ಕಾಸರಗೋಡು: ಕನ್ನಡ ಪ್ರಜ್ಞೆ ಕೇವಲ
ಮನುಷ್ಯಕೇಂದ್ರಿತವಲ್ಲ, ಅದು ಜಗತ್ತಿಗೆ ಜ್ಯೋತಿ
ನೀಡುವ ಜೀವಕೇಂದ್ರಿತ ವ್ಯವಸ್ಥೆ ಎಂದು ಕನ್ನಡ
ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ
ಅಭಿಪ್ರಾಯಪಟ್ಟರು.
ಎಡನೀರಿನಲ್ಲಿ ಭಾನುವಾರ ಪ್ರಾಧಿಕಾರ ವತಿಯಿಂದ
ಗಡಿಯಾಚೆ ಸಾಧನೆ ಮಾಡಿದ ಪ್ರತಿಭಾನ್ವಿತ
ಕನ್ನಡ ವಿದ್ಯಾರ್ಥಿಗಳಿಗೆ ಪುರಸ್ಕಾರ-2018-19 ಸಮಾರಂಭ (ಕನ್ನಡ ಮಾಧ್ಯಮ
ಪ್ರಶಸ್ತಿ ಪ್ರದಾನ)ವನ್ನು ಉದ್ಘಾಟಿಸಿ
ಅವರು ಮಾತನಾಡಿದರು.
ಭೂಖಂಡದ ಜೀವರಾಶಿಯ ಬಗೆಗೆ ಅನುಕಂಪಹೊಂದಿ
ಸ್ಥಳೀಯತೆಯಿಂದ ವಿಶ್ವಮಾನವತ್ವದ ವರೆಗೆ ಬೆಳೆದ ಹೆಗ್ಗಳಿಕೆ
ಕನ್ನಡಪ್ರಜ್ಞೆಯದು. ಪಂಪನಿಂದ ತೊಡಗಿ ಕುವೆಂಪುವರೆಗೆ
ಎಲ್ಲ ಕನ್ನಡಸಾಧಕರೂ ಈ ನಿಟ್ಟಿನಲ್ಲಿ
ಬೆಳಕು ಚೆಲ್ಲಿದ್ದಾರೆ. ಕನ್ನಡದ ಜೊತೆಗೆ ಇತರ
ಭಾಷೆಗಳಿಗೂ ಅಸ್ತಿತ್ವ ಉಳಿಕೆ ಪ್ರಜಾಸತ್ತಾತ್ಮಕದ
ಮಾದರಿದೃಷ್ಟಿ ಹೊಂದಿದ ಫಲ ಪ್ರಾಧಿಕಾರಗಳು
ಇತ್ಯಾದಿ ರಚನೆಗೊಂಡಿವೆ. ಆಡಳಿತೆ, ಶಿಕ್ಷಣ, ಉದ್ಯೋಗ
ಸಹಿತ ವಲಯಗಳಲ್ಲಿ ಸ್ವಪ್ರಜ್ಞೆ ಉಳಿಸಿಕೊಳ್ಳುವ
ನಿಟ್ಟಿನಲ್ಲಿ ಈ ವ್ಯವಸ್ಥೆ
ಆರೋಗ್ಯಪೂರ್ಣ ಎಂದು ತಿಳಿಸಿದರು.
ಎಡನೀರು ಮಠಾಧೀಶ ಶ್ರೀ ಕೇಶವಾನಂದ
ಭಾರತಿ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಪುರಸ್ಕಾರ
ಪ್ರದಾನ ಮಾಡಿದರು. ಈ ವೇಳೆ
ಆಶೀರ್ವಾದ ನೀಡಿದ ಅವರು ಕಲಿತಭಾಷೆಗೆ
ಪ್ರೋತ್ಸಾಹ ಸಿಕ್ಕಿದರೆ ಮಾತ್ರ ಜೀವನದಲ್ಲಿ
ಮುಂದುವರಿಕೆ ಸಾಧ್ಯ.ನಮ್ಮ ಭಾಷಾಭಿಮಾನಕ್ಕೆ
ಹಿಂದಿಗಿಂತ ಇಂದು ಆತಂಕ ಅಧಿಕವಾಗಿದೆ.
ಆದರೆ ಭಾಷಾ ಪ್ರೇಮದ ಹೆಸರಿನಲ್ಲಿ
ಇತರ ಭಾಷೆಗಳನ್ನು ದ್ವೇಷಿದರೆ
ಅದು ಅನ್ಯಾಯ ಎಂದು
ನುಡಿದರು.
ಶಾಸಕ ಎನ್.ಎ.ನೆಲ್ಲಿಕುನ್ನು
ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಜಿಲ್ಲಾಧಿಕಾರಿ ಅಬ್ದುಲ್
ಸಮದ್, ಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶನ್,
ಜಿಲ್ಲಾ ಪಂಚಾಯತ್ ಸದಸ್ಯ ಕೆ.ಶ್ರೀಕಾಂತ್, ಕೇರಳ ಪ್ರಾಂತ್ಯ ಕನ್ನಡ
ಮಾಧ್ಯಮ ಅಧ್ಯಾಪಕರ ಸಂಘ ಅಧ್ಯಕ್ಷ
ರವೀಂದ್ರನಾಥ್ ಕೆ.ಆರ್.,
ಕನ್ನಡ ಸಾಹಿತ್ಯ ಪರಿಷತ್ ಕೇರಳ
ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್,
ಕೇರಳ ತುಳು ಅಕಾಡೆಮಿ ಅಧ್ಯಕ್ಷ
ಉಮೇಶ್ ಎಂ.ಸಾಲ್ಯಾನ್,
ಕೇರಳ ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರ ಅಧ್ಯಕ್ಷ
ಜಯರಾಮ ಮಂಜತ್ತಾಯ ಎಡನೀರು, ಎಡನೀರು
ಮಠದ ವ್ಯವಸ್ಥಾಪಕ ಐ.ವಿ.ಭಟ್,
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ
ರತ್ನಾಕರ ಶೆಟ್ಟಿ, ಕರ್ನಾಟಕ ಯಕ್ಷಗಾನ
ಬಯಲಾಟ ಅಕಾಡೆಮಿ ಸದಸ್ಯ ದಾಮೋದರ
ಶೆಟ್ಟಿ, ಅಖಿಲ ಗೋವಾ ಕನ್ನಡ
ಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರು
ರೆಡ್ಡಿ, ಗೋವಾ ಯಲ್ಲಾಲಿಂಗೇಶ್ವರ ಶಿಕ್ಷಣ
ಸಂಸ್ಥೆ ಅಧ್ಯಕ್ಷ ವೈ.ಆರ್.ಬೆಳಗೂರ್, ಗೋವಾ ಕನ್ನಡ
ಸಂಘ ಅಧ್ಯಕ್ಷ ಮಲ್ಲಿಕಾರ್ಜುನ
ವಿ.ಬಾದಾಮಿ, ಕಾರ್ಯದರ್ಶಿ
ಅರುಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಕನ್ನಡ ಮಾಧ್ಯಮದಲ್ಲಿ ಎಸ್ಎಸ್ಎಲ್ಸಿ ಮತ್ತು ಪ್ಲಸ್ಟು ಪರೀಕ್ಷೆಗಳಲ್ಲಿ
ಅತ್ಯುತ್ತಮ ಅಂಕಗಳಿಸಿದ ಕೇರಳ ರಾಜ್ಯದ
95 ಮತ್ತು ಗೋವಾದ 6 ಮಂದಿ ಮಕ್ಕಳಿಗೆ
ನಗದು ಬಹುಮಾನ ಸಹಿತ ಪುರಸ್ಕಾರ
ಈ ವೇಳೆ ಜರುಗಿತು.
ಪ್ರಾಧಿಕಾರ
ಕಾರ್ಯದರ್ಶಿ ಡಾ.ಕೆ.ಮುರಳೀಧರ್ ಸ್ವಾಗತಿಸಿದರು. ಗೋ.ನಾ.ಸ್ವಾಮಿ
ಬೆಂಗಳೂರು ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ
ಕಾರ್ಯಕ್ರಮ ಅಂಗವಾಗಿ ಬೆಂಗಳೂರಿನ ಗೋ.ನಾ.ಸ್ವಾಮಿ
ಬಳಗದಿಂದ ಸುಗಮ ಸಂಗೀತ, ನೃತ್ಯ
ಕಾರ್ಯಕ್ರಮಗಳೂ ಜರುಗಿದುವು.