ಕಾನತ್ತೂರು ದೈವಸ್ಥಾನದಲ್ಲಿ ನಾಳೆಯಿಂದ ವಾರ್ಷಿಕ ಕಳಿಯಾಟ ಮಹೋತ್ಸವ
0
ಡಿಸೆಂಬರ್ 28, 2018
ಮುಳ್ಳೇರಿಯ: ಪಾರಂಪರಿಕ ವ್ಯವಸ್ಥೆ,ನಂಬಿಕೆ, ಜೀವನಕ್ರಮಗಳು ಸಂಪೂರ್ಣ ಬದಲಾಗಿ ಆಧುನಿಕತೆಗೆ ಒಂದೆಡೆ ಜಗತ್ತು ಹೊರಳುತ್ತಿರುವ ಮಧ್ಯೆ ತುಳುನಾಡಿನ ವಿಶಿಷ್ಟ ನಂಬಿಕೆಗಳಲ್ಲಿ ಇನ್ನೂ ಹಲವು ಜೀವಂತವಾಗಿ ಮುಂದುವರಿಯುತ್ತಿರುವುದು ಮಣ್ಣಿನ ಪ್ರೇಮ, ಅಭಿಮಾನದ ಸಂಕೇತ. ಇಲ್ಲಿಯ ಜನರ ಜೀವನ ಪ್ರೀತಿ, ನಂಬಿಕೆ-ನಡವಳಿಕೆಗಳು ಬದುಕಿನ ಪ್ರಮುಖ ಭಾಗವಾಗಿ ಮುಂದುವರಿಯುತ್ತಿರುವುದಕ್ಕೆ ಸಾಕ್ಷಿಯಾಗಿ ಧರ್ಮದ ನೆಲೆಗಟ್ಟಿನ ಸಮಾಜ ನಿರ್ಮಾಣದ ಲಕ್ಷ್ಯದ ಕಾರಣ ಗಡಿನಾಡು ಕಾಸರಗೋಡಿನ ಕಾನತ್ತೂರು ನಾಲ್ವರ್ ಕ್ಷೇತ್ರ ನ್ಯಾಯ ದೇಗುಲವಾಗಿ ಹೆಸರುಪಡೆದಿದೆ.
ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದಲ್ಲಿ ವಾರ್ಷಿಕ ಕಳಿಯಾಟ ಮಹೋತ್ಸವ ಡಿ. 29ರಿಂದ ಜ. 2ರ ವರೆಗೆ ಜರುಗಲಿರುವುದು. ಕೇರಳ-ಕರ್ನಾಟಕದ ಪ್ರಸಿದ್ಧ ಹಾಗೂ ಅತ್ಯಂತ ಕಾರಣಿಕದಿಂದ ಕೂಡಿದ ದೈವಿಕ ಕ್ಷೇತ್ರವಾಗಿ ಖ್ಯಾತಿ ಗಳಿಸಿರುವ ಕ್ಷೇತ್ರ ಪರ್ಯಾಯ ಪರಮೋನ್ನತ ನ್ಯಾಯಸ್ಥಾನವಾಗಿ ಹೆಸರು ಪಡೆದುಕೊಂಡಿದೆ.
ನಾಲ್ವರ್ ದೈವಗಳು ಹಾಗೂ ತುಳುನಾಡಿನ ರಾಜದೈವಗಳ ಸಂಗಮವಾಗಿ ಮಹೋತ್ಸವವನ್ನು ಪ್ರತಿ ವರ್ಷ ಆಚರಿಸಲಾಗುತ್ತಿದೆ.
ಕನಕ ಮಹರ್ಷಿಯ ತಪೋಭೂಮಿಯಿಂದಾಗಿ ಈ ಪ್ರದೇಶಕ್ಕೆ ಕನಕಪುರ ಎಂಬ ಹೆಸರು ಮುಂದೆ ಕನಕತ್ತೂರು ಹಾಗೂ ಕಾನತ್ತೂರು ಆಗಿ ಬದಲಾಗಿದೆಯೆಂದು ಪ್ರತೀತಿ. ಶ್ರೀರಕ್ತೇಶ್ವರೀ, ಶ್ರೀವಿಷ್ಣುಮೂರ್ತಿ, ಶ್ರೀ ಚಾಮುಂಡಿ ಹಾಗೂ ಶ್ರೀ ಪಂಜುರ್ಲಿ ಎಂಬ ನಾಲ್ಕು ಮಹಾನ್ ದೈವಗಳು ಇಲ್ಲಿ ಆವಾಸಗೊಂಡಿರುವುದರಿಂದಲೇ ಈ ತಾಣಕ್ಕೆ ನಾಲ್ವರ್ ದೈವಸ್ಥಾನ ಎಂಬ ಹೆಸರು ಹುಟ್ಟಿಕೊಂಡಿದೆ. ಜಾತಿ ಧರ್ಮ ಭೇದವಿಲ್ಲದೆ ಭಕ್ತಾದಿಗಳು ಇಲ್ಲಿಗಾಗಮಿಸುತ್ತಾರೆ. ಕಳಿಯಾಟ ಸಂದರ್ಭ ಪ್ರೇತಗಳ ವಿಮೋಚನೆಗಾಗಿ ನೂರಾರು ಮಂದಿ ಬಂದು ಸೇರುತ್ತಾರೆ. ವರ್ಷದಲ್ಲಿ 2ರಿಂದ 3ಸಾವಿರ ವ್ಯಾಜ್ಯಗಳಿಗೆ ಇಲ್ಲಿ ಪರಿಹಾರ ಕಲ್ಪಿಸಲಾಗುತ್ತಿರುವುದರಿಂದಲೇ ಇದು ನ್ಯಾಯ ದೇಗುಲವಾಗಿ ಪರಿಗಣಿಸಲ್ಪಟ್ಟಿದೆ.
29ರಿಂದ ಕಳಿಯಾಟ:
ಪ್ರತಿ ವರ್ಷ ಧನು ಮಾಸ 12ರಿಂದ 18ರ(ಡಿ. 29ರಿಂದ ಜ. 2) ವರೆಗೆ ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದಲ್ಲಿ ವಾರ್ಷಿಕ ಕಳಿಯಾಟ ಮಹೋತ್ಸವ ನಡೆದು ಬರುತ್ತಿದೆ. ಡಿ. 28ರಂದು ಸಂಜೆ ಶ್ರೀನಾಲ್ವರ್ ದೈವಸ್ಥಾನದ ಸನ್ನಿಧಿಗಳಾದ ಕೊಟ್ಟಾರಂ, ಪಡಿಪ್ಪುರ, ಕಳರಿವೀಡ್, ಕಾವುಗಳಲ್ಲಿ ತಂತ್ರಿವರ್ಯತ ನೇತೃತ್ವದಲ್ಲಿ ಶುದ್ಧಿ ಕಲಶ, ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಳಿಯಾಟಕ್ಕೆ ಚಾಲನೆ ನೀಡಲಾಗುತ್ತದೆ.29ರಂದು ದೈವಕೋಲಧಾರಿಗಳಿಗೆ ಕರ್ತವ್ಯ ಹಂಚಿಕೆಯೊಂದಿಗೆ 30ರಂದು ಶ್ರೀಭಂಡಾರದ ಆಗಮನವಾಗಿ ಉತ್ಸವ ಆರಂಭಗೊಳ್ಳಲಿರುವುದು.
ಹಲವು ಶತಮಾನಗಳ ಇತಿಹಾಸ ಹೊಂದಿರುವ ಸತ್ಯಸ್ಥಳದಲ್ಲಿ ಕೆಳಭಾಗದಲ್ಲಿ ಶ್ರೀನಾಲ್ವರ್ ದೈವಸ್ಥಾನ ನೆಲೆಗೊಂಡಿದ್ದರೆ, ದೈವಸ್ಥಾನದ ಪೂರ್ವಕ್ಕೆ ಎತ್ತರದ ಪ್ರದೇಶದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಲ್ಲಿ ಶ್ರೀಸದಾಶಿವ ನೆಲೆಗೊಂಡು ಭಕ್ತಾದಿಗಳನ್ನು ಸಲಹುತ್ತಿದ್ದಾರೆ. ಭಕ್ತಿಭಾವದಿಂದ ಬೇಡಿದವರ, ಮನನೊಂದವರ ಆರ್ತನಾದಕ್ಕೆ ಅಭಯದಾತನಾಗಿ ಹಾಗೂ ಅಧರ್ಮದ ಹಾದಿಯಲ್ಲಿ ನಡೆಯುವವರು, ಸುಳ್ಳು, ವಂಚನೆಯೊಂದಿಗೆ ಈಶ್ವರನಿಂದನೆ ಮಾಡುವವರಿಗೆ ಶಿಕ್ಷೆ ಲಭಿಸಿದ ಅದೆಷ್ಟೋ ನಿದರ್ಶನಗಳಿವೆ. ಜಾತಿ ಧರ್ಮ ಭೇದವಿಲ್ಲದೆ ಭಕ್ತಾದಿಗಳು ಇಲ್ಲಿಗಾಗಮಿಸುತ್ತಾರೆ. ಕಳಿಯಾಟ ಸಂದರ್ಭ ಪ್ರೇತಗಳ ವಿಮೋಚನೆಗಾಗಿ ನೂರಾರು ಮಂದಿ ಬಂದು ಸೇರುತ್ತಾರೆ. ವರ್ಷದಲ್ಲಿ 2ರಿಂದ 3ಸಾವಿರ ವ್ಯಾಜ್ಯಗಳಿಗೆ ಇಲ್ಲಿ ಪರಿಹಾರ ಕಲ್ಪಿಸಲಾಗುತ್ತಿದೆ!
ಕಾನತ್ತೂರು ಕ್ಷೇತ್ರ ಬರಿಯ ದೈವಸ್ಥಾನವಲ್ಲ. ನ್ಯಾಯ ದೇಗುಲವಾಗಿಯೂ ಪ್ರಸಿದ್ಧಿಗೆ ಕಾರಣವಾಗಿದೆ. ಅದೆಷ್ಟೋ ವ್ಯಾಜ್ಯ, ತಕರಾರುಗಳು ಇಲ್ಲಿ ಸೌಹಾರ್ದವಾಗಿ ತೀರ್ಪುಕಂಡುಕೊಳ್ಳಲಾಗಿದೆ. ಒಡೆದು ಹೋದ ಹಲವು ಕುಟುಂಬಗಳು ಒಂದುಗೂಡಿದೆ. ಹೈಕೋರ್ಟು, ಸುಪ್ರೀಂ ಕೋಟು ್ ಮೆಟ್ಟಿಲೇರಿದ ವ್ಯಾಜ್ಯಗಳಿಗೆ ಕಾನತ್ತೂರಿನ ಪುಣ್ಯದ ನೆಲದಲ್ಲಿ ಸೌಹಾರ್ದ ಪರಿಹಾರ ಲಭಿಸಿದೆ. ದ.ಕ ಜಿಲ್ಲೆಯ ಕಾರಣಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಧರ್ಮಸ್ಥಳದಷ್ಟೇ ಭಕ್ತಿ ಗೌರವಾದರಗಳಿಂದ ಕಾನತ್ತೂರಿಗೆ ಭಕ್ತಾದಿಗಳು ಹರಿಕೆ ಹೊತ್ತು ಆಗಮಿಸುತ್ತಾರೆ. ಶ್ರೀಧರ್ಮಸ್ಥಳದಿಂದ ವರಾಹ(ಹಂದಿ)ಮೂಲಕ ಶ್ರೀ ಪಂಜುರ್ಲಿ ದೈವ ಸಂಚಾರ ಆರಂಭಿಸಿ ಯಾತ್ರೆಯ ನಡುವೆ ಶ್ರೀ ರಕ್ತೇಶ್ವರೀ, ಶ್ರೀಚಾಮುಂಡಿ, ಶ್ರೀ ವಿಷ್ಣುಮೂರ್ತಿ ದೈವಗಳೊಂದಿಗೆ ಶತ್ರುಸಂಹಾರ ನಡೆಸುತ್ತಾ ಪೊವ್ವಲ್, ಬಾವಿಕೆರೆ, ಬೆದಿರ ಮುಂತಾದೆಡೆ ಅಧಿಪತ್ಯ ಸ್ಥಾಪಿಸಿ ಕುಂಡಂಕುಳಿ, ಎರಿಞÂಪುಯ ಹಾದಿಯಾಗಿ ಕಾನತ್ತೂರು ಆಗಮಿಸಿರುವುದಾಗಿ ಪ್ರತೀತಿ.
ನ್ಯಾಯ ತೀರ್ಮಾನ ಹೀಗೆ:
ವ್ಯಾಜ್ಯಗಳು ದೈವಸ್ಥಾನಕ್ಕೆ ಬಂದರೆ ಇಲ್ಲಿನ ಆಡಳಿತ ಮೊಕ್ತೇಸರರು ದೈವದ ಹೆಸರಲ್ಲಿ ಪ್ರತಿವಾದಿಯನ್ನು ಕ್ಷೇತ್ರಕ್ಕೆ ಕರೆಸುತ್ತಾರೆ. ನಿಗದಿತ ದಿನಾಂಕದಂದು ಎರಡೂ ಕಡೆಯವರು ಕ್ಷೇತ್ರದಲ್ಲಿ ಹಾಜರಾಗಿ ವಿಚಾರಣೆ ನಡೆಸಲಾಗುತ್ತದೆ. ವಾದ, ವಿವಾದ ಆಲಿಸಿ ಕೆಲವೊಂದು ನಿಬಂಧನೆಗಳೊಂದಿಗೆ ಆಡಳಿತ ಮೊಕ್ತೇಸರರು ತೀರ್ಪು ಕಲ್ಪಿಸುತ್ತಾರೆ. ದೈವ ಸನ್ನಿಧಿಯಿಂದ ಹೊರಬೀಳುವ ತೀರ್ಪನ್ನು ಎರಡೂ ಕಡೆಯವರು ಅಂಗೀಕರಿಸಬೇಕೆಂಬುದು ಅಲಿಖಿತ ಶಾಸನ. ಇಲ್ಲಿನ ಪುದುಕೋಡಿ ನಾಯರ್ ತರವಾಡಿನವರಿಗೆ ದೈವಸ್ತಾನದ ಆಡಳಿತ ನಡೆಸುವ ಹಕ್ಕು ಪರಂಪರಾಗತವಾಗಿ ಪ್ರಾಪ್ತಿಯಾಗಿದೆ. ಪುದುಕೋಡಿ ತರವಾಡಿನ ಮೂರು ಶಾಖೆಗಳಿದ್ದು, ಒಂದೊಂದು ಶಾಖೆ ಪ್ರಮುಖರು ಮೂರು ವರ್ಷ ಕಾಲ ಪರ್ಯಾಯ ವ್ಯವಸ್ಥೆಯಡಿ ಆಡಳಿತ ಹೊಣೆ ವಹಿಸಿಕೊಳ್ಳುತ್ತಿದ್ದಾರೆ.ಪ್ರಸ್ತುತ ಮ್ಯಾನೆಜಿಂಗ್ ಟ್ರಸ್ಟಿ ಆಗಿ ಕೆ.ಪಿ.ಮಾಲಿಂಗು ನಾಯರ್ ಆಡಳಿತ ಚುಕ್ಕಾಣಿ ವಹಿಸಿಕೊಂಡಿದ್ದಾರೆ.