ಐತಿಹಾಸಿಕ ಅರಿಬೈಲು ಶ್ರೀನಾಗಬ್ರಹ್ಮ ಕಂಬಳ ಇಂದು
0
ಡಿಸೆಂಬರ್ 03, 2018
ಮಂಜೇಶ್ವರ: ಗಡಿನಾಡಿನ ಏಕೈಕ ದೇವರ ಕಂಬಳವೆಂದೇ ಪ್ರಸಿದ್ದಿ ಪಡೆದಿರುವ ಅರಿಬೈಲು ಶ್ರೀನಾಗಬ್ರಹ್ಮ ಕಂಬಳ ಇಂದು(ಮಂಗಳವಾರ) ಸಾಂಪ್ರದಾಯಿಕ ಶ್ರದ್ದಾ ಭಕ್ತಿಗಳೊಂದಿಗೆ ನಡೆಯಲಿದೆ.
ವಿಶೇಷ-ಇತಿಹಾಸ:
ರಾಷ್ಟ್ರೀಯ ಹೆದ್ದಾರಿ ಮಂಜೇಶ್ವರ ಹೊಸಂಗಡಿಯಿಂದ ಅನತಿ ದೂರದ ಕಡಂಬಾರ್ ಸಮೀಪ ತುಳುನಾಡಿನ ಐತಿಹಾಸಿಕ ಅರಿಬೈಲು ನಾಗಬ್ರಹ್ಮ ಕ್ಷೇತ್ರವಿದೆ. ಅನಾದಿ ಕಾಲದಿಂದಲೂ ಇಲ್ಲಿಯ ಶ್ರೀನಾಗಬ್ರಹ್ಮ ಕಾರಣಿಕ ಶಕ್ತಿಯಾಗಿ ಭಕ್ತರ ನೋವು-ನಲಿವುಗಳಿಗೆ ಸ್ಪಂದಿಸುತ್ತ ಸಕಲ ಇಷ್ಟಾರ್ಥವನ್ನು ಪೂರೈಸುವ ಶಕ್ತಿಯಾಗಿ ಗುರುತಿಸಲ್ಪಟ್ಟಿದೆ.
ಶ್ರೀನಾಗಬ್ರಹ್ಮ ಹುತ್ತ ರೂಪದಲ್ಲಿ ಇಲ್ಲಿ ಪೂಜಿಸಲ್ಪಡುತ್ತಿರುವುದು ವಿಶೇಷ.
ಕಂಬಳ ಮಹತ್ವ:
ಶ್ರೀನಾಗಬ್ರಹ್ಮ ಕ್ಷೇತ್ರ ಹಾಗೂ ಇಲ್ಲಿಯ ಕಂಬಳ ಚಾರಿತ್ರಿಕ ಮಹತ್ವ ಪಡೆದಿರಿವಂತದ್ದು. ತೌಳವ ಮಾಸದ ಜಾರ್ದೆ 18ನೇ ದಿನ ಇಲ್ಲಿನಾಗಬ್ರಹ್ಮ ದೇವರ ಕಂಬಳ ಶ್ರದ್ದಾ ಭಕ್ತಿಯಿಂದ ನಡೆಯುತ್ತಿದೆ.
ಕಂಬಳದ ಮೂರು ದಿನಗಳ ಮೊದಲು ಎಂದರೆ ಜಾರ್ದೆ 15ನೇ ದಿನ ಶ್ರೀಕ್ಷೇತ್ರದ ಸಮೀಪದ ವಿಶಾಲ ಅರಿಬೈಲು ಗದ್ದೆಯನ್ನು ಉಳಲಾಗುತ್ತದೆ. ಬಳಿಕ 17ನೇ ದಿನದ ವರೆಗೆ ಯಾರೂ ಗದ್ದೆಗಿಳಿಯುವುದಿಲ್ಲ. 17ನೇ ದಿನ ರಾತ್ರಿ ಕಂಬಳ ಗದ್ದೆಯ ಸುತ್ತಲೂ ಜೇಡಿ ಮಣ್ಣನ್ನು ಹರಡಲಾಗುತ್ತದೆ. ಇದನ್ನು ನಿಶಾನೆ ಎಂದು ಕರೆಯುತ್ತಾರೆ. ಅದೇ ದಿನ ರಾತ್ರಿ ಈ ಪ್ರದೇಶದ ಕೋವಿ ಜನಾಂಗ(ಕೋವಿಲ ಎಂಬ ಹಿಂದುಳಿದ ವರ್ಗ)ದವರು ಎತ್ತುಗಳನ್ನು ಕಂಬಳ ಗದ್ದೆಗೆ ಇಳಿಸಿ ಮೂರು ಸುತ್ತು ಬರುವ ಪರಿಪಾಠ ಇಲ್ಲಿಯದು. ಬಳಿಕ ಶ್ರೀಕ್ಷೇತ್ರದ ಅರ್ಚಕರು(ಪ್ರಸ್ತುತ ರಾಧಾಕೃಷ್ಣ ಅರಿನಾಯ) ಹೂ ಹಿಂಗಾರಗಳನ್ನು ದೈವದ ಬಳಿ ಅರ್ಚಿಸಿ ಕಂಬಳ ಗದ್ದೆಯ ತೆಂಕು ಭಾಗದಲ್ಲಿರುವ ಪ್ರಾಕೃತಿಕ ಗುಂಡಿಯೊಂದರಲ್ಲಿ ಕಾರ್ಗತ್ತಲಲ್ಲಿ ತೆರಳಿ ಸಮರ್ಪಿಸುತ್ತಾರೆ. ಒಂದಾಳು ಆಳದ ಈ ವಿಶೇಷ ಗುಂಡಿಯಲ್ಲಿ ಯಾವ ಕಾಲದಲ್ಲೂ ಆರದ ನೀರು ಪ್ರವಹಿಸುತ್ತಿದೆ ಎಂಬುದು ವಿಶೇಷ.
ಬಳಿಕ ಗದ್ದೆ ಕೋರುವ ಕಾರ್ಯಕ್ರಮ ನೆರವೇರುತ್ತದೆ. ಬಳಿಕ ಜಾರ್ದೆ 18 ರಂದು(ಇಂದು) ಮಧ್ಯಾಹ್ನ ವಿಶೇಷ ಪೂಜಾದಿಗಳು ಶ್ರೀನಾಗಬ್ರಹ್ಮನಿಗೆ ಸಲ್ಲಿಕೆಯಾಗುತ್ತದೆ. ಅಪರಾಹ್ನ 2ರ ಬಳಿಕ ಒಂದು ಜೊತೆ ಉಪವಾಸದ ಕೋಣಗಳು ಕಂಬಳದಗದ್ದೆಗೆ ಇಳಿಯುವ ಮೂಲಕ ಕಂಬಳ ಚಾಲನೆಗೊಳ್ಳುತ್ತದೆ. ಪರಂಪರೆಯಂತೆ ವರ್ಕಾಡಿ ನಡಿಬೈಲು ಮನೆತನದ ಕೋಣಗಳು ಮೊದಲು ನೀರಿಗಿಳಿಯುತ್ತದೆ. ಬಳಿಕ ನಾಡಿನ ಉದ್ದಗಲದಿಂದ ಬಂದ ಜೋಡಿ ಕಂಬಳ ಕೋಣಗಳು ಸಂಜೆ 6ರ ವರೆಗೆ ಕಂಬಳದಲ್ಲಿ ಭಾಗವಹಿಸುತ್ತವೆ.
ಬಳಿಕ ಉಪವಾಸದ ಕೋಣಗಳು ಗದ್ದೆಯ ಮೇಲೇರುತ್ತದೆ. ಅದು ಗದ್ದೆಗೆ ಮೂರು ಸುತ್ತುಬಂದು ಕರಿನೀರು ಹಾಕುವುದರೊಂದಿಗೆ ಕಂಬಳ ಸಮಾರೋಪಗೊಳ್ಳುತ್ತದೆ. ಬಳಿಕ ಪೂಕರೆ (ಕಂಗು ಹೂಗಳ ವಿಶೇಷ ಶೃಂಗಾರ) ಹಾಕಿ ರಾತ್ರಿ ಪೂಜೆ, ಶ್ರೀನಾಗಬ್ರಹ್ಮ ಉತ್ಸವಗಳೊಂದಿಗೆ ಕಂಬಳ ಸಮಾರೋಪಗೊಳ್ಳುತ್ತದೆ.
ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಗಳಿಂದ ವಿಶೇಷ ಆಸಕ್ತಿಯಿರುವ ನಾಗಬ್ರಹ್ಮ ಭಕ್ತರು ಪಾಲ್ಗೊಳ್ಳುವುದು ಇಲ್ಲಿಯ ವಿಶೇಷತೆಯಾಗಿದೆ.
ಆಧುನಿಕ ಬದುಕು, ಜೀವನಪದ್ದತಿಗಳ ಮಧ್ಯೆಯೂ ತುಳುನಾಡಿನ ಸಾಂಪ್ರದಾಯಿಕ ಕೃಷಿ ಜೀವನದ ಅಂಗವಾಗಿ ಮೂಡಿಬಂದಿರುವ ಕಂಬಳಗಳು ಇಂದು ವಿರಳವಾಗುತ್ತಿರುವಾಗ ಅರಿಬೈಲು ಕಂಬಳ ಸಂಸ್ಕøತಿ-ಜಾನಪದಾಚರಣೆಯ ಮೂಲಕ ಇನ್ನೂ ಜೀವಂತವಾಗಿರುವುದು ಈ ತಲೆಮಾರಿನ ಸೌಭಾಗ್ಯವೆಂದೇ ಬಿಂಬಿತವಾಗಿದೆ.
ಕಾರ್ಯಕ್ರಮಗಳು:
ಕಡಂಬಾರು ಅರಿಬೈಲು ಶ್ರೀ ನಾಗಬ್ರಹ್ಮ ಯುವಕ ಮಂಡಲದ 36 ನೇ ವಾರ್ಷಿಕೋತ್ಸವ ಇಂದು(ಡಿ.4) ವಿವಿಧ ಕಾರ್ಯಕ್ರಮಗಳೊಂದಿಗೆ ಅರಿಬೈಲು ಕಂಬಳಗದ್ದೆ ಸಮೀಪ ನಡೆಯಲಿದೆ.
ರಾತ್ರಿ 8 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿಶ್ವ ಹಿಂದು ಪರಿಷತ್ ಮಾತೃ ಶಕ್ತಿ ಮಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷೆ ಮೀರಾ ಆಳ್ವ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟ ಅರವಿಂದ್ ಬೋಳಾರ, ಸುದೇಶ್ ಕುಮಾರ್ ರೈ ಬಿ, ಪುರುಷೋತ್ತಮ್ ಕೆ.ಭಂಡಾರಿ, ಅಶ್ವಥ್ ಪೂಜಾರಿ ಲಾಲ್‍ಬಾಗ್, ವಿಕ್ರಮದತ್ತ ಭಾಗವಹಿಸುವರು.
ಕೃಷ್ಣ ಶೆಟ್ಟಿ ಅರಿಬೈಲು, ವಿಶ್ವನಾಥ ಶೆಟ್ಟಿ ಅರಿಬೈಲು ಹೊಸಮನೆ ಉಪಸ್ಥಿತರಿರುವರು. ಹಿರಿಯ ಕೃಷಿ ಕಾರ್ಮಿಕರಾದ ಕಲ್ಯಾಣಿ ಅರಿಬೈಲು, ಮುಂಡಿ ಅರಿಬೈಲು ಅವರನ್ನು ಸಮ್ಮಾನಿಸಲಾಗುವುದು.
ರಾತ್ರಿ 10.30 ರಿಂದ ಮ್ಯೂಸಿಕಲ್ ನೈಟ್, ವಿಭಿನ್ನ ನೃತ್ಯ ಕಾರ್ಯಕ್ರಮ ಜರಗಲಿದೆ. ಅಪರಾಹ್ನ 2 ಕ್ಕೆ ಅರಿಬೈಲು ಕಂಬಳ, ಸಂಜೆ 6 ಕ್ಕೆ ಯಕ್ಷ-ಗಾನ-ವೈಭವ, ರಾತ್ರಿ 10 ಕ್ಕೆ ನಾಗಬ್ರಹ್ಮ ದೇವರ ಮಹಾಪೂಜೆ ನಡೆಯಲಿದೆ.
ಏನಂತಾರೆ:
ಗಡಿನಾಡಿಗೊಳಪಟ್ಟ ಅಚ್ಚ ತುಳುವ ನಾಡಾದ ಅರಿಬೈಲು ಶ್ರೀಕ್ಷೇತ್ರದ ಶ್ರೀನಾಗಬ್ರಹ್ಮ ದೇವರು ಕಾರಣಿಕ ಶಕ್ತಿಯ ಮೂಲಕ ಪ್ರಸಿದ್ದವಾದ ಕ್ಷೇತ್ರ. ಜೊತೆಗೆ ಇಲ್ಲಿಯ ಕಂಬಳವೂ ವಿಶಿಷ್ಟವಾಗಿ ಪ್ರಾಚೀನ ಕಾಲದಿಂದಲೂ ನಡೆದುಬರುತ್ತಿದೆ. ನಾಡಿನ ಉದ್ದಗಲದಿಂದ ಆಗಮಿಸುವ ಹಲವಾರು ಕೋಣಗಳು ಪಾಲ್ಗೊಳ್ಳುತ್ತಿರುವುದು ಹೆಮ್ಮೆಯಾಗಿದೆ. ಆರಾಧನಾ ಕಲೆಯಾಗಿ ಬೆಳೆದು ಬಂದಿಲ್ಲಿಯ ಕೃಷಿ ಪ್ರಧಾನ ಬದುಕು ಪರಂಪರೆಯ ದ್ಯೋತಕವಾಗಿ ಮುಂದುವರಿಯುತ್ತಿರುವುದು ವಿಶೇಷತೆಯಾಗಿದೆ.
ಗೋಪಾಲ ಶೆಟ್ಟಿ ಅರಿಬೈಲು.
ಕ್ಷೇತ್ರದ ಮುಂದಾಳು.