕೆಯ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಕಟ್ಟತ್ತಿಲ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಭೀಮರಾವ್ ವಾಷ್ಠರ್ ವಂದಿಸಿದು. ಕೃಷ್ಣಮೂರ್ತಿ ಪುದುಕೋಳಿ ಕಾರ್ಯಕ್ರಮ ನಿರೂಪಿಸಿದರು.ಸುಬ್ರಹ್ಮಣ್ಯ ಭಟ್ ಪುದುಕೋಳಿ ಉಪಸ್ಥಿತರಿದ್ದು ಸಹಕರಿಸಿದರು.
ಬಳಿಕ ಕಾಸರಗೋಡಿನ ಗಾನಮಂಜೂಷ ಬಳಗದವರಿಂದ ಗಾಯನ, ಮಕ್ಕಳ ಕವಿಗೋಷ್ಠಿ, ಯುವ ಕವಿಗೋಷ್ಠಿ, ಮಹಿಳಾ ಕವಿಗೋಷ್ಠಿ ನಡೆಯಿತು. ಸಂಜೆ ಸಮಾರೋಪ ಸಮರಂಭದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.