ಕುಂಬಳೆ: ಆಡಿದ್ದೇ ಅಟ ಮಾಡಿದ್ದೇ ಯಕ್ಷಗಾನ ಎಂಬ ಮನೋಭಾವ ಹೊಂದಿರುವ ಅನೇಕ ಯುವ ಕಲಾವಿದರಿಗೆ ಸೂಕ್ತ ತಿಳುವಳಿಕೆ ನೀಡುವ ತರಬೇತಿಯ ಅಗತ್ಯವಿದೆ.ಆ ಕಾರ್ಯವನ್ನು ಸಿರಿಬಾಗಿಲು ಪ್ರತಿಷ್ಠಾನ ಕಳೆದ ನಾಲ್ಕೈದು ವರ್ಷಗಳಿಂದ ನಡೆಸುತ್ತಾ ಬಂದಿದೆ. ಆ ಬಗೆಗೆ ರಾಮಕೃಷ್ಣ ಮಯ್ಯ ಅವರ ಸಾಧನೆ ಶ್ಲಾಘನಾರ್ಹ ಎಂದು ಕ.ಸಾ.ಪ.ಮಾಜಿ ರಾಜ್ಯ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಅವರು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನ ಕಾಸರಗೋಡು ನಡೆಸಿಕೊಂಡು ಬರುತ್ತಿರುವ ಯಕ್ಷಗಾನ ಸರಣಿ ಕಾರ್ಯಕ್ರಮಗಳ ಅಂಗವಾಗಿ `ಯಕ್ಷ ಕಾವ್ಯಾಂತರಂಗ-2' ಹಾಗೂ `ಅರ್ಥಾಂತರಂಗ-11' ಕಾರ್ಯಕ್ರಮಗಳನ್ನು ಮೂಡಬಿದ್ರೆಯ ಅಲಂಗಾರು ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಅರ್ಚಕ ವೃಂದದವರ ಸಹಯೋಗದೊಂದಿಗೆ ಯಕ್ಷಮೇನಕಾ ಮೂಡಬಿದ್ರೆ ಸಹಕಾರದಲ್ಲಿ ಇತ್ತೀಚೆಗೆ ಜರಗಿದ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಯುವ ಕಲಾವಿದರು ಕಾರ್ಯಕ್ರಮದ ಸದುಪಯೋಗ ಪಡಿಸಿಕೊಂಡು ತಮ್ಮ ಅನುಭವ ವೃದ್ಧಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಕ್ಷೇತ್ರ ಅರ್ಚಕರಾದ ಈಶ್ವರ ಭಟ್ ಉಪಸ್ಥಿತರಿದ್ದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಗೋವರ್ಧನ ಹೊಸಮನಿ ಯಕ್ಷಗಾನಕ್ಕೆ ಅಲಂಗಾರು ದೇವಸ್ಥಾನದವರು ನೀಡುವ ಸಹಕಾರ ಕೊಡುಗೆಯನ್ನು ಸ್ಮರಿಸಿಕೊಂಡರು. ಯಕ್ಷಮೇನಕಾದ ಸಂಚಾಲಕ ನೆಲ್ಲಿಮಾರು ಸದಾಶಿವರಾವ್, ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಉಪಸ್ಥಿತರಿದ್ದರು. ಸದಾಶಿವ ಶೆಟ್ಟಿಗಾರ್ ಸ್ವಾಗತಿಸಿದರು. ಡಾ.ಶ್ರುತ ಕೀರ್ತಿರಾಜ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಖ್ಯಾತ ಪ್ರಸಂಗಕರ್ತ ಶ್ರೀಧರ ಡಿ.ಎಸ್. ಅವರ ನಿರ್ದೇಶನದಲ್ಲಿ ಯಕ್ಷ ಕಾವ್ಯಾಂತರಂಗ -2 ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಬಲಿಪ ಶಿವಶಂಕರ ಭಟ್, ದಿನೇಶ್ ಭಟ್ ಯಲ್ಲಾಪುರ ಭಾಗವಹಿಸಿದ್ದು, ಚೆಂಡೆಮದ್ದಳೆಯಲ್ಲಿ ಕೃಷ್ಣ ಪ್ರಕಾಶ ಉಳಿತ್ತಾಯ, ದಯಾನಂದ ಮಿಜಾರು, ಅವಿನಾಶ್ ಬೈಪಡಿತ್ತಾಯ ಸಹಕರಿಸಿದರು.
ಅಪರಾಹ್ನ ಹಿರಿಯ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಅವರ ನಿರ್ದೇಶನದಲ್ಲಿ `ಅರ್ಥಾಂತರಂಗ-11' ರಲ್ಲಿ `ಆಶುಸಂಭಾಷಣೆಯ ಆಯಾಮಗಳು - ಅನಿಸಿಕೆ - ಅವಲೋಕನ - ಸಂವಾದ' ಜರಗಿತು.