ಬದಿಯಡ್ಕ: ಜಾಗತಿಕ ಮಟ್ಟದಲ್ಲಿ ಗಡಿನಾಡು ಕಾಸರಗೋಡನ್ನು ಗುರುತಿಸುವಂತೆ ಮಾಡಿರುವ ಹಲವು ಸಾಧನೆಗಳ ಪಟ್ಟಯಲ್ಲಿ ಕನ್ನಡಿಗರದೇ ಸಂಸ್ಥೆಯಾಗಿರುವ ಇನ್ಸಿಟ್ಯೂಟ್ ಆಫ್ ಅಪ್ಲೈಡ್ ಡರ್ಮಟೋಲಜಿ(ಐಎಡಿ) ಗಮನಾರ್ಹವಾಗಿ ತನ್ನದೇ ಕೊಡುಗೆಗಳನ್ನು ನೀಡಿ ಕೀರ್ತಿ ಶಿಖರದ ಸ್ವರ್ಣ ಸೌದವಾಗಿ ಗುರುತಿಸಲ್ಪಟ್ಟಿದೆ. ಪೈಲೇರಿಯಾಅಥವಾ ಆನೆಕಾಲು ರೋಗ ನಿಯಂತ್ರಣ-ಚಿಕಿತ್ಸೆಯಲ್ಲಿ ಜಾಗತಿಕ ಮಟ್ಟದಲ್ಲೇ ಪ್ರಪ್ರಥಮ ಬಾರಿಗೆ ಸಂಯೋಜಿತ ಚಿಕಿತ್ಸಾ ವಿಧಾನವನ್ನು ಪರಿಚಯಿಸುವುದರೊಂದಿಗೆ ಐಎಡಿಯ ಸಾಧನಾ ಪಯಣ ಮುಂದುವರಿದು ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಏಕೈಕ ಆನೆಕಾಲು ಚಿಕಿತ್ಸಾ ಕೇಂದ್ರವಾದ ಹೆಗ್ಗಳಿಕೆಗೆ ಪಾತ್ರವಾಗಿದೆ.
1998ರಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ನಿಬ್ಬೆರಗು ಮೂಡಿಸುವ ಚಿಂತನೆಗಳೊಂದಿಗೆ ಐಎಡಿ ಕಾಸರಗೋಡಿನಲ್ಲಿ ಜನ್ಮತಾಳಿತು. ಅಲೋಪತಿ, ಆಯುರ್ವೇದ, ಹೋಮಿಯೋಪತಿ ಗಳ ಮೂರು ಚಿಂತನೆಗಳನ್ನು ಬಳಸಿ, ಅದರೊಂದಿಗೆ ಯೋಗಶಾಸ್ತ್ರವನ್ನೂ ಅಳವಡಿಸಿ ವಿಶಿಷ್ಟವಾದ ಸಂಯೋಜಿತ ಚಿಕಿತ್ಸಾ ಕ್ರಮಕ್ಕೆ ರೂಪುನೀಡಲಾಗಿದೆ. ಐಎಡಿಯಲ್ಲಿ ಪ್ರಸ್ತುತ ಖ್ಯಾತ ಅಲೋಪತಿ-ಚರ್ಮರೋಗ ತಜ್ಞ ಡಾ.ಎಸ್.ಆರ್.ನರಹರಿ ಹಾಗೂ ಡಾ.ಕೆ.ಎಸ್.ಪ್ರಸನ್ನ ನರಹರಿ, ಆಯುರ್ವೇಧದಲ್ಲಿ ಡಾ.ಗುರುಪ್ರಸಾದ್ ಅಗ್ಗಿತ್ತಾಯ, ಹಾಗೂ ಡಾ.ರೂಪಾ ಕಾಮತ್ ಮತ್ತು ಹೋಮಿಯೋಪತಿ ವಿಭಾಗದಲ್ಲಿ ಡಾ.ಕೈರುಲ್ ಕುರ್ಷಿದಾ ಅವರನ್ನೊಳಗೊಂಡ ತಂಡ ನಿರಂತರ ರೋಗಿಗಳ ಶೂಶ್ರುಶೆಯಲ್ಲಿ ನಿರತರಾಗಿದ್ದಾರೆ. ಜೊತೆಗೆ ಯೋಗ ಹಾಗೂ ಪಂಚಕರ್ಮ ಚಿಕಿತ್ಸೆಗಳಲ್ಲಿ ಪರಿಣಿತ ತಂಡ ಕಾರ್ಯನಿರ್ವಹಿಸುತ್ತಿದೆ.
ಕಾಲುಗಳಿಗೆ ಹೆಚ್ಚಾಗಿ ಬಾಧಿಸುವ ಲಿಂಫೇಟಿಕ್ ಫೈಲೇರೀಯಾಸಿಸ್‍ಗೆ ಕಾಲಿನ ಗಾತ್ರ ತೀವ್ರ ಪ್ರಮಾಣದಲ್ಲಿ ಹಿಗ್ಗಿ ಅಸಹನೀಯ ನೋವು, ತೀವ್ರ ವಾಸನೆಯ ದ್ರವರೂಪದ ಕೀವಿನ ಒಸರುವಿಕೆ, ಜ್ವರ ಮೊದಲಾದವುಗಳಿಂದ ರೋಗಿ ನರಳುತ್ತಾನೆ. ಇಂತಹ ಪೈಲೇರಿಯಾಕ್ಕೆ ಐಎಡಿ ನೂರು ಶೇಕಡಾ ಗುಣಮುಖವಾದ ರೋಗಿಗಳ ದಂಡಿನೊಂದಿಗೆ ನಿಬ್ಬೆರಗುಗೊಳಿಸಿದೆ. ಇಂತಹ ನೂರಾರು ಯಶೋಗಾಥೆಗಳ ಐಎಡಿಯ ಸಾಧನಾ ಪಥ ರಾಷ್ಟ್ರಮಟ್ಟದಲ್ಲೇ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದು ಹಲವಾರು ವಿದೇಶಿ ಆರೋಗ್ಯ ವಿಜ್ಞಾನಿಗಳ ಮುಕ್ತ ಪ್ರಶಂಸೆಗೂ ಪಾತ್ರವಾಗಿರುವುದು ಇಲ್ಲಿಯ ಹೆಮ್ಮೆ. ಐಎಡಿ ಮಂಡಿಸುವ ಸಂಯೋಜಿತ ಚಿಕಿತ್ಸಾ ಕ್ರಮಕ್ಕೆ ಅಂತರಾಷ್ಟ್ರೀಯ ಕೊಕ್ರೇನ್ ಸಂಸ್ಥೆ ಪ್ರತಿಪಾದಿಸುವ ಪರಿಪೂರ್ಣ ವೈದ್ಯಕೀಯ ಚಿಕಿತ್ಸಾ ವಿಜ್ಞಾನದ ಎಲ್ಲಾ ಆಧಾರಗಳನ್ನೂ ಈ ವಿಶಿಷ್ಟ ವೈದ್ಯಪದ್ದತಿ ಒಳಗೊಂಡಿದೆ ಎಂಬುದೂ ಗಮನಾರ್ಹ. ವಿದೇಶಗಳಲ್ಲಿ ಕಳೆದ 10 ವರ್ಷಗಳಿಂದೀಚೆಗೆ ನಡೆದ ಪ್ರಮುಖ ವೈದ್ಯಕೀಯ ಸಮ್ಮೇಳನಗಳಲ್ಲಿ ಡಾ.ಎಸ್.ಆರ್ ನರಹರಿ ಸಹಿತ ಪ್ರಮುಖ ವೈದ್ಯರು ಪ್ರಬಂಧ ಮಂಡನೆ ನಡೆಸಿದ್ದಾರೆ. ಲಂಡನ್ ನಿಂದ ಪ್ರಕಟಗೊಳ್ಳುವ ಅಂತರಾಷ್ಟ್ರೀಯ ವೈದ್ಯಕೀಯ ನಿಯತಕಾಲಿಕ ಜರ್ನಲ್ ಓಫ್ ಲಿಂಪೋಡೆಮಾ ಈಗಾಗಲೇ ಮೂರುಬಾರಿ ಐಎಡಿಯ ಸಾಧನಾ ಪಥ, ಸೇವೆಗಳ ಬಗ್ಗೆ ವಿಸ್ಕøತ ವರದಿ ಪ್ರಕಟಿಸಿರುವುದು ವಿಶೇಷ. ಇಂಗ್ಲೆಂಡ್ ನ ಆಕ್ಸ್‍ಪೋರ್ಡ್ ವಿವಿಯ ಉಪನ್ಯಾಸಕ ಟೆರೆನ್ಸ್ ಜೆ. ರಯಾನ್ ಐಎಡಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. 2010ರಲ್ಲಿ ಲಕ್ನೋದಲ್ಲಿ ನಡೆದಿದ್ದ ಇಂಡಿಯನ್ ಅಸೋಸಿಯೇಶನ್ ಆಫ್ ಡರ್ಮಟಾಲಿಸ್ಟ್‍ಸ್ ಹಾಗೂ ವೆರ್ ನೆರೆಲೋಜಿಸ್ಟ್ ಮತ್ತು ಲೆಪ್ರೊಲಾಜಿಸ್ಟ್ ನ 38ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಡಾ.ಎಸ್.ಆರ್.ನರಹರಿ ಅವರು ಮಂಡಿಸಿದ್ದ ಲಿಂಫಿಡಿಮಾದಲ್ಲಿ ಇಂಟೆಗ್ರೇಟೆಡ್ ಮೇನೇಜ್‍ಮೆಂಟ್ ಪ್ರಬಂಧ ಮನ್ನಣೆಗೆ ಪಾತ್ರವಾಗಿತ್ತು. ಕಳೆದ ವರ್ಷ ಜೂ.6 ರಿಂದ ನೆದರ್‍ಲ್ಯಾಂಡ್ ನ ರೋಟರ್ ಡಾಂ ನಲ್ಲಿ ನಡೆದ ಅಂತರಾಷ್ಟ್ರೀಯ ಲಿಂಫೆಡಿಯಾ ಸಮಾವೇಶದಲ್ಲಿ ವಿಶೇಷ ಆಹ್ವಾನಿತರಾಗಿ ಐಎಡಿ ಆಯುರ್ವೇದ ವಿಭಾಗದಡಾ.ಗುರುಪ್ರಸಾದ್ ಅಗ್ಗಿತ್ತಾಯ ಪಾಲ್ಗೊಂಡು ಸೆಬ್ಯುಲೈಟಿಸ್ ಮತ್ತು ಆನೆಕಾಲು ರೋಗ ಎಂಬ ಪ್ರಬಂಧ ಮಂಡಿಸಿ ಜಗತ್ತಿನ ವೈದ್ಯಕೀಯ ಲೋಕದ ವಿಶೇಷ ಗೌರವಾಭಿನಂದನೆಗೆ ಪಾತ್ರರಾಗಿದ್ದರು.
ಆರಂಭ ಕಾಲದಲ್ಲಿ ಕಾಸರಗೋಡು ನಗರದ ಹೊಸ ಬಸ್ ನಿಲ್ದಾಣ ಸಮೀಪ ಕೋಟೆಕಣಿ ರಸ್ತೆಯಲ್ಲಿ ಕಾರ್ಯಾಚರಿಸುತ್ತಿದ್ದ ಐಎಡಿ ದಶಕಗಳ ಹಿಂದಿನ ಮಹಾಮಾರಿ ಏಡ್ಸ್ ನ ನಿಯಂತ್ರಣ ಮತ್ತು ಚಿಕಿತ್ಸೆಯಲ್ಲೂ ಜಿಲ್ಲೆಯ ಪ್ರಪ್ರಥಮ ಕೇಂದ್ರವಾಗಿ ರಾಷ್ಟ್ರಮಟ್ಟದಲ್ಲೇ ಸ್ತುತ್ಯರ್ಹ ಸೇವೆಯ ಮೂಲಕ ಗಮನ ಸೆಳೆದಿತ್ತು. ಬಳಿಕ ಇದೀಗ ಮಧೂರು ಸಮೀಪದ ಉಳಿಯತ್ತಡ್ಕದಲ್ಲಿ ವ್ಯವಸ್ಥಿತವಾದ ಸುಸಜ್ಜಿತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ.
ಪ್ರಸ್ತುತ "ಆನೆಕಾಲು ರೋಗ ಮತ್ತು ಲಿಂಪೋಡೆಮಾದ ಬಗ್ಗೆ ಖಂಡಿತಾ ಭಯ ಬೇಡ-ನಾವು ನಿಮ್ಮ ನೋವಿಗೆ ಧ್ವನಿಯಾಗಲು ಸದಾ ತತ್ಪರರಾಗಿದ್ದೇವೆ" ಎಂಬ (ನೆವರ್ ಫಿಯರ್ ಪೈಲೇರಿಯಾಸಿಸ್ ನೋರ್ ಲಿಂಪೋಡೆಮಾ-ವಿ ಕೇರ್ ಪೋರ್ ಯು) ಎಂಬ ಘೋಷವಾಕ್ಯದೊಂದಿಗೆ ರಾಷ್ಟ್ರೀಯ ಮಟ್ಟದ 9ನೇ ವಿಚಾರ ಸಂಕಿರಣ ಜ.14 ರಿಂದ 16ರ ವರೆಗೆ ಉಳಿಯತ್ತಡ್ಕದ ಐಎಡಿ ಸಭಾಂಗಣದಲ್ಲಿ ನಡೆಯಲಿದೆ.
ಜ.16 ರಂದು ಬೆಳಿಗ್ಗೆ 8 ರಿಂದ 8.30ರ ವರೆಗೆ ಆನೆಕಾಲು ರೋಗಬಾಧಿತರಾಗಿ ಐಎಡಿಯಲ್ಲಿ ಚಿಕಿತ್ಸೆಪಡೆಯುತ್ತಿರುವವರಿಂದ ಜಾಗೃತಿ ಜಾಥಾ ಉಳಿಯತ್ತಡ್ಕ ಪೇಟೆಯಲ್ಲಿ ನಡೆಯಲಿದೆ. ಐಎಡಿ ವೈದ್ಯಕೀಯ ತಂಡ, ರಾಷ್ಟ್ರೀಯ-ಅಂತರಾಷ್ಟ್ರೀಯ ವೈದ್ಯ ವಿಜ್ಞಾನಿಗಳು, ಆಹ್ವಾನಿತ ಗಣ್ಯರು, ಕೇಂದ್ರ ಸರಕಾರದ ಆಯುಷ್ ಖಾತೆಯ ಪ್ರಧಾನ ಕಾರ್ಯದರ್ಶಿ ಡಾ.ರಾಜೇಶ್ ಕೊಟೇಚ ಸಹಿತರಾದವರು ಭಾಗವಹಿಸುವರು. ಬಳಿಕ 9.30ರಿಂದ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಡಾ.ಎಸ್.ಆರ್ ನರಹರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಸ್ತುತ ಸಾಲಿನ ವಿಚಾರ ಸಂಕಿರಣದ ಘೋಷವಾಕ್ಯದ ಬಗ್ಗೆ ಮಾರ್ಗದರ್ಶಿ ದಿಕ್ಸೂಚಿ ಭಾಷಣ ಮಾಡುವರು. ಡಾ.ಟೆರೆನ್ಸ್ ಜ ರೆಯಾನ್ ಸಂಯೋಜಿತ ಚಿಕಿತ್ಸಾ ಪರಿಣಾಮದ ಬಗ್ಗೆ, ಐಎಡಿ ಸಂಯೋಜಿತ ಚಿಕಿತ್ಸಾ ಕ್ರಮದಬಗೆಗಿನ ವಿದೇಶ ದೃಷ್ಟಿಕೋನದ ಬಗ್ಗೆ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವ ಕೇಂದ್ರ ಸರಕಾರದಾಯುಷ್ ಖಾತೆ ಪ್ರಧಾನ ಕಾರ್ಯದರ್ಶಿ ಡಾ. ರಾಜೇಶ್ ಕೊಟೇಚಾ ಅವರು ಪ್ರಸ್ತುತ ಸಾಲಿನ ಘೋಷವಾಕ್ಯ ಬಿಡುಗಡೆಗೊಳಿಸಿ ಮಾತನಾಡುವರು. ಭಾರತ ಸರಕಾರದ ನಿಕಟಪೂರ್ವ ಎಥಿಕ್ ಸಮಿತಿಯ ಅಧ್ಯಕ್ಷೆ ನಂದಿನಿ ಕೆ.ಕುಮಾರ್ ಹಾಗೂ ಪ್ರೊ.ಎಂ.ಎಸ್. ಬಾಗೇಲ್ ಉಪಸ್ಥಿತರಿದ್ದು ಶುಭಹಾರೈಸುವರು. ಐಎಡಿ ನಿರ್ದೇಶಕ ಡಾ.ಟಿ.ಎ.ಬೈಲೂರು ಉಪಸ್ಥಿತರಿರುವರು.
ಅಪರಾಹ್ನ 3ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸುವರು. ಪ್ರೊ.ಟೆರೆನ್ಸ್ ಜೆ.ರೆಯಾನ್, ಲಂಡನ್‍ನ ಸೈಂಟ್ ಜಾರ್ಜ್ ವಿವಿಯ ಪ್ರೊ.ಪೀಟರ್ ಮೋರ್ಟಿಮರ್, ಜೆಎಸ್‍ಎಸ್ ಉನ್ನತ ವಿದ್ಯಾಭ್ಯಾಸ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಪ್ರೊ. ಮೃತ್ಯುಂಜಯ, ಜಪಾನಿನ ಟೋಕಿಯೋದಲ್ಲಿರುವ ಅಂತರಾಷ್ಟ್ರೀಯ ಆರೋಗ್ಯ ಮತ್ತು ವೈದ್ಯಕೀಯ ಚಿಕಿತ್ಸಾ ಕೇಂದ್ರದ ಡಾ.ರೀ ರೊಸೆಲ್ಲಿನ್ ಯೋಟ್ಸು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಸಮಾರೋಪ ಭಾಷಣ ಮಾಡುವರು. ಡಾ.ಗುರುಪ್ರಸಾದ್ ಅಗ್ಗಿತ್ತಾಯ ಉಪಸ್ಥಿತರಿರುವರು.
ವಿಚಾರ ಸಂಕಿರಣದಂಗವಾಗಿ ಜ.14 ರಿಂದ 17ರ ವರೆಗೆ ಲಿಂಪೋಡಿಮಾ ದಿನಾಚರಣೆಯ ಅಂಗವಾಗಿ ವಿಶೇಷವೈದ್ಯಕೀಯ ಶಿಬಿರ, ಸಮಾಲೋಚನೆ, ಮುಕ್ತ ಸಂವಾದಗಳನ್ನೂ ಏರ್ಪಡಿಸಲಾಗಿದೆ.