ವಿಜಯಪುರ: ಭಾರತ್ ಮಾತಾ ಕಿ ಜೈ, ವಂದೇ ಮಾತರಂ - ಇಂತಹಾ ಘೋಷಣೆ ಕೂಗಿದ ಮಾತ್ರಕ್ಕೆ ಭಾರತ ವಿಶ್ವಗುರುವಾಗಲು ಸಾಧ್ಯವಿಲ್ಲ ಎಂದು ಯೋಗಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ.
ವಿಜಯಪುರಕ್ಕೆ ನಿನ್ನೆ ಆಗಮಿಸಿದ್ದ ಬಾಬಾ ರಾಮ್ ದೇವ್ ಮಾದ್ಯಮ ಪ್ರತಿನಿಧಿಗಳೊಡನೆ ಮಾತನಾಡಿ "ಯಾವ ರಾಜಕೀಯ ಪಕ್ಷಗ್ಳೂ ಜಾತಿ ಮುಕ್ತ ಭಾರತದ ಸಂಕಲ್ಪ ಮಾಡುತ್ತಿಲ್ಲ.ಕೇವಲ ಜಯಘೋಷ ಕೂಗಿದರೆ ಭಾರತ ವಿಶ್ವಗುರು ಆಗಲ್ಲ, ಅದಕ್ಕೆ ಕರ್ಮಯೋಗ ಬೇಕು. ಜಾತಿ, ಧರ್ಮದ ಹೆಸರಲ್ಲಿ ರಾಜಕೀಯ ಪಕ್ಷಗಳು ವಿಷಬೀಜ ಬಿತ್ತುತ್ತಿದ್ದು ಯಾವ ಕಾರಣಕ್ಕೂ ವ್ಯಸನಮುಕ್ತ, ದಿವ್ಯಭಾರತ ಅವುಗಳ ಆದ್ಯತೆ ಆಗಬೇಕಿದೆ ಎಂದಿದ್ದಾರೆ.
ರಾಮನ ಆದರ್ಶ ಪಾಲನೆ ಮುಖ್ಯ:
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಬಾಬಾ ಶ್ರೀರಾಮ, ಹನುಮಂತ, ಪತಂಜಲಿ ಹೀಗೆ ಎಲ್ಲರನ್ನೂ ಒಂದೊಂದು ಜಾತಿಗೆ ಸೀಮಿತಗೊಳಿಸಲಾಗುತ್ತಿದೆ.ಯಾವ ಕಾರಣಕ್ಕೂ ಹೀಗಾಗಬಾರದು. ಶ್ರೀರಾಮನ ಮೂರ್ತಿ, ಮಂದಿರ ನಿರ್ಮಾಣಕ್ಕಿಂತಲೂ ರಾಮನ ಆದರ್ಶ ಪಾಲಿಸುವುದು ಅಗತ್ಯ. ಎಂದಿದ್ದಾರೆ.
ಕರ್ನಾಟಕದಲ್ಲಿ ಭಗವಾನ್ "ರಾಮಮಂದಿರ ಏಕೆ ಬೇಡ" ಎಂಬ ವಿವಾದಾತ್ಮಕ ಪುಸ್ತಕ ಬರೆದು ಶ್ರೀರಾಮನನ್ನು ಅವಮಾನಿಸಿದ ಬಗ್ಗೆ ಮಾತನಾಡಿದ್ದ ರಾಮ್ ದೇವ್ "ನಾವು ನಮ್ಮ ಪೂರ್ವಜರನ್ನು ಹೀಗೆ ಅವಮಾನಿಸುವುದು ಆದ್ಯಾತ್ಮಿಕ ಹಾಗೂ ಸಾಮಾಜಿಕ ಮಹಾಪರಾಧವಾಗಲಿದೆ ಎಂದರು.
ಹಿಂದೂಗಳು, ಮುಸಲ್ಮಾನರು ಒಟ್ಟಾಗಿ ಈ ರಾಷ್ಟ್ರ ನಿರ್ಮಿಸಿದ್ದಾರೆ. ಮಂದಿರ, ಮಸೀದಿಗಳ ಹೆಸರಲ್ಲಿ ಯಾರೂ ತಮ್ಮ ಹೃದಯ ಕಲ್ಲಾಗಿಸಿಕೊಳ್ಳುವುದು ಬೇಡ. ಯಾರೇನೇ ಅಂದರೂ ನಮ್ಮ ಪೂರ್ವಜರು ಒಬ್ಬರೇ.ಯಾವುದೇ ರಾಜಕೀಯ ಪ್ರೇರಣೆಗೆ ಕಿವಿಗೊಡದೆ ದೇಶದ ಏಕತೆ, ಅಖಂಡತೆಯನ್ನು ಕಾಪಾಡಿಕೊಳ್ಳುವತ್ತ ಗಮನಿಸಿ ಎಂದು ಬಾಬಾ ಕರೆ ನೀಡಿದ್ದಾರೆ.
ಜಗತ್ತಿನ ದೊಡ್ಡ ವಿಶ್ವವಿದ್ಯಾನಿಲಯ:
ನವದೆಹಲಿಯಲ್ಲಿ ಜಗತ್ತಿನಲ್ಲಿ ಅತಿ ದೊಡ್ಡ ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡುವ ಗುರಿ ಹೊಂದಲಾಗಿದೆ.ನಳಂದಾ, ತಕ್ಷಶಿಳಾ ಮಾದರಿಯಲ್ಲಿ ವಿವಿ ಸ್ಥಾಪನೆ ಮಾಡಿ ಭಾರತದಲ್ಲಿ ಶೈಕ್ಷ್ಷಣಿಕ ಗತವೈಭವವನ್ನು ಮರಳಿ ತರುವುದಕ್ಕೆ ಸಂಕಲ್ಪಿಸಲಾಗಿದೆ ಎಂದು ಬಾಬಾ ಹೇಳಿದ್ದಾರೆ.