ನವದೆಹಲಿ: ನವೆಂಬರ್ 2016ರಲ್ಲಿ ನೋಟು ಅಮಾನ್ಯೀಕರಣದ ವೇಳೆ ಬಂದ 2 ಸಾವಿರ ರುಪಾಯಿ ನೋಟು ಮುದ್ರಿಸುವುದನ್ನು ಆರ್ ಬಿಐ ನಿಲ್ಲಿಸಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
2000 ರುಪಾಯಿ ನೋಟಿನ ಚಲಾವಣೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಈ ನೋಟಿನ ಮುದ್ರಣವನ್ನು ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎಷ್ಟು ಪ್ರಮಾಣದ ನೋಟು ಚಲಾವಣೆಯಲ್ಲಿರಬೇಕು ಎಂಬುದರ ಬಗ್ಗೆ ಆರ್ ಬಿಐ ಹಾಗೂ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತವೆ ಎಂದು ಅವರು ತಿಳಿಸಿದ್ದಾರೆ.
2016 ರಲ್ಲಿ ಕಪ್ಪುಹಣವನ್ನು ತಡೆಯುವ ಉದ್ದೇಶದೊಂದಿಗೆ ದೇಶದಲ್ಲಿ 500 ರು ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣಗೊಳಿಸಲಾಗಿತ್ತು. ಈ ವೇಳೆ ಸಾವಿರ ರು.ಗೆ ಬದಲಾಗಿ 2 ಸಾವಿರದ ನೋಟನ್ನು ಚಲಾವಣೆಗೆ ತರಲಾಗಿತ್ತು.
ನೋಟು ರದ್ದತಿ ಬಳಿಕ ಮಾರ್ಚ್?, 2018 ರವರೆಗೆ ದೇಶದಲ್ಲಿ ಒಟ್ಟು 18.03 ಲಕ್ಷ ಕೋಟಿ ರೂ. ಕರೆನ್ಸಿ ಚಲಾವಣೆಯಲ್ಲಿದ್ದು, ಇದರಲ್ಲಿ 6.73 ಲಕ್ಷ ಕೋಟಿ ರೂ. ಅಥವಾ ಶೇ.37ರಷ್ಟು 2,000 ರೂ. ನೋಟುಗಳು ಎಂಬುದು ವಿಶೇಷ. ಹಾಗೆಯೇ 7.73 ಲಕ್ಷ ಕೋಟಿ ರೂ. ಮೌಲ್ಯದ 500 ರೂ. ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದೆ.