ಮುಳ್ಳೇರಿಯ: ಬಾವಿಕ್ಕೆರೆ ಸರಕಾರಿ ಎಲ್‍ಪಿ ಶಾಲೆಗೆ ಹೊಸ ಕಟ್ಟಡ ನಿರ್ಮಾಣಕ್ಕಾಗಿ 1.50 ಕೋಟಿ ರೂ. ಮಂಜೂರು ಮಾಡಿರುವುದಾಗಿ ಉದುಮ ಶಾಸಕ ಕೆ.ಕುಂಞÂರಾಮನ್ ತಿಳಿಸಿದ್ದಾರೆ. ಮುಳಿಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾವಿಕ್ಕೆರೆಯಲ್ಲಿರುವ ಈ ಎಲ್‍ಪಿ ಶಾಲೆಯ ಪ್ರಧಾನ ಕಟ್ಟಡವು ಕಳೆದ ಮಳೆಗಾಲದಲ್ಲಿ ಹಾನಿಗೊಂಡು ಅಪಾಯದ ಸ್ಥಿತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ತರಗತಿಗಳನ್ನು ಸಮೀಪದ ಮದ್ರಸಾ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು.
ಶಾಲೆಯ ಹಳೆಯ ಕಟ್ಟಡಕ್ಕೆ ಬದಲಾಗಿ ಹೊಸ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿತ್ತು. ಅಲ್ಲದೆ ಸಮಗ್ರ ಮಾಹಿತಿಯನ್ನು ಒಳಗೊಂಡ ಮನವಿಯನ್ನು ಶಿಕ್ಷಣ ಸಚಿವರಿಗೆ, ಶಾಸಕರಿಗೆ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹಾನಿಗೊಂಡ ಜಿಲ್ಲೆಯ ಏಕ ಶಾಲೆ ಎಂಬ ಮಾನದಂಡದೊಂದಿಗೆ ಕಟ್ಟಡ ನಿರ್ಮಾಣಕ್ಕೆ ಹಣ ಮಂಜೂರು ಮಾಡಲಾಗಿದೆ.
ಶಾಲೆಯಲ್ಲಿ ನಾಲ್ಕು ಡಿವಿಜನ್‍ಗಳಲ್ಲಾಗಿ ಸುಮಾರು 42 ಮಂದಿ ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಇದೀಗ ಹಾನಿಯಾದ ಕಟ್ಟಡವನ್ನು ಮುರಿದು ತೆಗೆದು ಏರು ತಗ್ಗಿನ ಸ್ಥಳವನ್ನು ಸಮತಟ್ಟುಗೊಳಿಸಿ ಆವರಣ ಗೋಡೆ, ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇದೇ ವೇಳೆ ಬಾವಿಕ್ಕೆರೆ ಸರಕಾರಿ ಶಾಲೆಯನ್ನು ಉಳಿಸಿಕೊಳ್ಳಲು ಸ್ಥಳೀಯರು ಕೂಡ ಪ್ರಯತ್ನಿಸಬೇಕೆಂದು ಶಾಸಕರು ಸಲಹೆ ನೀಡಿದ್ದಾರೆ.