ಸಂಪಿಗೆಕಟ್ಟೆ ವನದುರ್ಗಾ ಮಾರಣ ಗುಳಿಗ,ಪರಿವಾರ ದೈವಗಳ ಗುಡಿಕಟ್ಟೆಗಳ ಶಿಲಾನ್ಯಾಸ
0
ಡಿಸೆಂಬರ್ 03, 2018
ಯುವಕರು ನವಮಾಧ್ಯಮಗಳ ಮಾದಕವಸ್ತುಗಳ ದಾಸರಾಗದೆ ಧಾರ್ಮಿಕ ಚಿಂತನೆಯಲ್ಲಿ ತೊಡಗಿಸಿಕೊಳ್ಳಬೇಕು-ಮಾಣಿಲ ಶ್ರೀ
ಕುಂಬಳೆ: ಹಿಂದೂ ಸಮಾಜದ ಯುವಕರು ಸಾಮಾಜಿಕ ಜಾಲತಾಣ ನವಮಾಧ್ಯಮಗಳ ಮತ್ತು ಮದ್ಯ ಮಾದಕವಸ್ತುಗಳ ದಾಸರಾಗದೆ ಧಾರ್ಮಿಕ ಚಿಂತನೆಗಳಲ್ಲಿ ತೊಡಗಿಸಿಕೊಳ್ಳಬೇಕು. ಕ್ಷೇತ್ರಗಳ ನವೀಕರಣ, ಜೀರ್ಣೋದ್ಧಾರ,ಭಜನೆಗಳಂತಹ ಸಂಸ್ಕಾರಯುತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಿಂದೂ ಸಮಾಜ ಸಂಘಟನೆಯ ಮೂಲಕ ಜೀವನದಲ್ಲಿ ಸಾರ್ಥಕತೆಯನ್ನು ಪಡೆಯಬೇಕೆಂದು ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ನುಡಿದರು.
ಕುಂಬಳೆ ಬಳಿಯ ಸಂಪಿಗೆಕಟ್ಟೆ ವನದುರ್ಗಾ ಮಾರಣ ಗುಳಿಗ ಹಾಗೂ ಪರಿವಾರ ದೈವಗಳ ಗುಡಿ ಹಾಗೂ ಕಟ್ಟೆಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಮಾತೆಯರು ತಮ್ಮ ಮಕ್ಕಳಲ್ಲಿ ಎಳವೆಯಲ್ಲೇ ಧಾರ್ಮಿಕ ಶ್ರದ್ಧೆ ಮತ್ತು ದೈವದೇವರ ಮೇಲಿನ ಭಕ್ತಿಯ ವಾತಾವರಣವನ್ನು ಮನೆಯಲ್ಲಿ ಸೃಷ್ಟಿಸಬೇಕೆಂದರು.
ಕರಾವಳಿಯ ಕಣ್ಮಣಿ ಬಿರುದಾಂಕಿತ ಸಾಮಾಜಿಕ ಧಾರ್ಮಿಕ ಮುಂದಾಳು ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು ತಮ್ಮ ಧಾರ್ಮಿಕ ಭಾಷಣದಲ್ಲಿ ಪುಣ್ಯಕ್ಷೇತ್ರಗಳಲ್ಲಿ ಮತ್ತು ಮನೆಮನೆಗಳಲ್ಲಿ ಧರ್ಮ ಜಾಗೃತಿಯಾಗಬೇಕು. ಜಾತಿ ಪ್ರೇಮ ಮತ್ತು ರಾಜಕೀಯ ಸಂಕುಚಿತ ಮನೋಭಾವನೆ ಬಿಟ್ಟು ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರಕ್ಕೆ ಭಕ್ತರು ಒಟ್ಟಾಗಬೇಕೆಂದರು.
ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಉದ್ಯಮಿ ದಾನಿ ಬಿ.ವಸಂತ ಪೈ ಬದಿಯಡ್ಕ ವಹಿಸಿ ಮಾತನಾಡಿ ದೈವದೇವರು ಭಕ್ತರಿಂದ ಏನನ್ನೂ ಅಪೇಕ್ಷಿಸುವುದಿಲ್ಲ.ಆದರೆ ಭಕ್ತರ ಸೇವೆಗೆ ದೇವರು ಪ್ರತಿಫಲ ನೀಡುವರು. ಪುಣ್ಯದ ಸೇವೆಯಿಂದ ದೈಹಿಕ ಆರೋಗ್ಯ ಮತ್ತು ಮನೆಯಲ್ಲಿ ಕಲಹವಿಲ್ಲದ ಜೀವನದ ಭಾಗ್ಯ ದೊರೆಯುವುದೆಂದರು. ಜೀಣೋದ್ಧಾರ ಸಮಿತಿ ಗೌರವಾಧ್ಯಕ್ಷ ಸುಕುಮಾರ ಕೆ,ವೇದಮೂರ್ತಿ ಗಣೇಶ ಭಟ್ ನಾರಾಯಣ ಮಂಗಲ ದಿವ್ಯ ಉಪಸ್ಥಿತರಿದ್ದರು.
ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎಲ್.ಪುಂಡರೀಕಾಕ್ಷ ,ಮಾಜಿ ಉಪಾಧ್ಯಕ್ಷ ಮಂಜುನಾಥ ಆಳ್ವ,ಸದಸ್ಯರಾದ ಕೆ.ರಮೇಶ್ ಭಟ್ ಮತ್ತು ಪುಷ್ಪಲತಾ ಎನ್,ಕುಂಬಳೆ ಎಸ್.ಐ.ಅಶೋಕನ್,ನ್ಯಾಯವಾದಿ ಕೆ.ಸದಾನಂದ ಕಾಮತ್,ಉದ್ಯಮಿ ರಘುನಾಥ ಪೈ ಕುಂಬಳೆ,ಕುಂಬಳೆ ಸೇವಾ ಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷ ಶಂಕರ ಆಳ್ವ,ಜಯಕುಮಾರ್ ಕೆ.ಎಂ.ಕೃಷ್ಣನಗರ,ವಾಸ್ತುಶಿಲ್ಪಿ ಕುಞÂರಾಮ ನೆಲ್ಲಿಕಟ್ಟೆ ,ಕುಂಬಳೆ ಕೃಷಿ ಕ್ಷೇಮ ಸೊಸೈಟಿ ಅಧ್ಯಕ್ಷ ಕೃಷ್ಣ ಕುಂಟಂಗೇರಡ್ಕ,ಶಿಲ್ಪಿ ಚಂದ್ರಹಾಸ ಪೆರ್ಲ,ಮಹಿಳಾ ಸಮಿತಿ ಗೌರವಾಧ್ಯಕ್ಷೆ ಸರೋಜಿನಿ ಟೀಚರ್,ಸಮಿತಿ ಅಧ್ಯಕ್ಷೆ ಲಕ್ಷ್ಮಿಬಾಬು ಪೂಜಾರಿ ಅತಿಥಿಗಳಾಗಿ ಉಪಸ್ಥಿತರಿದ್ದರು.ರಾಮಚಂದ್ರ ಗಟ್ಟಿ ಕೋಟೆಕ್ಕಾರ್ ಸ್ವಾಗತಿಸಿ, ಸುರೇಶ್ ಶಾಂತಪ್ಪಳ್ಳ ವಂದಿಸಿದರು.ಸದಾನಂದ ಆರಿಕ್ಕಾಡಿ ನಿರೂಪಿಸಿದರು.ಸಮಾರಂಭದ ಬಳಿಕ ಅನ್ನಸಂತರ್ಪಣೆ ನಡೆಯಿತು. ಬೆಳಿಗ್ಗೆ ಕುಂಟಂಗೇರಡ್ಕ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಿಂದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರಿಗೆ ವಾದ್ಯಮೇಳ,ಪೂರ್ಣ ಕುಂಭದೊಂದಿಗೆ ಸ್ವಾಗತ ನೀಡಲಾಯಿತು.