ಬದಿಯಡ್ಕ: ಜೋಡುಕಲ್ಲಿನ ಜನಾರ್ದನ ಕಲಾವೃಂದದ ಹೊಸ ಕಟ್ಟಡದ ಉದ್ಘಾಟನೆಯನ್ನು ಇಂದು ಬೆಳಿಗ್ಗೆ 10 ಕ್ಕೆ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷೆ ಟಿ.ವೆಂಕಟಲಕ್ಷ್ಮಿ ಬಸವಲಿಂಗರಾಜು ನಿರ್ವಹಿಸುವರು. ಇದರಂಗವಾಗಿ ಹಗ್ಗಜಗ್ಗಾಟ ಪ್ರೀಮಿಯರ್ ಲೀಗ್ ಸೀಸನ್ - 3 , ಸನ್ಮಾನ ಸಮಾರಂಭ, ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ಕಾಮಿಡಿ ಶೋವನ್ನು ಕ್ಲಬ್ ಪರಿಸರದಲ್ಲಿ ಆಯೋಜಿಸಲಾಗಿದೆ.
ಅಪರಾಹ್ನ 2ಕ್ಕೆ ಯಕ್ಷನಾಟ್ಯ ಗುರು ರಾಕೇಶ್ ರೈ ಅಡ್ಕ ಅವರ ನಿರ್ದೇಶನದಲ್ಲಿ ಇತ್ತೀಚೆಗೆ ಜರಗಿದ ಮಾನ್ಯ ದೇವರಕೆರೆ ಯಕ್ಷನಾಟ್ಯನಿಲಯದ ವಾರ್ಷಿಕೋತ್ಸವದ ಸಿಡಿಯನ್ನು ವೆಂಕಟಲಕ್ಷ್ಮಿ ಬಸವಲಿಂಗರಾಜು ನಾಟ್ಯನಿಲಯದಲ್ಲಿ ನಡೆಯುವ ಸಮಾರಂಭದಲ್ಲಿ ಬಿಡುಗಡೆಗೊಳಿಸುವರು. ಕಾರ್ಯಕ್ರಮದಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿಯ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಅಧ್ಯಕ್ಷತೆ ವಹಿಸುವರು. ಯಕ್ಷ ಗುರು ರಾಕೇಶ್ ರೈ ಅಡ್ಕ, ಸುಂದರ ಶೆಟ್ಟಿ ಕೊಲ್ಲಂಗಾನ, ಕೃಷ್ಣಮೂರ್ತಿ ಪುದುಕೋಳಿ, ಶ್ಯಾಮ್ ಪ್ರಸಾದ್ ಮಾನ್ಯ, ವಿಜಯ ಕುಮಾರ್ ಮಾನ್ಯ ಮುಂತಾದವರು ಉಪಸ್ಥಿತರಿರುವರು. 3 ಕ್ಕೆ ವೈಷ್ಣವಿ ನಾಟ್ಯನಿಲಯ ಪೂತ್ತೂರು ಇದರ ಬದಿಯಡ್ಕ ಶಾಖೆಯಲ್ಲಿ ಜರಗುವ ನೃತ್ಯ ಸಂಗೀತ ಮಾಹಿತಿ ಕಾರ್ಯಗಾರದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ನಾಟ್ಯ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಗಾಯಕ ವಸಂತ ಗೋಸಾಡ ಕಾರ್ಯಗಾರದ ನೇತೃತ್ವ ವಹಿಸುವರು. ಶಾಸ್ತ್ರೀಯ ನೃತ್ಯ ಸಂಸ್ಥೆ ಮಂಜೇಶ್ವರ ಇದರ ಸಾತ್ವಿಕಾ ಶಾಖೆಯ ವಿದ್ಯಾರ್ಥಿಗಳಿಂದ ನಾಟ್ಯಗುರು ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಅವರ ನಿರ್ದೇಶನದಲ್ಲಿ ನಡೆಯುವ ಶಿವಾರ್ಪಣಂ ಸಂಗೀತ ನೃತ್ಯ ಸಂಗಮ ಸಮಾರಂಭವು ಸಂಜೆ 4. 30 ಕ್ಕೆ ಮಂಜೇಶ್ವರದ ಗಿಳಿವಿಂಡು ಸಮೀಪದ ಕಲಾಸ್ಪರ್ಶಂ ಸಭಾಭವನದಲ್ಲಿ ನಡೆಯಲಿದೆ. ಸೀತಾರಾಮ ಮಾಸ್ತರ್ ಪಿಲಿಕೂಡ್ಲು ಅಧ್ಯಕ್ಷತೆಯಲ್ಲಿ ಮಂಜೇಶ್ವರ ಗ್ರಾ.ಪಂ. ಸದಸ್ಯೆ ಸುಪ್ರಿಯಾ ಶೆಣೈ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಅಧ್ಯಕ್ಷೆ ವೆಂಕಟಲಕ್ಷ್ಮಿ ಬಸವಲಿಂಗ ರಾಜು, ಕೇರಳ ಗ್ರಾಮೀಣ ಬ್ಯಾಂಕ್ ಅಧಿಕಾರಿ ಅಶೋಕ್ ನಾಯಕ್, ವೈದ್ಯಾಧಿಕಾರಿ ಡಾ.ಕೃಷ್ಣ ನಾಯಕ್ ಉಪಸ್ಥಿತರಿರುವರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.