ಕೊಂಡೆವೂರಿನ ಸೋಮಯಾಗಕ್ಕೆ ವಿವಿಧ ಸಮುದಾಯಗಳ ವೃತ್ತಿಧರ್ಮ ಸೇವೆ
0
ಡಿಸೆಂಬರ್ 05, 2018
ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ 2019ರ ಫೆಬ್ರವರಿ 18 ರಿಂದ 24ರ ವರೆಗೆ ನಡೆಯಲಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ಅತಿವಿಶಿಷ್ಟವೂ, ಅತ್ಯಪೂರ್ವವೂ ಆದ ಈ ಯಾಗಕ್ಕೆ ಉಪಯೋಗವಾಗುವ ಅನೇಕ ವಸ್ತುಗಳನ್ನು ಹಿಂದೂ ಸಮಾಜದ ವಿವಿಧ ಕುಲಬಾಂಧವರು ತಮ್ಮ ಕುಲವೃತ್ತಿಯ ಮೂಲಕ ತಯಾರಿಸಿ ಸಮರ್ಪಣೆ ಮಾಡುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಿ,ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನ ಪಡೆದು ಕಾರ್ಯಪ್ರವೃತ್ತರಾಗಿದ್ದಾರೆ.
ನ. 31 ರಂದು ಮಂಜೇಶ್ವರ ತಾಲೂಕಿನ ವಿವಿಧ ಧಾರ್ಮಿಕ ಕ್ಷೇತ್ರಗಳ ತೀಯಾ ಸಮಾಜದ ಪ್ರಮುಖರು ಸಭೆ ಸೇರಿ ತಮ್ಮ ಕುಲದ ಸಮರ್ಪಣೆಯಾಗಿ "ಸೀಯಾಳ"ವನ್ನು ಯಾಗಕ್ಕೆ ಸಮರ್ಪಿಸುವ ಬಗ್ಗೆ ಸಮಾಲೋಚಿಸಿದರು. ಡಿ.2 ಬೆಳಿಗ್ಗೆ "ಜೋಗಿ ಸಮಾಜ"ದ ಪ್ರಮುಖರು ತಮ್ಮ ಕುಲವೃತ್ತಿ "ಸಿಕ್ಕ/ನೆಲುವು"(ಬಲ)ವನ್ನು ತಯಾರಿಸಿ ಯಾಗಕ್ಕೆ ಸಮರ್ಪಣೆ ಮಾಡುವ ಬಗ್ಗೆ ಚಿಂತನೆ ನಡೆಸಿದರು. ಅದೇ ದಿನ ಅಪರಾಹ್ನ ಮಂಜೇಶ್ವರ ವ್ಯಾಪ್ತಿಯ "ಮಡಿವಾಳ ಸಮಾಜ"ದ ಪ್ರಮುಖರು ಯಾಗ ಸಂದರ್ಭದಲ್ಲಿ ಬಳಸುವ "ದೀವಟಿಗೆ"ಗಳನ್ನು ತಮ್ಮ ಕುಲದ ಬಾಂಧವರು ಒಟ್ಟು ಸೇರಿ ತಯಾರಿಸಿ ಸಮರ್ಪಣೆ ಮಾಡುವ ಕುರಿತು ಸಮಾಲೋಚಿಸಿದರು. ಸಂಜೆ "ಕುಲಾಲ ಸಮುದಾಯ"ದ ಪ್ರಮುಖರು ಸಭೆ ನಡೆಸಿ, ಸೋಮಯಾಗದ ಭಾಗವಾದ "ಅರುಣ ಕೇತುಕ ಚಯನ"ಕ್ಕೆ ಅಗತ್ಯವಿರುವ "ಮಣ್ಣಿನ ಪರಿಕರ"ಗಳನ್ನು ತಮ್ಮ ಕುಲವೃತ್ತಿಯಂತೆ ತಯಾರಿಸಿ ಸಮರ್ಪಿಸುವುದರ ಮೂಲಕ ಸೇವೆ ಸಲ್ಲಿಸುವ ಬಗ್ಗೆ ಯೋಜಿಸಿದರು. ಸಭೆಗಳು ಆಶ್ರಮದಲ್ಲಿ ಪರಮಪೂಜ್ಯರ ಉಪಸ್ಥಿತಿಯಲ್ಲಿ ನಡೆದವು.