ಸಂಪೂರ್ಣ ಜಲ ಸುರಕ್ಷ ಜಿಲ್ಲೆಯಾಗಿ ಮಾರ್ಪಡಿಕೆಗೆ ಸಿದ್ಧತೆ
0
ಡಿಸೆಂಬರ್ 04, 2018
ಕಾಸರಗೋಡು: ಕಾಸರಗೋಡನ್ನು ಸಂಪೂರ್ಣ ಜಲ ಸುರಕ್ಷಾ ಜಿಲ್ಲೆಯಾಗಿ ಮಾರ್ಪಡಿಸುವ ಯತ್ನಕ್ಕೆ ಚಾಲನೆ ಲಭಿಸಿದೆ.
ಹಸುರುಕೇರಳ(ಹರಿತ ಕೇರಳಂ) ಮಿಷನ್ನ ದ್ವಿತೀಯ ವಾರ್ಷಿಕೋತ್ಸವ ಅಂಗವಾಗಿ ಜಲಸಂರಕ್ಷಣೆ ಚಟುವಟಿಕೆಗಳಿಗೆ ಆದ್ಯತೆ ನೀಡುವ ಸರಕಾರದ ತೀರ್ಮಾನ ಅಂಗವಾಗಿ ಜಿಲ್ಲೆಯಲ್ಲಿ ವಿವಿಧ ಯೋಜನೆಗಳನ್ನು ಸಿದ್ಧಪಡಿಸಲಾಗಿದೆ. ಜಿಲ್ಲೆಯಲ್ಲಿ 12 ಜೀವನದಿಗಳಿದ್ದೂ, ಬೇಸಗೆಯಲ್ಲಿ ತೀವ್ರತರ ನೀರಿಗೆ ಬರ ಅನುಭವಿಸಬೇಕಾದ ದುಸ್ಥಿತಿಯಿದೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ " ಪರಿಹಾರಕ್ಕಾಗಿ ಜಲದ ಸದುಪಯೋಗದೊಂದಿಗೆ ಬದುಕು" ಎಂಬ ಘೋಷಣೆ ಸಹಿತ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಸಂಪೂರ್ಣ ಜಲಸುರಕ್ಷಾ ಜಿಲ್ಲೆಯಾಗಿ ಕಾಸರಗೋಡನ್ನು ಮಾರ್ಪಡಿಸುವ ಕ್ರಿಯಾ ಯೋಜನೆ ಆರಂಭಗೊಳ್ಳಲಿದೆ. ಯೋಜನೆಯ ಆರಂಭದ ಹಂತವಾಗಿ ಡಿ.8ರಿಂದ 15 ವರೆಗೆ ಪ್ರತಿ ಸ್ಥಳೀಯಾಡಳಿತೆ ಸಂಸ್ಥೆಗಳಲ್ಲಿ ಜನಪರ ಒಕ್ಕೂಟದೊಂದಿಗೆ ಕನಿಷ್ಠ ಒಂದು ಜಲಾಶಯದ ಸಂರಕ್ಷಣೆಯ ಚಟುವಟಿಕೆ ನಡೆಯಲಿದೆ. ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಸಹಿತ ಸಮಾಜದ ಬೇರೆ ಬೇರೆ ಸ್ತರಗಳ ಕಾರ್ಮಿಕರ ಸಹಭಾಗಿತ್ವ ಪಡೆದುಕೊಂಡು ಶಿಬಿರ ಇತ್ಯಾದಿ ನಡೆಯಲಿದೆ.
ಎಂಡೋಸಲ್ಫಾನ್ ಸಮಸ್ಯೆ ಬಾಧಿತ ಪ್ರದೇಶಗಳಲ್ಲಿ ಜಲಾಶಯಗಳನ್ನು ಪುನಶ್ಚೇತನಗೊಳಿಸಿ, ಜಿಲ್ಲೆಯ ಪರಂಪರಾಗತ ಜಲಾಶಯಗಳಾದ ಹಳ್ಳ, ಸುರಂಗ ಇತ್ಯಾದಿಗಳನ್ನು ಸಂರಕ್ಷಿಸಿ ಹೊಸತಲೆಮಾರಿಗೆ ಧಾರಾಳ ಶುದ್ಧನೀರು ಲಭ್ಯವಾಗುವಂತೆ ಮಾಡುವುದು ಯೋಜನೆಯ ಪ್ರಧಾನ ಉದ್ದೇಶ. ಆಯಾ ಸ್ಥಳೀಯಾಡಳಿತೆ ಸಂಸ್ಥೆಯೂ ಜಲಸಂರಕ್ಷಣೆ ಚಟುವಟಿಕೆಗಾಗಿ ಸಮಗ್ರ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ, ಹಂತಹಂತವಾಗಿ ಜಾರಿಗೊಳಿಸಲಿವೆ.
ಹರಿತ ಕೇರಳ ಯೋಜನೆಯ ದ್ವಿತೀಯ ವಾರ್ಷಿಕೋತ್ಸವ ದಿನವಾಗಿರುವ ಡಿ.8ರಿಂದ ಕ್ರಿಯಾಯೋಜನೆಗಳನ್ನನು ಸಿದ್ಧಗೊಳಿಸಿ ಜಾರಿಗೊಳಿಸಲಾಗುವುದು ಎಂದು ಖಚಿತಪಡಿಸುವ ಹೊಣೆ ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷರಿಗೆ ಮತ್ತು ಕಾರ್ಯದರ್ಶಿಗಳಿಗೆ ನೀಡಲಾಗಿದ್ದು, ಹರಿತ ಕೇರಳ ಮಿಷನ್ ಕಚೇರಿಗೆ ವರದಿ ಸಲ್ಲಿಸಲು ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.