ವಿದ್ಯಾಪೀಠದ ಮಕ್ಕಳಿಂದ ಪ್ರಕೃತಿಯ ಅರಿವು ಪರಪ್ಪ ರಕ್ಷಿತಾರಣ್ಯದಲ್ಲಿ ಕೌಶಲ್ಯಯುಕ್ತ ಚಟುವಟಿಕೆಗಳು
0
ಡಿಸೆಂಬರ್ 04, 2018
ಬದಿಯಡ್ಕ: ತರಗತಿ ಕೋಣೆಗಳಿಂದ ಹೊರಬಂದ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಪುಟಾಣಿಗಳು ದೇಲಂಪಾಡಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿರುವ ಪರಪ್ಪ ರಕ್ಷಿತಾರಣ್ಯದಲ್ಲಿ ಇತ್ತೀಚೆಗೆ ಒಂದು ದಿನದ ಅಧ್ಯಯನ ಪ್ರವಾಸ ನಡೆಸಿದರು.
ಒಂದರಿಂದ ನಾಲ್ಕನೇ ತರಗತಿಯ ತನಕದ ವಿದ್ಯಾರ್ಥಿಗಳು ಅಧ್ಯಾಪಕ ವೃಂದದೊಂದಿಗೆ `ಪ್ರಕೃತಿಯನ್ನು ಅರಿಯುವ' ಹಲವಾರು ಕೌಶಲ್ಯಯುಕ್ತ ಚಟುವಟಿಕೆಗಳನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಯಿತು. ಮರ ಹತ್ತುವುದು, ಮರದಿಂದ ಮರಕ್ಕೆ ಹಗ್ಗದ ಮೂಲಕ ಚಲಿಸುವುದು, ತೆಂಗಿನ ಗರಿಯಿಂದ ವಿವಿಧ ಆಟಿಕೆಗಳನ್ನು ತಯಾರಿಸುವುದು, ವಿವಿಧ ರೀತಿಯ ಔಷಧೀಯ ಸಸ್ಯಗಳ ಪರಿಚಯ ಇವೇ ಮೊದಲಾದ ಆಟಗಳೊಂದಿಗೆ ಪ್ರವಾಸದ ಸವಿಯನ್ನು ಮಕ್ಕಳಿಗೆ ಉಣಬಡಿಸಲಾಯಿತು. ಸಮೀಪದ ಪಯಸ್ವಿನಿ ಹೊಳೆಯ ತೂಗುಸೇತುವೆಯಲ್ಲಿ ನಡೆದಾಡಿ ಮಕ್ಕಳು ಆತ್ಮಧೈರ್ಯವನ್ನು ತುಂಬಿಕೊಂಡರು. ಕಾಸರಗೋಡು ಜಿಲ್ಲಾ ಅರಣ್ಯ ಅಧಿಕಾರಿಯವರ ಅನುಮತಿ ಪತ್ರದೊಂದಿಗೆ ಅರಣ್ಯ ಉಸ್ತುವಾರಿ ತಂಡದವರು ಪೂರ್ಣ ಸಹಕರಿಸಿದರು. ಪ್ರವಾಸಕ್ಕೆ ಸಹಕರಿಸಿದ ಜಿಲ್ಲಾ ರಕ್ಷಿತಾರಣ್ಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಅಭಿನಂದನೆಯನ್ನು ಸಲ್ಲಿಸಿದರು. ಅಧ್ಯಾಪಕ ವೃಂದದ ಮಹೇಶ್ ಆಚಾರ್ಯ ಕೆ., ಶೋಭಾ ಕೆ., ರಾಜೇಶ್ವರಿ ಎಂ.ವಿ., ದೀಪಿಕಾ, ಸುಪ್ರೀತಾ ರೈ ನೇತೃತ್ವವನ್ನು ವಹಿಸಿದ್ದರು.