ವಿಶ್ವ ಮಣ್ಣು ಸಂರಕ್ಷಣೆ ದಿನಾಚರಣೆ ಜಿಲ್ಲಾ ಮಟ್ಟದ ಸಮಾರಂಭ ಜಲಸಮೃದ್ಧ ಜಿಲ್ಲೆಯಾಗಿಸುವ ಯೋಜನೆ ಶೀಘ್ರ ಜಾರಿ: ಜಿಲ್ಲಾಧಿಕಾರಿ
0
ಡಿಸೆಂಬರ್ 05, 2018
ಕಾಸರಗೋಡು: ಜಿಲ್ಲೆಯನ್ನು ಜಲಸಮೃದವಾಗಿಸುವ ಯೋಜನೆ ಶೀಘ್ರದಲ್ಲೇ ಜಾರಿಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಭಿಪ್ರಾಯಪಟ್ಟರು.
ಮಣ್ಣು ಸಂರಕ್ಷಣೆ, ಇಲಾಖೆ, ಕೃಷಿ ಅಭಿವೃದ್ಧಿ, ಕೃಷಿಕ ಕಲ್ಯಾಣ ಇಲಾಖೆಗಳ ಜಂಟಿ ವತಿಯಿಂದ ಬುಧವಾರ ಮಡಿಕೈ ಗ್ರಾಮಪಂಚಾಯತ್ ಕಚೇರಿ ಆವರಣದಲ್ಲಿ ವಿಶ್ವ ಮಣ್ಣು ಸಂರಕ್ಷಣೆ ದಿನಾಚರಣೆ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ಪ್ಯಾಕೇಜ್ ಯೋಜನೆಯಲ್ಲೇ ಈ ವಿಚಾರವನ್ನೂ ಅಳವಡಿಸಿ ಅನುಷ್ಠಾನಗೊಳಿಸಲಾಗುವುದು. ಹರಿತಕೇರಳ ಮಿಷನ್ ನೊಂದಿಗೆ ಕೈಜೋಡಿಸಿ ಪ್ರತಿ ಪಂಚಾಯತ್ ನಲ್ಲೂ ಜಲಾಶಯ ಯೋಜನೆಗಳಿಗೆ ಚಾಲನೆ ನಡೆಯಲಿದೆ. ಇದರ ಮೊದಲ ಹಂತದ ಚಟುವಟಿಕೆ ಚೆಂಗಳ ಗ್ರಾಮಪಂಚಾಯತ್ನಲ್ಲಿ ಈಗಾಗಲೇ ಆರಂಭಿಸಲಾಗಿದೆ ಎಂದರು.
ಜಿಲ್ಲೆಯ ಮಂಜೇಶ್ವರ, ಕಾರಡ್ಕ, ಕಾಸರಗೋಡು ಬ್ಲೋಕ್ಗಳ 15 ಸಾವಿರ ಹೆಕ್ಟೇರ್ ಜಾಗದಲ್ಲಿ ಕರ್ಗಲ್ಲಿನ ಕಾರಣ ಕೃಷಿ ನಡೆಸುವುದು ಕಷ್ಟಸಾಧ್ಯವಾಗಿದೆ. ಇದಕ್ಕೆ ಪರ್ಯಾಯವಾಗಿ ಬಿದಿರು ಕೃಷಿ ನಡೆಸುವುದು ಸಮಂಜಸವಾಗಿದ್ದು, ಮುಂದಿನ ಜೂನ್ 5ರಂದು 3 ಲಕ್ಷ ಬಿದಿರು ಸಸಿಗಳನ್ನು ನೆಡುವ ಯೋಜನೆ ಜಾರಿಗೊಳಿಸಲಾಗುವುದು. ಬಿದಿರು ಯೋಜನೆಗೆ ಜಿಲ್ಲೆ ರಾಜಧಾನಿಯಾಗಲಿದೆ ಎಂದು ತಿಳಿಸಿದರು.
ಮಣ್ಣು ಮತ್ತು ಜಲವನ್ನು ಸಂರಕ್ಷಿಸಬೇಕಾದ ತೀವ್ರ ಅಗತ್ಯದ ಇಂದಿನ ದಿನದಲ್ಲಿ ಅತ್ಯಧಿಕ ನದಿಗಳಿರುವ ಕಾಸರಗೋಡು ಜಿಲ್ಲೆಯ ಬಹುತೇಕ ಪ್ರದೇಶಗಳು ಬೇಸಗೆಯಲ್ಲಿ ಕುಡಿಯುವ ನೀರಿಗೆ ತತ್ವಾರ ಅನುಭವಿಸುವ ದುಸ್ಥಿತಿಯಿದೆ. ಜಲದುರಂತದ ವೇಳೆ ಅಲ್ಲಲ್ಲಿ ಸಂಗ್ರಹವಾದ ಮಣ್ಣನ್ನು ಬೇರೆ ಬೇರೆ ಪುನರ್ ನಿರ್ಮಾಣ ಯೋಜನೆಗೆ ಬಳಸಲಾಗುತ್ತಿದ್ದು, ಲೈಫ್ ಯೋಜನೆಗೂ ಬಳಕೆ ಮಾಡಲಾಗುವುದು ಎಂದು ನುಡಿದರು.
ಮಡಿಕೈ ಗ್ರಾಮಪಂಚಾಯತ್ ಅಧ್ಯಕ್ಷ ಸಿ.ಪ್ರಭಾಕರನ್ ಅಧ್ಯಕ್ಷತೆ ವಹಿಸಿದ್ದರು. "ಮಣ್ಣಿನ ಆರೋಗ್ಯ ಪಾಲನೆ","ಮಣ್ಣು-ಜಲ ಸಂರಕ್ಷಣೆ" ಇತ್ಯಾದಿ ವಿಷಯಗಳಲ್ಲಿ ಕೃಷಿ ಸಹಾಯಕ ನಿರ್ದೇಶಕಿ ಆರ್.ವೀಣಾರಾಣಿ, ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಕೆ.ಪಿ.ಮಿನಿ ಪ್ರಬಂಧ ಮಂಡಿಸಿದರು. ಕೃಷಿಕರಿಗೆ ಮಣ್ಣು ಆರೋಗ್ಯ ಕಾರ್ಡ್ ವಿತರಿಸಲಾಯಿತು. ಮಡಿಕೈ ಗ್ರಾಮಪಂಚಾಯತ್ ವ್ಯಾಪ್ತಿಯ ಅತ್ಯುತ್ತಮ ಕೃಷಿಕರಾದ ನಾರಾಯಣನ್ ನಂಬೂದಿರಿ, ರಾಘವನ್ ವೆಳಿಚ್ಚಪ್ಪಾಡ್, ಸಿ.ನಾರಾಯಣನ್, ಕೆ.ವಿ.ಶಾಂತಾ, ಟಿ.ಜನಾರ್ದನನ್, ಎ.ನಾರಾಯಣನ್ ಮೊದಲಾದವರನ್ನು, ಜಿಲ್ಲೆಯ ಅತ್ಯುತ್ತಮ ತರಕಾರಿ ಕೃಷಿಕ ಸಿ.ಬಾಲಕೃಷ್ಣನ್ ನಾಯರ್ ಅವರನ್ನು ಜಿಲ್ಲಾ ಪಂಚಾಯತ್ ಸದಸ್ಯ ಎಂ.ಕೇಳು ಪಣಿಕ್ಕರ್ ಅಭಿನಂದಿಸಿದರು. ಕಾರ್ಯಕ್ರಮ ಅಂಗವಾಗಿ ನಡೆದ ಚಿತ್ರರಚನೆ ಸ್ಪರ್ಧಾವಿಜೇತರಿಗೆ ನಂಬೀಶನ್ ವಿಜಯೇಶ್ವರಿ ಬಹುಮಾನ ವಿತರಿಸಿದರು. ಜಿಲ್ಲಾ ಮಣ್ಣು ಸಂರಕ್ಷಣೆ ಅಧಿಕಾರಿ ವಿ.ಎಂ.ಅಶೋಕ್ ಕುಮಾರ್ ಪ್ರತಿಜ್ಞಾ ಸ್ವೀಕಾರಕ್ಕೆ ನೇತೃತ್ವ ವಹಿಸಿದರು. ಮಡಿಕೈ ಗ್ರಾಮಪಂಚಾಯತ್ ಉಪಾಧ್ಯಕ್ಷೆ ಕೆ.ಪ್ರಮೀಳಾ, ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಶಶೀಂದ್ರನ್ ಮಡಿಕೈ, ಆರೋಗ್ಯ-ಶಿಕ್ಷಣ ಸ್ಥಾಯೀಸಮಿತಿ ಅಧ್ಯಕ್ಷ ಎಂ.ಅಬ್ದುಲ್ ರಹಮಾನ್, ಕಲ್ಯಾಣ ಸ್ಥಾಯೀ ಸಮಿತಿ ಅಧ್ಯಕ್ಷೆ ಸಿ.ಇಂದಿರಾ, ವಾರ್ಡ್ ಸದಸ್ಯ ವಿ.ಶಶಿ, ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ಕಾಞಂಗಾಡು ಕೃಷಿ ಸಹಾಯಕ ನಿರ್ದೇಶಕ ಅನಿಲ್ ವರ್ಗೀಸ್, ಪಿ.ಬೇಬಿ ಬಾಲಕೃಷ್ಣನ್ ಉಪಸ್ಥಿತರಿದ್ದರು. ಮಣ್ಣು ಸಮೀಕ್ಷೆ ಸಹಾಯಕ ನಿರ್ದೇಶಕ ಎನ್.ಸತ್ಯನಾರಾಯಣನ್ ಸ್ವಾಗತಿಸಿದರು.ಮಡಿಕೈ ಕೃಷಿ ಅಧಿಕಾರಿ ಕೆ.ವೇಣುಗೋಪಾಲನ್ ವಂದಿಸಿದರು. ಕಾರ್ಯಕ್ರಮ ಅಂಗವಾಗಿ ಕುಟುಂಬಶ್ರೀ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ಮಕ್ಕಳ ಚಿತ್ರಪ್ರದರ್ಶನ ಜರುಗಿತು.
ಮಣ್ಣಿನ ಮಹತ್ವ ಅರಿಯುವ ಅವಕಾಶ ಒದಗಿಸಿದ ಸಮಾರಂಭ:
ಮಣ್ಣಿನ ಮಹತ್ವ ಅರಿಯಲು,ಮಣ್ಣಿನ ಗುಣ ಅರ್ಥಮಾಡಿಕೊಳ್ಳಲು ಜಿಲ್ಲೆಯ ಮಡಿಕೈ ನಿವಾಸಿ ಕೃಷಿಕರಿಗೆ ಅವಕಾಶವೊಂದು ದೊರೆಯಿತು.
ವಿಶ್ವ ಮಣ್ಣು ಸಂರಕ್ಷಣೆ ದಿನಾಚರಣೆ ಅಂಗವಾಗಿ ಮಣ್ಣು ಸಂರಕ್ಷಣೆ ಇಲಾಖೆ, ಕೃಷಿ ಅಭಿವೃದ್ಧಿ ಮತ್ತು ಕೃಷಿಕ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಮಡಿಕೈ ಗ್ರಾಮಪಂಚಾಯತ್ ಆವರಣದಲ್ಲಿ ಬುಧವಾರ ನಡೆದ ವಿಚಾರಸಂಕಿರಣ ಇದಕ್ಕೆ ವೇದಿಕೆಯಾಯಿತು.
"ಮಣ್ಣಿನ ಆರೋಗ್ಯ ಪಾಲನೆ","ಮಣ್ಣು-ಜಲ ಸಂರಕ್ಷಣೆ" ಇತ್ಯಾದಿ ವಿಷಯಗಳಲ್ಲಿ ಕೃಷಿ ಸಹಾಯಕ ನಿರ್ದೇಶಕಿ ಆರ್.ವೀಣಾರಾಣಿ, ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಕೆ.ಪಿ.ಮಿನಿ ಪ್ರಬಂಧ ಮಂಡಿಸಿದ್ದು, ಕೃಷಿ ಕುರಿತು ಆಸಕ್ತಿಹೊಂದಿದವರಿಗೆ ಅನೇಕ ವಿಚಾರಗಳನ್ನು ಹಂಚಿದರು.
ಆರಂಭದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಪ್ರಕೃತಿಯ ಶೋಷಣೆ ಕುರಿತು ಮಾತನಾಡಿದ ಅವರು, ಕೇರಳ ಅತ್ಯಧಿಕ ಮಳೆ ಲಭಿಸುವ ರಾಜ್ಯ ಎಂಬ ಭಾವನೆ ಹರಡಿಕೊಂಡಿದ್ದರೂ, ಅದರ ಸದುಪಯೋಗ ನಡೆಯುತ್ತಿಲ್ಲ ಎಂದು ಪರಿಣತರು ಕಳಕಳಿ ವ್ಯಕ್ತಪಡಿಸಿದರು. 3 ಸಾವಿರ ಮಿಮೀ ಮಳೆ ಲಭ್ಯವಿದ್ದರೂ ಅದನ್ನು ಸಂಗ್ರಹಿಸಿ ಬಳಕೆಮಾಡುವ ಸೌಲಭ್ಯ ನಮಗಿಲ್ಲದಿರುವುದು ದುರಂತ ಎಂದು ಹೇಳಿದರು. ರಾಜ್ಯದ ಭತ್ತದ ಗದ್ದೆಗಳು ಜಲಸಂರಕ್ಷಣೆಯ ಭಂಡಾಗಾರವೇ ಆಗಿದ್ದುವು. ಆದರೆ 30 ವರ್ಷಗಳ ಅವಧಿಯಲ್ಲಿ 9 ಲಕ್ಷ ಹೆಕ್ಟೇರ್ ಭತ್ತದ ಗದ್ದೆ ಇದ್ದುದು ಇಂದು 2.75 ಲಕ್ಷ ಹೆಕ್ಟೇರ್ ಆಗಿ ಇಳಿಮುಖವಾಗಿದೆ. ಈ ಮೂಲಕ ಕೇರಳ ಭತ್ತದ ಕೃಷಿ ಮಾತ್ರವಲ್ಲ, ಪರಂಪರಾಗತ ಜಲಸಂಗ್ರಹಾಗಾರಗಳನ್ನೂ ನಷ್ಟಮಾಡಿಕೊಂಡಿದೆ ಎಂದವರು ಅಭಿಪ್ರಾಯಪಟ್ಟರು. ಅವೈಜ್ಞಾನಿಕ ಮರಳು ಹೂಳೆತ್ತುವಿಕೆಯೂ ನದಿನೀರಿನ ಪ್ರಮಾಣ ಕಡಿಮೆಯಾಗುವುದಕ್ಕೆ ಕಾರಣವಾಗುತ್ತಿದೆ ಎಂದವರು ಕಳಕಳಿ ವ್ಯಕ್ತಪಡಿಸಿದರು.
ಇಂದಿಗೂ ಕಾಲ ಮಿಂಚಿಲ್ಲ ಎಂಬ ಸದಾಶಯ ವ್ಯಕ್ತಪಡಿಸಿದ ಸಂಪನ್ಮೂಲ ವ್ಯಕ್ತಿಗಳು ಮಳೆ ನೀರು ಸಂಗ್ರಹಕ್ಕೆ ಆದ್ಯತೆ ನೀಡಬೇಕು ಎಂದು ವಿವರಿಸಿದರು. ಮನೆ ಮನೆಗಳಲ್ಲಿ ಈ ಕುರಿತು ಜಾಗೃತಿ ಮೂಡಬೇಕು. ಜಲಾಶಯಗಳನ್ನು ಪುನಶ್ಚೇತನಗೊಳಿಸುವ, ಬಾವಿಗಳನ್ನು ದುರಸ್ತಿಗೊಳಿಸುವ, ಮಳೆ ನೀರು ಸಂಗ್ರಹಕ್ಕೆ ಕಂದಕ ನಿರ್ಮಾಣ ಮಾಡುವ ಮೂಲಕ ಜಲಸಂರಕ್ಷಣೆ ನಡೆಸಬೇಕು ಎಂಬ ವಿಚಾರಕ್ಕೆ ಒತ್ತು ನೀಡಿ ಅವರು ಮಾಹಿತಿ ನೀಡಿದರು.