ಮಂಜೇಶ್ವರ: ವಿಶಾಲ ಭಾಷಾ ಫ್ರೌಢಿಮೆಯ ತುಳು, ಪ್ರದೇಶದಿಂದ ಪ್ರದೇಶಕ್ಕೆ ಭಿನ್ನತೆ-ಅರ್ಥ ವೈತ್ಯಾಸಗಳನ್ನು ಹೊಂದಿದ್ದು, ಇತರ ಭಾಷೆಗಳಿಗೆ ಹೋಲಿಸಿದರೆ ತುಳುವಲ್ಲಿ ಸಾಹಿತ್ಯ ರಚನೆಗಳು ಕ್ಲಿಷ್ಟಕರವಾದುದು. ಭಾಷೆಯ ಬೆಳವಣಿಗೆಗೆ ಸಾಹಿತ್ಯ ಕೃತಿಗಳ ರಚನೆ ಮತ್ತು ಓದು ಮಹತ್ವದ್ದಾಗಿದ್ದು, ಭಾಷೆಯೊಂದಿಗಿನ ಆಂತರಿಕ ಒಡನಾಡ ಅಗತ್ಯವಿದೆ ಎಂದು ಪತ್ರಕರ್ತ, ಸಾಂಸ್ಕøತಿಕ-ಸಾಹಿತ್ತಿಕ ಸಂಘಟಕ ಜಯ ಮಣಿಯಂಪಾರೆ ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಹಿತ್ಯ ಕೂಟ ಕುಂಜತ್ತೂರು ಹಾಗೂ ಮೌನ ಬಳಗದ ಕೂಡುವಿಕೆಯಿಂದ ಕವಯಿತ್ರಿ ಕುಶಾಲಾಕ್ಷಿ. ವಿ.ಕುಲಾಲ್ ಅವರು ಬರೆದಿರುವ ಮೂರನೇ ಕೃತಿ "ಪತ್ತ್ ಪನಿ ತೀರ್ಥೋ" ಕಿರು ಲೇಖನ ಸಂಕಲನವನ್ನು ಮಂಗಳವಾರ ಕಣ್ವತೀರ್ಥದ ಅಮೃತ ನಿಲಯದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ತೌಳವ ಭಾಷೆಯ ಕಲೆ, ಸಾಹಿತ್ಯ ಪ್ರಕಾರಗಳಿಗೆ ಗಡಿನಾಡಿನ ಕೊಡುಗೆ ಅಪಾರವಾದುದು. ಕೃತಿಗಳನ್ನು ಕೊಂಡು ಓದುವ ಹವ್ಯಾಸ, ಬರೆಯಲು ಯುವಜನರಿಗೆ ಒದಗಿಸಬೇಕಾದ ಪ್ರೋತ್ಸಾಹಗಳು ಇನ್ನಷ್ಟು ಬಲಗೊಳ್ಳಬೇಕು ಎಂದು ಅವರು ಈ ಸಂದರ್ಭ ತಿಳಿಸಿದರು. ಕುಶಾಲಾಕ್ಷಿ ವಿ.ಕುಲಾಲ್ ಅವರ ಕಠಿಣ ಪರಿಶ್ರಮ, ಭಾಷಾ ಫ್ರೌಢಿಮೆ ಮತ್ತು ಅಪಾರ ತುಳು ಪ್ರೇಮ ಕೃತಿಯನ್ನು ಹೆಚ್ಚು ಶ್ರೀಮಂತಗೊಳಿಸಿದೆ. ಅವರ ಇಂತಹ ಯತ್ನಗಳು ಸಮಕಾಲೀನ ವಸ್ತು-ವಿಷಯಗಳ ತೀಕ್ಷ್ಣ ನೋಟಗಳೊಂದಿಗೆ ಮುಂದುವರಿಯಲಿ ಎಂದು ಹಾರೈಸಿದರು.
ಸಮಾರಂಭವನ್ನು ಸತೀಶ ಸಾಲ್ಯಾನ್ ನೆಲ್ಲಿಕುಂಜೆ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ತುಳು ಭಾಷೆಯ ವಿವಿಧ ವಿಭಾಗಗಳಲ್ಲಿ ಸಾಕಷ್ಟು ಕೃತಿಗಳು ಮೂಡಿಬರುತ್ತಿದೆ. ಸೃಜನಶೀಲ ಬರಹಗಳು ಓದುಗರನ್ನು ಸೆಳೆಯುವಂತೆ ಇನ್ನಷ್ಟು ಬೆಳಕಿಗೆ ಬರುವ ಪ್ರಯತ್ನಗಳಾಗಬೇಕು. ಸಹೃದಯ ಓದುಗರು, ಸಾಹಿತ್ಯ ಪ್ರೇಮಿಗಳು ಮುಕ್ತವಾದ ಪ್ರೋತ್ಸಾಹ ನೀಡುವಲ್ಲಿ ಉಲ್ಲಸಿತರಾಗಬೇಕು ಎಂದು ತಿಳಿಸಿದರು.
ಶಂಕರ್ ಕುಂಜತ್ತೂರು ಅವರು ಕೃತಿ ವಿಮರ್ಶೆ ನಡೆಸಿದರು. ವಿದ್ಯಾಶ್ರೀ ಉಳ್ಳಾಲ್ ಉಪಸ್ಥಿತರಿದ್ದು ಶುಭಹಾರೈಸಿದರು. ಸಾಹಿತ್ಯ ಕೂಟ ಕುಂಜತ್ತೂರಿನ ಕಾರ್ಯದರ್ಶಿ ಸೋಮನಾಥ ತೂಮಿನಾಡು ಸ್ವಾಗತಿಸಿ, ಕೃತಿಕರ್ತೃ ಕುಶಾಲಾಕ್ಷಿ ವಿ.ಕುಲಾಲ್ ವಂದಿಸಿದರು. ಪತ್ರಕರ್ತ ಪ್ರವೀಣ ಅಮ್ಮೆಂಬಳ ಕಾರ್ಯಕ್ರಮ ನಿರೂಪಿಸಿದರು. ಸಾಹಿತ್ಯ ಕೂಟ ಕುಂಹತ್ತೂರಿನ ಸದಸ್ಯೆಯರ ಪ್ರಾರ್ಥನೆಯೊಂದಿಗೆ ಸಮಾರಂಭ ಆರಂಭಗೊಂಡಿತ್ತು.