ಪೆರ್ಲ: ಅನುಭವ ಶ್ರೀಮಂತಿಕೆ, ದೃಢತೆ, ಆತ್ಮವಿಶ್ವಾಸ, ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಬೌದ್ಧಿಕ ಬೆಳವಣಿಗೆಗೆ ರಾಷ್ಟ್ರೀಯ ಸೇವಾ ಶಿಬಿರಗಳು ಪೂರಕ ಎಂದು ಪೆರ್ಲ ನಾಲಂದ ಮಹಾವಿದ್ಯಾಲಯ ಕಾರ್ಯ ನಿರ್ವಾಹಣಾ ಸಮಿತಿ ಅಧ್ಯಕ್ಷ ಕೆ.ಶಿವಕುಮಾರ್ ಹೇಳಿದರು.
ವಾಣೀನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಗುರುವಾರ ನಡೆದ ನಾಲಂದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಬಿರಗಳಲ್ಲಿ ಭಾಗವಹಿಸುವುದರಿಂದ ಆತ್ಮ ವಿಶ್ವಾಸ ವೃದ್ಧಿಸುವುದಲ್ಲದೆ ಸಮಾನತೆ, ಸಹ ಬಾಳ್ವೆ, ಜಾತಿ ಭೇದಗಳು ನೀಗಿ ಸಂಘ ಜೀವನ, ವಿಶ್ವಾಸ, ಜವಾಬ್ದಾರಿ ನಿರ್ವಹಣೆ ಮೊದಲಾಗಿ ಮಹತ್ವದ ಮೌಲ್ಯಗಳನ್ನು ಕರಗತ ಮಾಡಿಕೊಳ್ಳಲು ಸಾಧ್ಯ. ಶಿಬಿರದ ಭಾಗವಾಗಿ ನಡೆಸುವ ಸಾಂಸ್ಕೃತಿಕ ಚಟುವಟಿಕೆಗಳು ಸಂಕೋಚ, ಆತಂಕ, ಸಭಾ ಕಂಪನ ದೂರವಾಗಿ ಧೈರ್ಯದಿಂದ ಕೌಶಲ್ಯ, ಪ್ರತಿಭೆ ತೋರ್ಪಡಿಕೆಯ ವೇದಿಕೆಯಾಗಿದೆ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿ ವ್ಯಕ್ತಿತ್ವ ಬೆಳಸುವುದಲ್ಲದೆ ಅದರ ಪಾಲನೆ ಸಮಾಜ ಹಾಗೂ ದೇಶದ ಅಭಿವೃದ್ಧಿಗೆ ನಾಂದಿಯಾಗುವುದು. ಉದಾತ್ತ ಹಾಗೂ ಶ್ರೇಷ್ಠ ಹೊಸ ನಾಡು ಕಟ್ಟಲು ಯುವತ್ವ ಸಜ್ಜಾಗಬೇಕು ಎಂದರು.
ಸಮಾರೋಪ ಸಮಾರಂಭವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದ ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷೆ ಶಾರದಾ ವೈ. ಮಾತನಾಡಿ, ಶಿಬಿರದಲ್ಲಿ ಭಾಗವಹಿಸಿದ ಪ್ರತಿಯೊಬ್ಬನೂ ಕಲಿತ ವಿಷಯ ಹಾಗೂ ಅನುಭವಗಳನ್ನು ಜೀವನದಲ್ಲಿ ಪಾಲಿಸಿ ಅಳವಡಿಸಿ ನಾಯಕತ್ವದ ಗುಣದೊಂದಿಗೆ ಸಮಾನತೆ, ಮಾನವಿಯ ಸಂಬಂಧ, ಸಾಮಾಜಿಕ ಜವಾಬ್ದಾರಿ ಹಾಗೂ ಮೌಲ್ಯಗಳನ್ನು ಅರಿತು ಸಂದರ್ಭೋಚಿತ ಸದ್ಬಳಕೆಯಿಂದ ಮಾದರಿ ವ್ಯಕ್ತಿಯಾಗಿ ಬೆಳೆಯಬೇಕು ಎಂದರು.
ನಾಲಂದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ವಿಘ್ನೇಶ್ವರ ವರ್ಮುಡಿ ಮಾತನಾಡಿ, ಸಾಪ್ತಾಹಿಕ ಶಿಬಿರವು ಹಳ್ಳಿಯ ಸಂಸ್ಕಾರ, ನಡೆ ನುಡಿ, ಸಾಮಾಜಿಕ ಆಚಾರ ವಿಚಾರ, ಆರೋಗ್ಯ, ನೈರ್ಮಲ್ಯ, ಗ್ರಾಮೀಣ ಜೀವನದ ರೀತಿ ಶ್ರಮ, ಪ್ರತಿಫಲಾಪೇಕ್ಷೆ ಇಲ್ಲದ ಸೇವಾ ಮನೋಭಾವದ ದುಡಿಮೆಯಿಂದ ಹೊಸ ಅನುಭವ ಹಾಗೂ ಮನೋ ವಿಕಾಸ, ಗ್ರಾಮೀಣ ಪ್ರದೇಶಗಳಲ್ಲಿ ಶಿಬಿರವನ್ನು ನಡೆಸುವುದರ ಮೂಲಕ ಗ್ರಾಮವೂ ವಿಕಾಸ ವಾಗುವುದು.ಜೀವನದ ಮುಂದಿನ ಘಟ್ಟದಲ್ಕೂ ಸಮಾಜದ ಒಳಿತಿಗಾಗಿ ತಮ್ಮನ್ನು ಸಮರ್ಪಿಸಬೇಕು ಎಂದರು.
ಶಿಬಿರ ನಿರ್ದೇಶಕ ಶಂಕರ ಖಂಡಿಗೆ ಸಾಪ್ತಾಹಿಕ ಶಿಬಿರದ ಮೌಲ್ಯಮಾಪನ ನಡೆಸಿ, ವರದಿಯನ್ನು ಗ್ರಾ.ಪಂ. ಅಧ್ಯಕ್ಷೆಗೆ ಹಸ್ತಾಂತರಿಸಿದರು. ನಾಲಂದ ಮಹಾ ವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ರಾಜಶೇಖರ್ ಪೆರ್ಲ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಎಣ್ಮಕಜೆ ಗ್ರಾ.ಪಂ.ಆರೋಗ್ಯ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ., ವಾಣೀನಗರ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ನರಸಿಂಹ ಪೂಜಾರಿ, ಗ್ರಾಮ ಪಂಚಾಯಿತಿ ಕ್ಷೇಮಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಚಂದ್ರಾವತಿ ಎಂ., ಬ್ಲಾಕ್ ಪಂಚಾಯಿತಿ ಸದಸ್ಯೆ ಸವಿತಾ ಬಾಳಿಕೆ ಉಪಸ್ಥಿತರಿದ್ದು ಮಾತನಾಡಿದರು.
ವಿದ್ಯಾರ್ಥಿಗಳು ಶಿಬಿರಾನುಭವಗಳನ್ನು ತಿಳಿಸಿದರು.ಶಿಬಿರಾರ್ಥಿಗಳಾದ ಮನೋಜ್ ಹಾಗೂ ಕಾವ್ಯ ಅತ್ಯುತ್ತಮ ಶಿಬಿರಾರ್ಥಿಗಳಿಗಿರುವ ಪ್ರಶಸ್ತಿ ಗಳಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.ಎನ್ನೆಸ್ಸೆಸ್ ಕಾರ್ಯದರ್ಶಿ ಸುಧೀಶ್ ಸ್ವಾಗತಿಸಿ, ಯೋಜನಾಧಿಕಾರಿ ಸುರೇಶ್ ಕೆ.ಎಂ.ವಂದಿಸಿದರು. ಎನ್ನೆಸ್ಸೆಸ್ ಕಾರ್ಯದರ್ಶಿ ದೀಕ್ಷಾ ನಿರೂಪಿಸಿದರು. ಕಾಲೇಜು ಯೂನಿಯನ್, ಎನ್ನೆಸ್ಸೆಸ್ ಕಾರ್ಯದರ್ಶಿಗಳು, ಸ್ಥಳೀಯರು ಉಪಸ್ಥಿತರಿದ್ದರು.