ವಾರಾಣಸಿ: ರೈತರ ಆದಾಯ ದುಪ್ಪಟ್ಟುಗೊಳಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆಯ ದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರವನ್ನು ಪ್ರಧಾನಿ ನರೇಂದ್ರ ಮೋದಿ ನಿನ್ನೆ ರಾಷ್ಟ್ರಕ್ಕೆ ಸಮರ್ಪಿಸಿದರು.
ದಕ್ಷಿಣ ಏಷ್ಯಾ ಪ್ರಾದೇಶಿಕ ವಲಯದಲ್ಲಿ ಅಕ್ಕಿ ಸಂಶೋಧನಾ ಮತ್ತು ತರಬೇತಿ ನೀಡುವ ಆರನೇ ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ನಗರ ಪ್ರದೇಶಗಳಂತೆ ಗ್ರಾಮಾಂತರ ಪ್ರದೇಶಗಳಲ್ಲಿ ನೇಟ್ ವರ್ಕಿಂಗ್ ವಿಸ್ತರಣೆಯಾಗಿದೆ. ಪ್ರಸ್ತುತ 50 ಕೋಟಿ ಇಂಟರ್ ನೆಟ್ ಸಂಪರ್ಕ ಕಲ್ಪಿಸುವ ಕಾರ್ಯ ನಡೆಯುತ್ತಿದೆ. ಡಿಜಿಟಲ್ ಇಂಡಿಯಾದಿಂದ ಸಂಪರ್ಕ ವಿಸ್ತರಣೆ ಜೊತೆಗೆ ಭ್ರಷ್ಟಾಚಾರವೂ ಕಡಿಮೆಯಾಗಲಿದೆ ಎಂದು ಹೇಳಿದರು.
ಭತ್ತ ಉತ್ಪಾದನೆ, ಬೀಜದ ಗುಣಮಟ್ಟು, ಮತ್ತು ಪೌಷ್ಠಿಕಾಂಶ ವುಳ್ಳ ಅಕ್ಕಿಯ ಬಗ್ಗೆ ಸಂಶೋಧನೆ ತರಬೇತಿ ಹಾಗೂ ಸೇವೆಯನ್ನು ಈ ಕೇಂದ್ರ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೇ ರೈತರ ಆದಾಯ ಹಾಗೂ ಜ್ಞಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕೇಂದ್ರ ಕೈ ಜೋಡಿಸಲಿದೆ.
ತರಬೇತಿ, ಶಿಕ್ಷಣ ಮಾತ್ರವಲ್ಲದೇ, ಆಧುನಿಕ ತಂತ್ರಜ್ಞಾನ, ಸುಸ್ಥಿರ ಕೃಷಿಗಾಗಿ ಹೊಸ ಹೊಸ ಆವಿಷ್ಕಾರಗಳ ಬಗ್ಗೆ ಕೃಷಿ ತಜ್ಞರಿಂದ ಅರಿವು ಮೂಡಿಸಲಾಗುತ್ತದೆ. ಅಲ್ಲದೇ, ಬೆಳೆ ನಿರ್ವಹಣೆಗಾಗಿ ಪ್ರಯೋಗಾಲಯ, ಪ್ರಾತ್ಯಕ್ಷಿತೆ ಮತ್ತಿತರ ಪರೀಕ್ಷೆಯನ್ನು ನಡೆಸಲಾಗುತ್ತದೆ. ಬಡತನ, ಹಸಿವು ನಿವಾರಿಸಿ ಜನರ ಜೀವನ ಮಟ್ಟ ಉತ್ತಮಗೊಳಿಸುವುದು ಈ ಕೇಂದ್ರದ ಪ್ರಮುಖ ಉದ್ದೇಶವಾಗಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಐಆರ್ ಆರ್ ಐ ನಿರ್ದೇಶಕ ಡಾ . ಮ್ಯಾಥ್ಯೂ ಮೊರೆಲ್, ಭಾರತಕ್ಕೆ ಇದೊಂದು ಮೈಲಿಗಲಾಗಲಿದೆ. ಸುಸ್ಥಿರ ಅಭಿವೃದ್ದಿ ಸಾಧಿಸುವಲ್ಲಿ ಪ್ರಮುಖ ಕೊಡುಗೆ ನೀಡಲಿದೆ ಎಂದು ತಿಳಿಸಿದರು.