ನವದೆಹಲಿ: ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಬಡವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. 10 ರಷ್ಟು ಮೀಸಲಾತಿ ಒದಗಿಸುವ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲೂ ಅಂಗೀಕರಿಸಲಾಗಿದೆ.
ನಿನ್ನೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದ ಮೀಸಲಾತಿ ತಿದ್ದುಪಡಿ ಮಸೂದೆಯನ್ನು ಇಂದು ರಾಜ್ಯಸಭೆಯಲ್ಲಿ ಮಂಡಿಸಲಾಗಿತ್ತು.
ರಾಜ್ಯಸಭೆಯಲ್ಲಿ ಮೀಸಲಾತಿ ಮಸೂದೆ ಕುರಿತು ತೀವ್ರ ಚರ್ಚೆಯ ನಂತರ ವಿಧೇಯಕವನ್ನು ಮತಕ್ಕೆ ಹಾಕಲಾಯಿತು. ವಿಧೇಯಕದ ಪರವಾಗಿ 165 ಹಾಗೂ ವಿಧೇಯಕ ವಿರುದ್ಧವಾಗಿ ಕೇವಲ 7 ಮತ ಬಿದ್ದಿವೆ.
ಇದಕ್ಕೂ ಮೊದಲು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು, ಈ ಮಸೂದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರಿಯಲ್ಲಿ ಮೇಲ್ವರ್ಗದ ಬಡವರಿಗೆ ಶೇ.10 ರಷ್ಟು ಮೀಸಲಾತಿ ಒದಗಿಸಲಿದೆ ಎಂದು ಸದನಕ್ಕೆ ತಿಳಿಸಿದ್ದರು.
ಲೋಕಸಭೆ ಮತ್ತು ರಾಜ್ಯಸಭೆಯಲ್ಲೂ ಈ ವಿಧೇಯಕ ಅಂಗೀಕಾರಗೊಂಡಿದ್ದು, ರಾಷ್ಟ್ರಪತಿಗಳು ಅಂಕಿತ ಹಾಕಿದ ನಂತರ ಕಾನೂನು ನೀತಿಯಾಗಿ ರೂಪುಗೊಳ್ಳಲಿದೆ. ಈ ಮೂಲಕ ಮೇಲ್ವರ್ಗದ ಬಡವರಿಗೂ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10ರಷ್ಟು ಮೀಸಲಾತಿ ದೊರೆಯಲಿದೆ.