ನವದೆಹಲಿ: ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಬಡವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. 10 ರಷ್ಟು ಮೀಸಲಾತಿ ಒದಗಿಸುವ ತಿದ್ದುಪಡಿ ಮಸೂದೆಯನ್ನು ಮಂಗಳವಾರ ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ.
ಲೋಕಸಭೆ ಅಧಿವೇಶನದ ಕೊನೆಯ ದಿನವಾದ ನಿನ್ನೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ಥಾವರ್ ಚಂದ್ ಗೆಹ್ಲೋಟ್ ಅವರು ಮೇಲ್ವರ್ಗದ ಬಡವರಿಗೆ ಶೇ.10 ರಷ್ಟು ಮೀಸಲಾತಿ ಒದಗಿಸುವ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದರು.
ಮೀಸಲಾತಿ ಮಸೂದೆ ಕುರಿತು ತೀವ್ರ ಚರ್ಚೆಯ ನಂತರ ಮತಕ್ಕೆ ಹಾಕಲಾಯಿತು. ವಿಧೇಯಕದ ಪರವಾಗಿ 323 ಹಾಗೂ ವಿಧೇಯಕ ವಿರುದ್ಧವಾಗಿ ಕೇವಲ 3 ಮತ ಬಿದ್ದಿವೆ. ಅಚ್ಚರಿ ಎಂದರೆ ಕಾಂಗ್ರೆಸ್ ಕೂಡ ವಿಧೇಯಕ ಪರವಾಗಿ ಮತ ಚಲಾಯಿಸಿದೆ.
ಮೇಲ್ವರ್ಗದ ಬಡವರಿಗೆ ಶೇ.10 ರಷ್ಟು ಮೀಸಲಾತಿ ಮಸೂದೆ ಅಂಗೀಕಾರದೊಂದಿಗೆ ಲೋಕಸಭೆ ಅಧಿವೇಶನಕ್ಕೆ ತೆರೆ ಬಿದ್ದಿದ್ದು, ಸರ್ಕಾರ ನಾಳೆ ರಾಜ್ಯಸಭೆಯಲ್ಲಿ ಈ ವಿಧೇಯಕ ಮಂಡಿಸಲಿದೆ.
ಇದಕ್ಕೂ ಮೊದಲು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ಕಾಂಗ್ರೆಸ್ ಸೇರಿದಂತೆ ಬಹುತೇಕ ಎಲ್ಲ ಪಕ್ಷಗಳು ಆರ್ಥಿಕ ದುರ್ಬಲರಿಗೆ ಮೀಸಲು ನೀಡುವ ಇಂಗಿತ ವ್ಯಕ್ತಪಡಿಸುತ್ತ ಬಂದಿವೆ. ಈ ಹಿಂದೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಇಂತಹ ಮೀಸಲು ನೀತಿ ಅನುಷ್ಠಾನ ಯತ್ನಗಳು ನಡೆದಿದ್ದವು. ಆದರೆ ಅವು ಸಂವಿಧಾನ ತಿದ್ದುಪಡಿ ಹೊರತು ಪಡಿಸಿ, ಸಾಮಾನ್ಯ ಶಾಸನಬದ್ಧ ನಿಬಂಧನೆಗಳು ಅಥವಾ ಅಧಿಸೂಚನೆಗಳ ಮಟ್ಟಕ್ಕೆ ಸೀಮಿತಗೊಂಡಿದ್ದರಿಂದ ಉದ್ದೇಶ ಸಾಧನೆಯಲ್ಲಿ ಸೋತವು ಎಂದು ಹೇಳಿದ್ದರು.