ನಾಡಿನ ನಲುಮೆಯ ದ್ವಿದಿನ ಶಿಬಿರ
0
ಡಿಸೆಂಬರ್ 04, 2018
ಮುಳ್ಳೇರಿಯ: ಇರಿಯಣ್ಣಿ ಜಿವಿಎಚ್‍ಎಸ್ ಶಾಲೆಯ ಹೈಯರ್ ಸೆಕೆಂಡರೀ ವಿಭಾಗದ ಎನ್‍ಎಸ್‍ಎಸ್ ಆಶ್ರಯದಲ್ಲಿ ನಾಡಿನ ನಲುಮೆ ಎಂಬ ದ್ವಿದಿನ ಶಿಬಿರವು ನಡೆಯಿತು.
ಶಾಲೆಯಲ್ಲಿ ನಡೆದ ಶಿಬಿರದಲ್ಲಿ ಮಕ್ಕಳ ಸೇವೆಯ ಸನ್ನದ್ಧತೆ, ಕೆಲಸದಲ್ಲಿರುವ ಉತ್ಸಾಹ, ಸ್ವಾವಲಂಬಿ ಗುಣ ಮೊದಲಾದ ಜೀವನ ಮೌಲ್ಯಗಳನ್ನು ತಿಳಿದುಕೊಳ್ಳಲು ಸಮಗ್ರ ಆರೋಗ್ಯ-ಶುಚಿತ್ವ-ವಿದ್ಯಾಭ್ಯಾಸ ಸರ್ವೆ, ಶಾಲೆ, ಪೇಟೆ ಶುಚೀಕರಣ, ಮಾಲಿನ್ಯ ಸಂಸ್ಕರಣಾ ಕಾರ್ಯಕ್ರಮ, ಕಸಪೊರಕೆ, ಪೇಪರ್ ಪೆನ್ನು, ಸಾಬೂನು ತಯಾರಿ, ಉಚಿತ ಹೋಮಿಯೋ ವೈದ್ಯಕೀಯ ಶಿಬಿರ, ಮಧುಮೇಹ ರೋಗ ತಪಾಸಣೆ, ತರಕಾರಿ ತೋಟ, ಹೂತೋಟ ಪರಿಪಾಲನೆ ಮೊದಲಾದ ಕಾರ್ಯಕ್ರಮಗಳು ಈ ಶಿಬಿರದಲ್ಲಿ ಹಮ್ಮಿಕೊಳ್ಳಲಾಯಿತು. ತರಗತಿ ಕೋಣೆ, ಪರಿಸರವನ್ನು ಶುಚಿಗೊಳಿಸಲು ಕಸಪೊರಕೆ ತಯಾರಿ ಗಮನ ಸೆಳೆಯಿತು.
ಕೇರಳ ಗ್ರಾಮೀಣ ಬ್ಯಾಂಕ್ ಬೋವಿಕ್ಕಾನ ಶಾಖೆಯು ಕೊಡುಗೆಯಾಗಿ ನೀಡಿದ ನಾಲ್ಕು ಕಸ ಸಂಗ್ರಹ ತೊಟ್ಟಿಗಳನ್ನು ಉಪಯೋಗಿಸಿ ಜೈವ-ಅಜೈವ ಮಾಲಿನ್ಯಗಳನ್ನು ಪ್ರತ್ಯೇಕಿಸಿ ಶೇಖರಿಸಲು ಸೌಕರ್ಯ ಲಭಿಸಿತು. ಎನ್ ಎಸ್ ಎಸ್ ಮಕ್ಕಳು ತಯಾರಿಸಿದ ಅಕ್ಕಿ, ತರಕಾರಿಗಳನ್ನೇ ಶಿಬಿರದಲ್ಲಿ ಉಪಯೋಗಿಸಲಾಯಿತು. ಶಿಬಿರವನ್ನು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಎ.ಪಿ.ಉಷಾ ಉದ್ಘಾಟಿಸಿದರು. ಮುಳಿಯಾರು ಗ್ರಾಮ ಪಂಚಾಯಿತಿ ಸದಸ್ಯ ಕೆ.ಸುರೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಯೋಜನಾ ಅಧಿಕಾರಿ ಸಜೀವನ್ ಶಿಬಿರದ ಬಗ್ಗೆ ಮಾಹಿತಿ ನೀಡಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಚೆರಿಯೋನ್, ಸುಗತ, ಶಶಿಧರನ್, ಚಂದ್ರನ್ ಉಪಸ್ಥಿತರಿದ್ದರು.
ಪ್ರಾಂಶುಪಾಲ ವಿ.ವಿ.ಶಶಿ ಸ್ವಾಗತಿಸಿ, ಸ್ವಯಂಸೇವಕ ನಾಯಕಿ ಶ್ರೀನಿಕಾ.ಪಿ ವಂದಿಸಿದರು.