ನವದೆಹಲಿ: ಅಯೋಧ್ಯೆ ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜನವರಿ 10 ಕ್ಕೆ ಮುಂದೂಡಿದೆ.
ರಾಮಮಂದಿರ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ದಾಖಲಾಗಿದ್ದ ಸಾರ್ವಜನವಿಕ ಹಿತಾಸಕ್ತಿಗಳ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾ. ಎಸ್ ಕೆ ಕೌಲ್ ಅವರಿರುವ ನ್ಯಾಯಪೀಠ ಅರ್ಜಿಯ ವಿಚಾರಣೆಯನ್ನು ಇಂದು ನಡೆಸಬೇಕಿತ್ತು. ಆದರೆ ಮತ್ತೆ ವಿಚಾರಣೆಯನ್ನು ಜನವರಿ 10 ಕ್ಕೆ ಮುಂದೂಡಿದೆ.
ಈ ಹಿಂದೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ತ್ವರಿತ ವಿಚಾರಣೆಗೆ ನಕಾರಾ ವ್ಯಕ್ತಪಡಿಸಿದ್ದ ಕೋರ್ಟ್, ಯಾವ ಪ್ರಕರಣಕ್ಕೆ ಎಷ್ಟು ಮಹತ್ವ ನೀಡಬೇಕು ಎಂಬುದು ನ್ಯಾಯಾಲಯಕ್ಕೆ ಗೊತ್ತು ಎಂದಿದ್ದ ಸುಪ್ರೀಂ ಕೋರ್ಟ್ ಜನವರಿ 4 ರಿಂದ ವಿಚಾರಣೆ ಮಾಡುವುದಾಗಿ ಹೇಳಿತ್ತು. ಆದರೀಗ ಮತ್ತೆ ವಿಚಾರಣೆಯನ್ನು ಮುಂದೂಡಿದೆ.
ಕಳೆದ ಅಕ್ಟೋಬರ್ ನಲ್ಲೇ ತ್ವರಿತವಾಗಿ ವಿಚಾರಣೆ ನಡೆಸುವಂತೆ ಅರ್ಜಿ ಸಲ್ಲಿಸಲಾಗಿತ್ತು. ರಾಮ ಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ಜಾರಿಗೆ ತರುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಕೇಳಿ ಬಂದಿದೆ. ಸಂಘ ಪರಿವಾರ, ಹಿಂದೂ ಸಂಘಟನೆಗಳು ಸುಗ್ರೀವಾಜ್ಞೆ ಅಥವಾ ಕಾನೂನನ್ನು ಜಾರಿಗೆ ಒತ್ತಾಯಿಸಿವೆ. 2.77 ಎಕರೆ ವಿಸ್ತೀರ್ಣದ ಭೂಮಿಯನ್ನು ಸದ್ಯಕ್ಕೆ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಹಾಗು ರಾಮ್ ಲಲ್ಲಾ ಸಮಾನಾಗಿ ಹೊಂದಿವೆ.