ಡಿವೈಎಫ್‍ಐ ವತಿಯಿಂದ ಸೆಕ್ಯೂಲರ್ ಕ್ರಿಕೆಟ್
0
ಡಿಸೆಂಬರ್ 03, 2018
ಕ್ರೀಡೆಗೆ ಧರ್ಮವಿಲ್ಲ, ಕೋಮುವಾದ ಪಸರುವ ಕ್ರೀಡೆಗೆ ಅಂಗಣವಿಲ್ಲ-ಎ.ಎ. ರಹೀಂ
ಉಪ್ಪಳ: ಕೋಮುವಾದಿ ಧೋರಣೆಯ ಮೂಲಕ ದೇಶದ ಪ್ರಜಾಪ್ರಭುತ್ವದ ಅಂತಸತ್ವ ಸಹಿತ ಜಾತ್ಯಾತೀತ ಗುಣಗಳನ್ನು ಬುಡಮೇಲುಗೊಳಿಸುವ ಕೃತ್ಯ ಸಂಘ ಪರಿವಾರದ ಮೂಲಕ ನಡೆಯುತ್ತಿದೆ ಎಂದು ಡಿವೈಎಫ್‍ಐ ಕೇರಳ ರಾಜ್ಯ ಕಾರ್ಯದರ್ಶಿ ಎ.ಎ. ರಹೀಂ ಹೇಳಿದರು.
ಬಾಯಾರುಪದವಿನಲ್ಲಿ ಡಿವೈಎಫ್‍ಐ ಭಾನುವಾರ ಹಮ್ಮಿಕೊಂಡ ಸೆಕ್ಯೂಲರ್ ಕ್ರಿಕೆಟ್ ಕ್ರೀಡಾಕೂಟದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾತ್ಯಾತೀತತೆ, ಧರ್ಮ ನಿರಪೇಕ್ಷತೆ, ಭಾತೃತ್ವದ ಗುಣಗಳು ದೇಶದ ಸಂವಿಧಾನದ ಅತ್ಯಮೂಲ್ಯ ಸಂದೇಶಗಳಾಗಿವೆ. ಇಂತಹ ಶ್ರೇಷ್ಠ ಮಾರ್ಗದರ್ಶಿ ಗುಣಗಳನ್ನು ಸಮಾಜದಿಂದ ಕಿತ್ತೊಗೆಯುವ ಕೆಲಸವನ್ನು ಸಂಘ ಪರಿವಾರದ ಸಂಘಟನೆಗಳು ಮಾಡುತ್ತಿವೆ ಎಂದು ರಹೀಂ ಆರೋಪಿಸಿದರು. ದೇಶದ ಪ್ರಗತಿಪರ ಅಭಿವೃದ್ಧಿಯ ಲಕ್ಷ್ಯ ಹೊಂದಿರುವ ಯಾವುದೇ ಸಂಘಟನೆಗಳು ಒಡೆದ ಆಳುವ ನೀತಿಯನ್ನು ಅನುಸರಿಸಲಾರರು ಎಂದರು. ಮತೀಯವಾದ ಸಹಿತ ಕೋಮುವಾದವೆಂಬ ವಿಷ ಬೀಜವನ್ನು ಸಮಾಜದಲ್ಲಿ ಬಿತ್ತುವ ಮೂಲಕ ಯುವ ಸಮೂಹವನ್ನು ತನ್ನ ಕಪಿಮುಷ್ಠಿಯಲ್ಲಿಡಲು ಪ್ರಯತ್ನಿಸುತ್ತಿರುವ ಸಂಘಟನೆಗಳು ಬಹುಕಾಲ ಬಾಳದು ಎಂದರು. ಕ್ರೀಡೆಗೆ ಧರ್ಮವಿಲ್ಲ, ಕೋಮುವಾದವನ್ನು ಪಸರುವ ಕ್ರೀಡೆಗೆ ಅಂಗಣವಿಲ್ಲ ಎಂದರು.
ಡಿಫಿ ಬ್ಲಾಕ್ ಅಧ್ಯಕ್ಷ ಮಹೇಶ್ ಮೀಂಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಿಫಿ ಜಿಲ್ಲಾ ಕಾರ್ಯದರ್ಶಿ ಸಿ.ಜೆ.ಸಜಿತ್, ಅಧ್ಯಕ್ಷ ಪಿ.ಕೆ.ನಿಶಾಂತ್, ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಸಾದಿಕ್ ಚೆರುಗೋಳಿ, ಕೆ.ಆರ್.ಜಯಾನಂದ, ಏರಿಯಾ ಕಾರ್ಯದರ್ಶಿ ಅಬ್ದುಲ್ ರಜಾಕ್ ಚಿಪ್ಪಾರು, ಭಾತಿ ಶೆಟ್ಟಿ ಮೊದಲಾದವರು ಮಾತನಾಡಿದರು. ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ರೆಡ್ ಲೈನ್ ಬಳ್ಳೂರು, ದ್ವಿತೀಯ ಸ್ಥಾನ ಗಳಿಸಿದ ಬಿಸಿ ಟೈಗರ್ಸ್ ಬಾಯಾರ್ ತಂಡಗಳಿಗೆ ರಹೀಂ ಪ್ರಶಸ್ತಿ ವಿತರಿಸಿದರು. ಹಾರಿಸ್ ಪೈವಳಿಕೆ ಸ್ವಾಗತಿಸಿ, ವಂದಿಸಿದರು.