ನೈಜ ಅಳತೆಯ ರೇಶನ್ ಸಾಮಗ್ರಿ ತಲುಪುತ್ತಿಲ್ಲ : ಜೋನಿ ನೆಲ್ಲೂರ್
0
ಡಿಸೆಂಬರ್ 06, 2018
ಕಾಸರಗೋಡು: ಕೇರಳದ 14,000ದಷ್ಟು ರೇಶನ್ ವ್ಯಾಪಾರಿಗಳ ವೇತನ ಪ್ಯಾಕೇಜ್ ವ್ಯವಸ್ಥೆಯನ್ನು ಜಾರಿಗೊಳಿಸಿದ ರಾಜ್ಯ ಸರಕಾರದ ಕ್ರಮವನ್ನು ಅಭಿನಂದಿಸುತ್ತಿದ್ದೇನೆ. ಆದರೆ ಇದೇ ವೇಳೆ ಪ್ರಸ್ತುತ ಪ್ಯಾಕೇಜ್‍ನಲ್ಲಿ ನಿರ್ದೇಶಿಸಿರುವ ಅಂಗಡಿಗೆ ತಲುಪುವ ರೇಶನ್ ಸಾಮಗ್ರಿಗಳ ತೂಕದಲ್ಲಿ ನೈಜ ಅಳತೆಯಿದೆಯೇ ಎಂಬುದನ್ನು ಖಾತರಿಪಡಿಸಲು ಸಂಬಂಧಪಟ್ಟವರು ಅಗತ್ಯದ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಖಿಲ ಕೇರಳ ರಿಟೈಲ್ ರೇಶನ್ ಡೀಲರ್ಸ್ ಅಸೋಸಿಯೇಶನ್‍ನ ರಾಜ್ಯ ಅಧ್ಯಕ್ಷ, ಮಾಜಿ ಶಾಸಕ ಜೋನಿ ನೆಲ್ಲೂರ್ ಸರಕಾರವನ್ನು ಆಗ್ರಹಿಸಿದ್ದಾರೆ.
ಕಾಸರಗೋಡು ಪ್ರೆಸ್‍ಕ್ಲಬ್‍ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇದಕ್ಕಾಗಿ ರಾಜ್ಯ ಸರಕಾರವು ಭಾರೀ ಮೊತ್ತವನ್ನು ಗುತ್ತಿಗೆದಾರರಿಗೆ ನೀಡುತ್ತಿದ್ದರೂ, ಗುತ್ತಿಗೆದಾರರು, ಕಾರ್ಮಿಕರು ಹಾಗೂ ಕೆಲವು ಮಂದಿ ಅ„ಕಾರಿಗಳು ಸೇರಿ ಈ ವ್ಯವಸ್ಥೆಯನ್ನು ಬುಡಮೇಲುಗೊಳಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ರೇಶನ್ ಅಂಗಡಿಗಳು ಸುಗಮವಾಗಿ ಕಾರ್ಯಾಚರಿಸಲು ಸೇಲ್ಸ್‍ಮೆನ್‍ಗಳ ಹುದ್ದೆ ಸೃಷ್ಟಿಸಬೇಕು. ಈಗ ತಾತ್ಕಾಲಿಕ ಲೈಸನ್ಸ್‍ನೊಂದಿಗೆ ರೇಶನ್ ಅಂಗಡಿ ನಡೆಸುವ ಎಲ್ಲ ರೇಶನ್ ಅಂಗಡಿಗಳನ್ನು ಖಾಯಂಗೊಳಿಸಲು ಅಗತ್ಯದ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೆ ಸರಕಾರಿ ಲಾಟರಿ ಟಿಕೆಟ್‍ಗಳನ್ನು ರೇಶನ್ ಅಂಗಡಿಗಳಲ್ಲಿ ಚಿಲ್ಲರೆ ಮಾರಾಟ ಮಾಡಬೇಕೆಂಬ ನಿರ್ದೇಶನವನ್ನು ರೇಶನ್ ಮಾಲಕರು ಅಂಗೀಕರಿಸುವುದಿಲ್ಲ ಎಂದವರು ವಿವರಿಸಿದರು.
ಸರಕಾರವು ಘೋಷಿಸಿದ ಉಚಿತ ರೇಶನ್ ಸಾಮಗ್ರಿ ವಿತರಣೆಗೆ ಸಂಬಂ„ಸಿ ಕಳೆದ ಐದು ತಿಂಗಳಿನಿಂದ ಯಾವುದೇ ಮೊತ್ತ ಲಭಿಸಿಲ್ಲ. ಆದ್ದರಿಂದ ಸರಕಾರವು ಈ ನಿಟ್ಟಿನಲ್ಲಿ ಅಗತ್ಯದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜೋನಿ ನೆಲ್ಲೂರ್ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಟಿ.ಮೊಹಮ್ಮದ್, ಅಬ್ದುಲ್ ರಹಮಾನ್, ನಟರಾಜನ್, ಸತೀಶನ್ ಮುಂತಾದವರು ಭಾಗವಹಿಸಿದ್ದರು.