ನವದೆಹಲಿ: ಹೊಸ ವರ್ಷಾಚರಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಅಂಡಮಾನ್- ನಿಕೋಬಾರ್ ನ ಪ್ರಮುಖ ಮೂರು ದ್ವೀಪಗಳಾದ ರೋಸ್, ನೈಲ್ ಹಾಗೂ ಹೈವ್ಲೋಕ್ ದ್ವೀಪಗಳಿಗೆ ಭಾನುವಾರ ಮರು ನಾಮಕರಣ ಮಾಡಿದ್ದಾರೆ.
ನೇತಾಜಿ ಸುಭಾಷ್‍ಚಂದ್ರ ಬೋಸ್ ಅವರ 75ನೇ ಪೋರ್ಟ್‍ಬ್ಲೇರ್ ಭೇಟಿಯ 75ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಭಾಗಿಯಾಗಲು ಇಂದು ದ್ವೀಪ ಸಮೂಹಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಈ ಮೂರು ದ್ವೀಪಗಳಿಗೆ ಅಧಿಕೃತವಾಗಿ ಮರುನಾಮಕರಣ ಮಾಡಿದರು.
ರೋಸ್‍ಲ್ಯಾಂಡ್‍ಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪ, ನೇಲ್ ಐಸ್‍ಲ್ಯಾಂಡ್‍ಗೆ ಶಾಹೀದ್ ದ್ವೀಪ ಮತ್ತು ಹೈವ್ಲೋಕ್ ದ್ವೀಪಕ್ಕೆ ಸ್ವರಾಜ್ ದ್ವೀಪವೆಂದು ನಾಮಕರಣ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇದೇ ವೇಳೆ ಪ್ರಧಾನಿ ಮೋದಿ, ಈ ವಿಶೇಷ ದಿನದ ಸ್ಮರಣಾರ್ಥ ಅಂಚೆಚೀಟಿ, 75 ನಾಣ್ಯಗಳನ್ನೂ ಬಿಡುಗಡೆ ಮಾಡಿದರು. ಅಲ್ಲದೆ ನೇತಾಜಿ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಪ್ರಧಾನಿ ಘೋಷಿಸಿದರು.
ಇದಕ್ಕೂ ಮೊದಲು ಮರೀನಾ ಪಾರ್ಕ್‍ಗೆ ತೆರಳಿದ ಮೋದಿ, 150 ಅಡಿ ಎತ್ತರದಲ್ಲಿ ಭಾರತದ ಧ್ವಜ ಹಾರಿಸಿದರು. ಜೊತೆಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.