ಯುವ ಬರಹಗಾರರು ಬರೆದುದನ್ನು ತಿದ್ದುವ, ಓದುವ ಕ್ರಮ ಅಳವಡಿಸಬೇಕು-ಡಾ.ಬೆಳ್ಳೂರು
0
ಡಿಸೆಂಬರ್ 03, 2018
ಬದಿಯಡ್ಕ: ಕನ್ನಡ ಕಾವ್ಯ ಪರಂಪರೆಯುವ ವಿಶಿಷ್ಟವಾದ ಚಾರಿತ್ರಿಕ ಮಹತ್ವಪಡೆದು ಬೆಳೆದುಬಂದಿದ್ದು, ಪ್ರಸ್ತುತ ಸಾಹಿತ್ಯ ಗೋಷ್ಠಿಗಳು ಹೆಚ್ಚುತ್ತಿದ್ದು, ಅದರೊಳಗಿನ ಮೌಲ್ಯಗಳ ಕುಸಿತ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕಥೆ, ಕವಿತೆಗಳನ್ನು ತಿದ್ದುವ, ಚರ್ಚಿಸುವ ಹೊಸ ಕ್ರಮದತ್ತ ಯುವ ಸಾಹಿತಿಗಳು ಮನಮಾಡಬೇಕು ಎಂದು ಕಾಸರಗೋಡು ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ, ಸಂಶೋಶನಾ ನಿರ್ದೇಶಕ ಡಾ.ರಾಧಾಕೃಷ್ಣ ಬೆಳ್ಳೂರು ಅಭಿಪ್ರಾಯ ವ್ಯಕ್ತಪಡಿಸಿದರು.
ಪುತ್ತೂರಿನ ಪುತ್ತೂರು ಸಾಹಿತ್ಯ ವೇದಿಕೆ, ಮಾನ್ಯದ ಯಕ್ಷಮಿತ್ರರು ಮಾನ್ಯ, ಉಪ್ಪಿನಂಗಡಿಯ ಸತ್ಯಶಾಂತಾ ಪ್ರೊಡಕ್ಷನ್ಸ್ ಹಾಗೂ ಕೆದಿಲಾಯ ಪ್ರತಿಷ್ಠಾನ ಕಾಸರಗೋಡು ಘಟಕದ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನೀರ್ಚಾಲು ಸಮೀಪದ ಪುದುಕೋಳಿ ಶೇಷ ಸಭಾ ಭವನದಲ್ಲಿ ಆಯೋಜಿಸಲಾದ ಸಾಹಿತ್ಯ ಸಂಭ್ರಮ 2018-19 ಸಮಾರಂಭದಲ್ಲಿ ಸಂಜೆ ನಡೆದ ಹಿರಿಯರ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿಂದೆ ಕನ್ನಡ ಸಹಿತ ರಾಷ್ಟ್ರದ ಇತರ ಭಾಷೆಗಳ ಸಾಹಿತ್ಯ ಪ್ರಕಾರಗಳಿಗೆ ಸಂಸ್ಕøತದ ಸಾಕಷ್ಟು ಪ್ರಭಾವಗಳಾಗಿವೆ. ಬಳಿಕದ ಹಂತದಲ್ಲಿ ಆಂಗ್ಲ ಭಾಷೆಯ ಪ್ರಭಾವವನ್ನು ಗುರುತಿಸಬಹುದಾಗಿದ್ದು, ಪ್ರಸ್ತುತ ಐಟಿ ತಂತ್ರಜ್ಞಾನದ ಪ್ರಭಾವ ಎದ್ದು ಕಾಣುತ್ತಿದೆ. ಭಾಷಾ ಶುದ್ದತೆ, ಮಂಡಿಸುವ ಕ್ರಮಗಳು, ವಸ್ತುವಿನ ಅಲಂಕಾರ, ಬೀರುವ ಪ್ರಭಾವಗಳು ದಾರಿತಪ್ಪಿದ್ದು, ಸಹೃದಯ ಓದುವರನ್ನು ಆಕರ್ಷಿಸುವಲ್ಲಿ ಸೋತಿದೆ ಎಂದು ಅವರು ಈ ಸಂದರ್ಭ ಭೀತಿಯ ಕಳಕಳಿ ವ್ಯಕ್ತಪಡಿಸಿದರು. ಮುಖವಾಡಗಳಿಂದ ಹೊರಬಂದು, ವ್ಯಾಪಾರಿ ಮನೋಭಾವದಿಂದ ಕಳಚಲ್ಪಟ್ಟು ನೈಜ ಜೀವನಾನುಭವವನ್ನು ಕಟ್ಟಿಕೊಡುವ ಕಾವ್ಯಗಳು ಎಂದಿಗೂ ಗೆಲ್ಲುತ್ತದೆ ಎಂದು ಅವರು ತಿಳಿಸಿದರು.
ಸಾಹಿತಿಗಳಾಗಬೇಕೆಂಬ ಆಸಕ್ತಿಯಿಂದ ಬರೆಯುವ ಯುವ ತಲೆಮಾರು ಅದನ್ನು ಪ್ರಸ್ತುತಪಡಿಸುವ ಮೊದಲು ತಿದ್ದುವ, ಇತರ ಬರಹಗಳನ್ನು ಓದುವ ತುರ್ತು ಅಗತ್ಯ ಇದೆ ಎಂದು ಅವರು ಕರೆನೀಡಿದರು.
ಕವಿಗಳಾದ ರವೀಂದ್ರ ಕುಕ್ಕಾಜೆ, ಹರೀಶ್ ಪೆರ್ಲ, ಡಾ.ಶ್ರೀಕೃಷ್ಣ ಶಾಸ್ತ್ರಿ, ಪ್ರೊ.ಪಿ.ಎನ್.ಮೂಡಿತ್ತಾಯ, ಉದಯರವಿ ಕೊಂಬ್ರಾಜೆ, ಪ್ರಭಾಕರ ಕಲ್ಲೂರಾಯ ಬನದಗದ್ದೆ, ಪುರುಷೋತ್ತಮ ಆಚಾರ್ಯ, ಡಾ.ಎಸ್.ಎನ್.ಭಟ್ ಪೆರ್ಲ, ಪುರುಷೋತ್ತಮ ಭಟ್ ಕೆ ಹಾಗೂ ಬದ್ರುದ್ದೀನ್ ಕೂಳೂರು ಅವರು ಸ್ವರಚಿತ ಕವಿತೆಗಳನ್ನು ವಾಚಿಸಿದರು. ಈ ಸಂದರ್ಭ ಡಾ.ರಾಧಾಕೃಷ್ಣ ಬೆಳ್ಳೂರು ಅವರು ಪುರುಷೋತ್ತಮ ಭಟ್ ಕೆ ಹಾಗೂ ಅಕ್ಷತಾ ಭಟ್ ದಂಪತಿಗಳು ಬರೆದಿರುವ ಅಕ್ಷರ ಮಿಥುನ ಕೃತಿಯ ಬಗ್ಗೆ ವಿಮರ್ಶೆ ನಡೆಸಿದರು.ಡಾ.ಹರಿಕೃಷ್ಣ ಭರಣ್ಯ, ಪ್ರದೀಪ್ ಕುಮಾರ್ ಕಲ್ಕೂರ, ವಿ.ಬಿ.ಕುಳಮರ್ವ, ಶ್ರೀಕೃಷ್ಣಯ್ಯ ಅನಂತಪುರ, ಡಾ.ಸದಾನಂದ ಪೆರ್ಲ, ಸುಬ್ರಹ್ಮಣ್ಯ ಭಟ್ ಪುದುಕೋಳಿ, ಕೃಷ್ಣಮೂರ್ತಿ ಪುದುಕೋಳಿ, ಗೋಪಾಲಕೃಷ್ಣ ಭಟ್ ಕಟ್ಟತ್ತಿಲ ಮೊದಲಾದವರು ಉಪಸ್ಥಿತರಿದ್ದರು.
ಪ್ರೊ.ಎ.ಶ್ರೀನಾಥ್ ಹಾಗೂ ಡಾ.ಶ್ರೀಕೃಷ್ಣ ಶಾಸ್ತ್ರಿ ಗೋಷ್ಠಿ ನಿರೂಪಿಸಿದರು.