ಸಾಂಪ್ರದಾಯಿಕ ಶ್ರದ್ದಾ ಭಕ್ತಿಗಳೊಂದಿಗೆ ಸಂಪನ್ನಗೊಂಡ ಅರಿಬೈಲು ಕಂಬಳ
0
ಡಿಸೆಂಬರ್ 05, 2018
ಮಂಜೇಶ್ವರ: ಗಡಿನಾಡಿನ ಏಕೈಕ ದೇವರ ಕಂಬಳವೆಂದೇ ಪ್ರಸಿದ್ದಿ ಪಡೆದಿರುವ ಅರಿಬೈಲು ಶ್ರೀನಾಗಬ್ರಹ್ಮ ಕಂಬಳ ಮಂಗಳವಾರ ಸಾಂಪ್ರದಾಯಿಕ ಶ್ರದ್ದಾ ಭಕ್ತಿಗಳೊಂದಿಗೆ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಮಧ್ಯಾಹ್ನ ವಿಶೇಷ ಪೂಜಾದಿಗಳು ಶ್ರೀನಾಗಬ್ರಹ್ಮನಿಗೆ ಸಲ್ಲಿಕೆಯಾಯಿತು. ಅಪರಾಹ್ನ 3ಕ್ಕೆ ಒಂದು ಜೊತೆ ಉಪವಾಸದ ಕೋಣಗಳು ಕಂಬಳದಗದ್ದೆಗೆ ಇಳಿಯುವ ಮೂಲಕ ಕಂಬಳ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಈ ಸಂದರ್ಭ ಪಾವೂರು ಮೋನು ಬ್ಯಾರಿ ಎಂಬರ ಜೊತೆ ಕೋಣಗಳು ಮೊದಲು ಉಪವಾಸದ ಕೋಣಗಳಾಗಿ ಗದ್ದೆಗಿಳಿದವು.
ಬಳಿಕ ನಡೆದ ಸಾಂಪ್ರದಾಯಿಕ ಕಂಬಳದಲ್ಲಿ ಕೌಡೂರು ಬೀಡು ಮಾರಪ್ಪ ಭಂಡಾರಿಯವರ ಎರಡು ಜೊತೆ ಕೋಣಗಳು, ತಲಪಾಡಿ ಪಂಜಾಳದ ರಕ್ಷಿತ್ ರವೀಂದ್ರ ಪಕಳರ ಎರಡು ಜೊತೆಕೋಣಗಳು, ಪಟ್ಟತ್ತಮೊಗರು ಹೊಸಮನೆಯ ಕೃಷ್ಣ ಶೆಟ್ಟಿ, ಕುಂಜತ್ತೂರು ಹೊಸಮನೆಯ ಶಾಂತಪ್ಪ ಶೆಟ್ಟಿ, ಕೂಟತ್ತಜೆ ನಿಡಾಬಿರಿಯ ಗೋಪಾಲ ಮಡಿವಾಳ, ಪಜಿಂಗಾರು ಬೆಟ್ಟುಮನೆಯ ಆನಂದ ಪಜಿಂಗಾರು, ಕಡಂಬಾರು ಸಂಜೀವ ಮಡಿವಾಳ, ಕಲ್ಲಾಜೆ ಜಗನ್ನಾಥ ಶೆಟ್ಟಿ, ಐತ್ತಪ್ಪ ಅರಿಬೈಲು ಇವರುಗಳ ಜೋಡಿ ಕೋಣಗಳು ಕಂಬಳದಲ್ಲಿ ಭಾಗವಹಿಸಿದವು. ಈ ಪೈಕಿ ಕೌಡೂರು ಬೀಡು ಮಾರಪ್ಪ ಭಂಡಾರಿಯವರ ಬಿ ತಂಡದ ಜೋಡಿ ಪ್ರಥಮ ಬಹುಮಾನ ಪಡೆಯಿತು.
ಅರಿಬೈಲು ನೆತ್ಯದ ಗೋಪಾಲ ಶೆಟ್ಟಿ ಅರಿಬೈಲು ಅವರು ಕಂಬಳ ನಿರ್ವಹಣೆ ಮಾಡಿದರು. ಅರಿಬೈಲು ಕಟ್ಟೆಮನೆ ಪಕೀರ ಮೂಲ್ಯ, ರಮೇಶ, ನಾರಾಯಣ, ಕಟ್ಟೆಮನೆ ಗೋಪಾಲ ಮೂಲ್ಯ ಮೊದಲಾದವರು ಸಹಕರಿಸಿದರು.
ಸಂಜೆ ಸೂರ್ಯಾಸ್ಥಮಾನದ ಹೊತ್ತಿಗೆ ಉಪವಾಸದ ಕೋಣಗಳು ಗದ್ದೆಯ ಮೇಲೇರಿ ಅದು ಗದ್ದೆಗೆ ಮೂರು ಸುತ್ತುಬಂದು ಕರಿನೀರು ಹಾಕುವುದರೊಂದಿಗೆ ಕಂಬಳ ಸಮಾರೋಪಗೊಂಡಿತು. ಬಳಿಕ ಪೂಕರೆ (ಕಂಗು ಹೂಗಳ ವಿಶೇಷ ಶೃಂಗಾರ) ಹಾಕಿ ರಾತ್ರಿ ಪೂಜೆ, ಶ್ರೀನಾಗಬ್ರಹ್ಮ ಉತ್ಸವಗಳೊಂದಿಗೆ ಕಂಬಳ ಸಂಪನ್ನಗೊಂಡಿತು.
ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಗಳಿಂದ ವಿಶೇಷ ಆಸಕ್ತಿಯಿರುವ ನಾಗಬ್ರಹ್ಮ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಇಲ್ಲಿಯ ವಿಶೇಷತೆಯಾಗಿದೆ.
ಆಧುನಿಕ ಬದುಕು, ಜೀವನಪದ್ದತಿಗಳ ಮಧ್ಯೆಯೂ ತುಳುನಾಡಿನ ಸಾಂಪ್ರದಾಯಿಕ ಕೃಷಿ ಜೀವನದ ಅಂಗವಾಗಿ ಮೂಡಿಬಂದಿರುವ ಕಂಬಳಗಳು ಇಂದು ವಿರಳವಾಗುತ್ತಿರುವಾಗ ಅರಿಬೈಲು ಕಂಬಳ ಸಂಸ್ಕøತಿ-ಜಾನಪದಾಚರಣೆಯ ಮೂಲಕ ಇನ್ನೂ ಜೀವಂತವಾಗಿರುವುದು ಈ ತಲೆಮಾರಿನ ಸೌಭಾಗ್ಯವೆಂದೇ ಬಿಂಬಿತವಾಗಿದೆ.
ಈ ಸಂದರ್ಭ ಸ್ಥಳೀಯ ಅರಿಬೈಲು ಶ್ರೀ ನಾಗಬ್ರಹ್ಮ ಯುವಕ ಮಂಡಲದ 36 ನೇ ವಾರ್ಷಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಅರಿಬೈಲು ಕಂಬಳಗದ್ದೆ ಸಮೀಪ ನಡೆಯಿತು.
ರಾತ್ರಿ 8 ಕ್ಕೆ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಶ್ವ ಹಿಂದು ಪರಿಷತ್ ಮಾತೃ ಶಕ್ತಿ ಮಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷೆ ಮೀರಾ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟ ಅರವಿಂದ್ ಬೋಳಾರ, ಸುದೇಶ್ ಕುಮಾರ್ ರೈ ಬಿ, ಪುರುಷೋತ್ತಮ್ ಕೆ.ಭಂಡಾರಿ, ಅಶ್ವಥ್ ಪೂಜಾರಿ ಲಾಲ್‍ಬಾಗ್, ವಿಕ್ರಮದತ್ತ ಭಾಗವಹಿಸಿದರು.
ಕೃಷ್ಣ ಶೆಟ್ಟಿ ಅರಿಬೈಲು, ವಿಶ್ವನಾಥ ಶೆಟ್ಟಿ ಅರಿಬೈಲು ಹೊಸಮನೆ ಉಪಸ್ಥಿತರಿದ್ದರು. ಹಿರಿಯ ಕೃಷಿ ಕಾರ್ಮಿಕರಾದ ಕಲ್ಯಾಣಿ ಅರಿಬೈಲು, ಮುಂಡಿ ಅರಿಬೈಲು ಅವರನ್ನು ಸಮ್ಮಾನಿಸಲಾಯಿತು.
ರಾತ್ರಿ 10.30 ರಿಂದ ಮ್ಯೂಸಿಕಲ್ ನೈಟ್, ವಿಭಿನ್ನ ನೃತ್ಯ ಕಾರ್ಯಕ್ರಮ ಜರಗಿತು. ಸಂಜೆ 6 ಕ್ಕೆ ಯಕ್ಷ-ಗಾನ-ವೈಭವ ನಡೆಯಿತು. ರಾತ್ರಿ 10 ಕ್ಕೆ ನಾಗಬ್ರಹ್ಮ ದೇವರ ಮಹಾಪೂಜೆ, ಪ್ರಸಾದ ವಿತರಣೆ ನೆರವೇರಿತು.