ಬದಿಯಡ್ಕ: ನೀರ್ಚಾಲು ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವಕ್ಕೆ ವಿಶೇಷ ಆಕರ್ಷಣೆಯಾಗಿ ಆಗಮಿಸಿದ `ಆನೆ' ಎಲ್ಲರ ಗಮನವನ್ನು ತನ್ನತ್ತ ಸೆಳೆಯಿತು.
ಶನಿವಾರ ಸಂಜೆ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಿಂದ ಹೊರಟು ಉತ್ಸವಾಂಗಣಕ್ಕೆ ಆಗಮಿಸುವ ಪಾಲೆಕೊಂಬು ಮೆರವಣಿಗೆಯಲ್ಲಿ ಗಜ ಸಹಜ ಗಾಂಭೀರ್ಯದಿಂದ ಪಾಲ್ಗೊಂಡಿತು. ಭಾನುವಾರ ಬೆಳಗಿನ ಜಾವದ ತನಕ ತಿರುವಿಳಕ್ಕ್ ಮಹೋತ್ಸವವು ನಡೆದು ಸಂಪನ್ನಗೊಂಡಿತು.
ಶನಿವಾರ ಬೆಳಿಗ್ಗೆ 5ಕ್ಕೆ ಶರಣಂ ವಿಳಿ, ಗೋಪಾಲಕೃಷ್ಣ ಪೈ ಬದಿಯಡ್ಕ ದೀಪಪ್ರಜ್ವಲನೆಯ ನಂತರ ವಿವಿಧ ಭಜನಾ ಸಂಘಗಳಿಂದ ಭಜನೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಅನ್ನದಾನ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಅಪರಾಹ್ನ 2ರಿಂದ ಮಹಿಳಾ ಯಕ್ಷಗಾನ ಪ್ರದರ್ಶನ `ಶಿವಭಕ್ತ ವೀರಮಣಿ'. ರಾತ್ರಿ 7 ಗಂಟೆಗೆ ವಿದುಷಿ ವಿದ್ಯಾಲಕ್ಷ್ಮಿ, ನಾಟ್ಯನಿಲಯ ಕುಂಬಳೆ ಇವರ ಶಿಷ್ಯವೃಂದದವರಿಂದ ನೃತ್ಯಸಂಭ್ರಮ ನಡೆಯಿತು.
2ನೇ ದಿನ ಶುಕ್ರವಾರ ರಾತ್ರಿ ದಿ. ಚಕ್ರೇಶ್ವರ ಇವರ ಸ್ಮರಣಾರ್ಥ ಜಯಂತಿ ಮತ್ತು ಮಕ್ಕಳು ಹಾಗೂ ವೈಷ್ಣವೀ ನಾಟ್ಯಾಲಯದ ವಿದ್ಯಾರ್ಥಿಗಳ ಪೋಷಕರ ಪ್ರಾಯೋಜಕತ್ವದಲ್ಲಿ ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಪುತ್ತೂರು ಇವರ ಶಿಷ್ಯವೃಂದದವರಿಂದ ನಡೆದ `ನೃತ್ಯಾಭಿಷೇಕಂ' ಭರತನಾಟ್ಯ ಮತ್ತು ಶಬರಿಮಲೆ ಸ್ವಾಮಿ ಅಯ್ಯಪ್ಪ ನೃತ್ಯರೂಪಕದ ಮೊದಲ ಪ್ರದರ್ಶನ ಮನಮೋಹಕವಾಗಿ ಮೂಡಿಬಂತು. ಬಳಿಕ ರುದ್ರಫ್ರೆಂಡ್ಸ್ ನೀರ್ಚಾಲು ಪ್ರಾಯೋಜಕತ್ವದಲ್ಲಿ ವಿಠಲ ನಾಯಕ್ ಮತ್ತು ಬಳಗ ಕಲ್ಲಡ್ಕ ಇವರಿಂದ `ಗೀತಾ ಸಾಹಿತ್ಯ ಸಂಭ್ರಮ' ಹಾಗೂ ಸೀತಾರಾಮ ಆಚಾರ್ಯ ನೀರ್ಚಾಲು ಪ್ರಾಯೋಜಕತ್ವದಲ್ಲಿ ಬಪ್ಪನಾಡು ಮೇಳದವರಿಂದ ಶ್ರೀ ಕೊಲ್ಲೂರು ಕ್ಷೇತ್ರಮಹಾತ್ಮೆ-ವಾವರ ಮೋಕ್ಷ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.