ನವದೆಹಲಿ: 2019ರ ವಿಶ್ವಕಪ್ ಗೆ ಇನ್ನು ಕೆಲ ತಿಂಗಳುಗಳಷ್ಟೇ ಬಾಕಿಯಿದ್ದು ಟ್ರೋಫಿ ಗೆಲ್ಲಲು ಎಲ್ಲಾ ತಂಡಗಳು ಸರ್ವ ಪ್ರಯತ್ನಗಳನ್ನು ನಡೆಸುತ್ತಿವೆ. ಈ ಮಧ್ಯೆ ಭಾರತಕ್ಕೆ ಕ್ರಿಕೆಟ್ ವಿಶ್ವಕಪ್ ಟ್ರೋಫಿ ಬಂದಿದೆ.
ಮುಂದಿನ ವರ್ಷ ಇಂಗ್ಲೆಂಡ್ ನಲ್ಲಿ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂನರ್ಿ ನಡೆಯಲಿದ್ದು ಈ ಪ್ರಯುಕ್ತ ವಿಶ್ವಕಪ್ ಆಡಲಿರುವ ದೇಶಗಳಲ್ಲಿ ಟ್ರೋಫಿಯ ಪ್ರದರ್ಶನ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ವಿಶ್ವಕಪ್ ಟ್ರೋಫಿ ಭಾರತಕ್ಕೆ ಬಂದಿದ್ದು ದೇಶದ 9 ಮಹಾನಗರಗಳಲ್ಲಿ ಟ್ರೋಫಿ ಅನಾವರಣ ಮಾಡಲಾಗುತ್ತದೆ.
ರಾಷ್ಟ್ರ ರಾಜಧಾನಿ ದೆಹಲಿ, ಸಿಲಿಕಾನ್ ಸಿಟಿ ಬೆಂಗಳೂರು, ಮುಂಬೈ ಹಾಗೂ ಕೊಲ್ಕತ್ತಾಗಳಲ್ಲಿ ಮೊದಲಿಗೆ ಟ್ರೋಫಿಯನ್ನು ಪ್ರದರ್ಶನ ಮಾಡಲಾಗುತ್ತದೆ. ಡಿಸೆಂಬರ್ 8ರಂದು ಬೆಂಗಳೂರಿನ ಕೋರಮಂಗಲದ ಹೊಸೂರು ರಸ್ತೆಯಲ್ಲಿರುವ ಫೋರಂ ಮಾಲ್ ನಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತದೆ.
ಇಂದು ಮುಂಬೈನ ವೆಸ್ಟ್ ಮಲಾಡದ ಇನ್ಫಿನಿಟಿ ಮಾಲ್ ನಲ್ಲಿ ಪ್ರದರ್ಶನಕ್ಕೆ ಅಣಿ ಮಾಡಲಾಗಿದೆ. ನಂತರ ಡಿಸೆಂಬರ್ 15ರಂದು ಕೋಲ್ಕತ್ತಾದಲ್ಲಿ ನಂತರ ಡಿಸೆಂಬರ್ 23ರಂದು ಕೊನೆಯ ಬಾರಿಗೆ ದೆಹಲಿಯಲ್ಲಿ ಟ್ರೋಫಿ ಪ್ರದರ್ಶನ ನಡೆಯಲಿದೆ.
ಮುಂದಿನ ವರ್ಷ ಮೇ 30 ರಿಂದ ಜುಲೈ 14ರವರೆಗೆ ಇಂಗ್ಲೆಂಡ್ ನಲ್ಲಿ ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್ ಟೂನರ್ಿ ನಡೆಯಲಿದೆ.