ನವದೆಹಲಿ: ತ್ರಿವಳಿ ತಲಾಖ್ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡ ಬಳಿಕ ಬೆಳಕಿಗೆ ಬಂದಿರುವ ಮೊದಲ ತ್ರಿವಳಿ ತಲಾಖ್ ಪ್ರಕರಣದ ಸಂತ್ರಸ್ತೆಯ ಬೆನ್ನಿಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮನೇಕಾ ಗಾಂಧಿ ನಿಂತಿದ್ದಾರೆ.
ಲೋಕಸಭೆಯಲ್ಲಿ ಮಸೂದೆ ಅಂಗೀಕಾರಗೊಂಡು ತ್ರಿವಳಿ ತಲಾಖ್ ಕಾನೂನು ಅಪರಾಧವೆಂಬು ಪರಿಗಣಿಸಲಾದ ನಂತರ, ಮುಸ್ಲಿಂ ವ್ಯಕ್ತಿಯೋರ್ವ ಪತ್ನಿಗೆ ತ್ರಿವಳಿ ತಲಾಖ್ ನೀಡಿರುವ ಮೊದಲ ಪ್ರಕರಣ ಬಯಲಿಗೆ ಬಂದಿದೆ. ಈ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ವಿವಾಹವಾದ 15 ವರ್ಷಗಳ ನಂತರ ಪತ್ನಿಗೆ ವಾಟ್ಸ್ ಆಪ್ ನಲ್ಲಿ ಟೆಕ್ಸ್ಟ್ ಹಾಗೂ ಆಡಿಯೋ ಮೂಲಕ ತ್ರಿವಳಿ ತಲಾಖ್ ನೀಡಲಾಗಿದೆ. ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮನೇಕಾ ಗಾಂಧಿ, ಈ ಪ್ರಕರಣವನ್ನು ಆದ್ಯತೆಯ ಮೇಲೆ ಪರಿಗಣಿಸಿ ಸಂತ್ರಸ್ತ ಮಹಿಳೆಗೆ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.
ಮಸೂದೆ ಅಂಗೀಕಾರಗೊಂಡ ಮೊದಲ ತ್ರಿವಳಿ ತಲಾಖ್ ಪ್ರಕರಣವನ್ನು ನನ್ನ ಸಚಿವಾಲಯ ಗಂಭೀರವಾಗಿ ಪರಿಗಣಿಸಿದ್ದು ಸಂತ್ರಸ್ತೆಗೆ ನ್ಯಾಯ ಒದಗಿಸಲಾಗುತ್ತದೆ, ಸಂತ್ರಸ್ತೆಯ ವಿವರಗಳನ್ನು ಆಕೆಯ ಸಹೋದರನಿಂದ ಪಡೆದುಕೊಳ್ಳಲು ಸೂಚಿಸಲಾಗಿದೆ, ನಮ್ಮ ಮುಸ್ಲಿಂ ಸಹೋದರಿಯರ ಪರವಾಗಿ ನಾವು ನಿಲ್ಲುತ್ತೇವೆ ಎಂದು ಮನೇಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.