ಪೆರ್ಲ:ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಅಗತ್ಯ ಮಾರ್ಗದರ್ಶನ ನೀಡುವ ಮೂಲಕ ಕಲಿಕೆಯ ಜೊತೆ ಪಠ್ಯೇತರ ವಿಷಯಗಳನ್ನು ಅಳವಡಿಸಿದಲ್ಲಿ ಮಕ್ಕಳು ಸದಾ ಚಟುವಟಿಕೆಯಿಂದಿರಲು ಸಾಧ್ಯ. ಇದರಿಂದ ಪ್ರತಿಭೆಗೆ ಪ್ರೋತ್ಸಾಹ ದೊರಕುವುದಲ್ಲದೆ ವ್ಯಕ್ತಿತ್ವ ವಿಕಸನ ಹಾಗೂ ಕಲೆಗಳನ್ನೂ ಪಾಲಸಿ ಪೋಷಿಸಿದಂತಾಗುವುದು ಎಂದು ಪೆರ್ಲ ನಾಲಂದ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ವಿಘ್ನೇಶ್ವರ ವರ್ಮುಡಿ ಹೇಳಿದರು.
ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢ ಶಾಲಾ ವೇದಿಕೆಯಲ್ಲಿ ಮಂಗಳವಾರ ಸಂಜೆ ನಡೆದ ಶಾಲೆಯ 'ನಾದ ಸರಸ್ವತಿ ಸಂಗೀತ' ಕಲಾ ಕೇಂದ್ರದ ತೃತೀಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೀವನವನ್ನು ಯಾವುದೇ ರೀತಿಯಲ್ಲೂ ನಿಭಾಯಿಸಬಹುದು. ಅರ್ಥಪೂರ್ಣ ಜೀವನ ನಡೆಸಲು, ಮಾದರಿ ವ್ಯಕ್ತಿತ್ವ ರೂಪುಗೊಳ್ಳಲು ಸಾಧಿಸಬೇಕು. ಸಾಧನೆಗೆ ಕೊನೆ ಎಂಬುವುದಿಲ್ಲ. ದೊರೆತ ಅವಕಾಶಗಳನ್ನು ಸಮರ್ಥ ರೀತಿಯಲ್ಲಿ ಸದುಪಯೋಗ ಪಡಿಸಿ ಕನಸನ್ನು ನನಸಾಗಿಸುವ ಛಲದೊಂದಿಗೆ ಸಾಧನೆಯತ್ತ ಮುನ್ನುಗ್ಗಬೇಕು. ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವಂತೆ ಸಾಧಕರನ್ನು ಗುರುತಿಸಿ ಗೌರವಿಸುವುದು ಸಮಾಜದ ಕರ್ತವ್ಯವಾಗಿದ್ದು ಮುಂದಿನ ಯುವ ಪೀಳಿಗೆಗೆ ಅದು ದಾರಿ ದೀಪವಾಗುವುದು ಎಂದರು.
ಶಾಲಾ ಮುಖ್ಯೋಪಾಧ್ಯಾಯ ರಾಜೇಂದ್ರ ಬಿ.ಅಧ್ಯಕ್ಷತೆ ವಹಿಸಿದರು.ವ್ಯವಸ್ಥಾಪಕ ಶ್ರೀಕೃಷ್ಣ ವಿಶ್ವಾಮಿತ್ರ ಶುಭ ಹಾರೈಸಿದರು.ಜಿಲ್ಲಾ ಮಟ್ಟದ ತಬಲಾ ವಾದನ ಸ್ಪರ್ಧೆಯಲ್ಲಿ ಉನ್ನತ ಶ್ರೇಣಿ ಪಡೆದ ಪ್ರಜ್ವಲ್ ಅವರಿಗೆ ಅಭಿನಂದನೆ, ಕೇಂದ್ರದ ಸಂಗೀತ ಶಿಕ್ಷಕ ಶಿವಾನಂದ ಉಪ್ಪಳ ಅವರಿಗೆ ಗುರುವಂದನೆ ಕಾರ್ಯಕ್ರಮ ನಡೆಯಿತು.
ಅಗಲ್ಪಾಡಿ ಶಾಲಾ ಶಿಕ್ಷಕ ಪ್ರಸಾದ ಅಂಗ್ರಾಜೆ ಸ್ವಾಗತಿಸಿ, ಗಣೇಶ್ ಎ.ಆರ್ ವಂದಿಸಿದರು. ಶೇಣಿ ಶಾಲಾ ಶಿಕ್ಷಕ ಶ್ರೀಧರ ಕುಕ್ಕಿಲ ನಿರೂಪಿಸಿದರು.
ಪ್ರಸಾದ್ ಸರವು, ರಾಜಾರಾಮ ಬಾಳಿಗಾ, ಅನಿಲ್ ಕುಮಾರ್ ಸರವು ಸಹಕರಿಸಿದರು.
ಮಧ್ಯಾಹ್ನ ಕೇಂದ್ರದ ವಿದ್ಯಾರ್ಥಿಗಳಿಂದ ಕೀ ಬೋರ್ಡ್, ತಬಲಾ, ಹಾರ್ಮೋನಿಯಂ ವಾದನ, ಸಂಜೆ ಕೇಂದ್ರದ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.